ತೀರ್ಥಹಳ್ಳಿ : ಮದುವೆಯಾಗಿ ಮಗು ಇದ್ದರೂ ಸಹ ಮದುವೆಯಾಗಿಲ್ಲ ಎಂದು ಇನ್ನೊಂದು ಹುಡುಗಿಗೆ ನಂಬಿಸಿ ಎರಡನೇ ಮದುವೆಯಾಗಿದ್ದ ವಂಚಕನಿಗೆ ಇಲ್ಲಿನ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದೆ. ಶಿವಮೊಗ್ಗದ 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯವು ಆರೋಪಿಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಶಿವಮೊಗ್ಗ ಬೆಳ್ಳಿ ಬಂಗಾರ ಬಲು ಭಾರ! ಮತ್ತೆ ಏರಿದ ಬೆಲೆ! ಎಷ್ಟಿದೆ ನೋಡಿ ಚಿನ್ನ ಬೆಳ್ಳಿ ರೇಟು!
ಶಿಕ್ಷೆಗೆ ಒಳಗಾದ ಆರೋಪಿಯನ್ನು ತೀರ್ಥಹಳ್ಳಿ ತಾಲ್ಲೂಕಿನ ಇಂದಿರಾನಗರ ಸುರಳ್ಳಿ ಬಾಳೆಬೈಲ್ ನಿವಾಸಿ ಮಹಮ್ಮದ್ ಮುತಿಬ್ (32) ಎಂದು ಗುರುತಿಸಲಾಗಿದೆ. ಈತನಿಗೆ ಈ ಮೊದಲೇ ಮದುವೆಯಾಗಿ ಒಂದು ಹೆಣ್ಣು ಮಗು ಇತ್ತು. ಆದರೆ, ಈ ಸತ್ಯವನ್ನು ಅಡಗಿಸಿ ತನಗೆ ಮದುವೆಯಾಗಿಲ್ಲ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸಬ್ ರಿಜಿಷ್ಟ್ರ್ ಆಫಿಸ್ನಲ್ಲಿ ಎರಡನೇ ಮದುವೆಯಾಗಿದ್ದ.
ಈ ವಂಚನೆಯ ಕುರಿತು ದೂರು ದಾಖಲಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 494 (ದ್ವಿಪತ್ನಿತ್ವ) ಮತ್ತು 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾಗಿದ್ದ ಪಿಎಸ್ಐ ಶಾಂತಲಾ ಅವರು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿದ್ದರಾಜು ಎನ್.ಕೆ ಅವರು, ಆರೋಪಿ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ 3 ವರ್ಷಗಳ ಸಾಧಾರಣ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 30 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕೆಂದು ತೀರ್ಪಿನಲ್ಲಿ ತಿಳಿಸಿದ್ದಾರೆ.
Tirthahalli Man Sentenced to 3 Years Prison

