Su from so movie ಸು ಫ್ರಮ್ ಸೋ” ಈ ಸಿನಿಮಾ ನೋಡಿದ ನಂತರ ಇದನ್ನು “ಸು ಫ್ರಮ್ ಸೋ” ಅಂತ ಕರೆಯಬೇಕಾ ಅಥವಾ ಸೂಪರ್ ಫ್ರಮ್ ಸಾಲಿಡ್ ಅಂತ ಕರೆಯಬೇಕಾ ಎಂಬ ಗೊಂದಲ ಮೂಡುತ್ತದೆ. ಏಕೆಂದರೆ, ಚಿತ್ರತಂಡ ಅಷ್ಟು ಅದ್ಭುತವಾಗಿ ಈ ಕಥೆಯನ್ನು ಕಟ್ಟಿಕೊಟ್ಟಿದೆ.
ಚಿತ್ರದ ಕಥೆ ಒಂದು ಊರಿನ ಸುತ್ತ ಸುತ್ತುತ್ತದೆ. ಅಲ್ಲಿ ರವಿ ಅಣ್ಣ (ಶೆನಿಲ್ ಗೌತಮ್) ಎಂಬ ಗಾರೆ ಮೇಸ್ತ್ರಿ ಇರುತ್ತಾರೆ. ಊರಿನ ಜನರಿಗೆ ರವಿ ಅಣ್ಣ ಎಂದರೆ ಅಪಾರ ಗೌರವ. ಅವರು ಹೇಳಿದ ಮಾತನ್ನು ಯಾರೂ ಸಹ ತೆಗೆದುಹಾಕುವುದಿಲ್ಲ. ಇತ್ತ, ಅಶೋಕ (ಜೆಪಿ ತುಮಿನಾಡು) ಎಂಬ ಪೇಂಟರ್ ಇರುತ್ತಾನೆ. ಇವನಿಗೆ ರವಿ ಅಣ್ಣನ ಮೇಲೆ ಒಂದು ರೀತಿಯ ತುಂಟಾಟದ ಹೊಟ್ಟೆಕಿಚ್ಚು. ಇದರ ನಡುವೆ, ರವಿ ಅಣ್ಣನ ಗುಂಪಿನಲ್ಲಿ ಕಾಮಿಡಿಗಾಗಿಯೇ ಇರುವ ಭಾವ, ಸತೀಶ ಹಾಗೂ ಚಂದ್ರನಂತಹ ಪಾತ್ರಗಳು. ಇವರೆಲಾ ಎಲ್ಲರಿಗೂ ನಗೆ ಚಟಾಕಿ ಹರಡುತ್ತಾ, ಊರಿನಲ್ಲಿ ಎಂಜಾಯ್ ಮಾಡುತ್ತಾ ಇರುತ್ತಾರೆ. ಇವರೆಲ್ಲರ ಮಧ್ಯೆ, ಅಶೋಕನಿಗೆ ದೆವ್ವ ಹಿಡಿದಿದೆ ಎಂಬ ಸುದ್ದಿ ರವಿ ಅಣ್ಣನಿಗೆ ದೊಡ್ಡ ತಲೆಬಿಸಿಯಾಗಿ ಪರಿಣಮಿಸುತ್ತದೆ. ಅಶೋಕನಿಗೆ ನಿಜವಾಗಲೂ ದೆವ್ವ ಹಿಡಿದಿತ್ತಾ? ಅದನ್ನು ಬಿಡಿಸಲು ರವಿ ಅಣ್ಣ ಮತ್ತು ಅವರ ತಂಡ ಮಾಡಿದ ಸರ್ಕಸ್ ಎಂತಹದ್ದು ಎಂಬುದನ್ನು ನೀವು ಸಿನಿಮಾದಲ್ಲಿಯೇ ನೋಡಬೇಕು.
Su from so movie : ನಗು ಮತ್ತು ನೈಜತೆಯ ಸಂಗಮ
ದೆವ್ವ ಬರುವ ಕೆಲವೊಂದು ಸೀನ್‌ಗಳಲ್ಲಿ ಇರುವ ಕಾಮಿಡಿ ನಮ್ಮ ಹೊಟ್ಟೆ ಹುಣ್ಣಾಗುವಂತೆ ನಗಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರಕಾಶ್ ತುಮಿನಾಡು, ದೀಪಕ್ ಪೈ, ಶೆನಿಲ್ ಗೌತಮ್ ಅವರ ನಟನೆ ನಿಜಕ್ಕೂ ಅದ್ಭುತವಾಗಿದೆ. ನಮ್ಮ ಸುತ್ತಮುತ್ತಲೂ ನಡೆಯುವಂತಹ ಘಟನೆಗಳನ್ನು ನೆನಪಿಸುವಂತಹ, ನೈಜ ಕಾಮಿಡಿಗಳು ಎಲ್ಲರ ಮನಸ್ಸನ್ನು ತಟ್ಟುತ್ತವೆ. ಕ್ಲಾಸ್, ಮಾಸ್ ಸೇರಿದಂತೆ ಎಲ್ಲಾ ರೀತಿಯ ಪ್ರೇಕ್ಷಕರಿಗೂ ಇಷ್ಟವಾಗುವ, ಕುಟುಂಬ ಸಮೇತರಾಗಿ ನೋಡಬಹುದಾದ ಪಕ್ಕಾ ಪೈಸಾ ವಸೂಲ್ ಸಿನಿಮಾ ಇದಾಗಿದೆ.


Su from so movie ಕರುಣಾಕರ ಸ್ವಾಮೀಜಿಯ ಪಾತ್ರ – ಚಿತ್ರದ ಪ್ರಮುಖ ಆಕರ್ಷಣೆ
ಈ ಚಿತ್ರದಲ್ಲಿ ಎಲ್ಲರಿಗೂ ಇಷ್ಟವಾಗುವ ಮತ್ತೊಂದು ಪಾತ್ರವೆಂದರೆ, ಕರುಣಾಕರ ಸ್ವಾಮೀಜಿಯ ಪಾತ್ರ. ಈ ಪಾತ್ರದ ಪಾತ್ರಧಾರಿ ಸಿನಿಮಾದ ಪ್ರಮುಖ ಪಿಲ್ಲರ್ ಎಂದರೆ ತಪ್ಪಾಗಲಾರದು. ಅವರು ಮಾಡುವ ಕಾಮಿಡಿ, ಅವರ ಅಭಿನಯದ ಬಗ್ಗೆ ಮಾತನಾಡುವಂತೆಯೇ ಇಲ್ಲ. ಚಿತ್ರತಂಡವೇ ಆ ಪಾತ್ರಧಾರಿಯ ಗುರುತನ್ನು ಬಹಿರಂಗಪಡಿಸದ ಕಾರಣ, ನಾವು ಅದನ್ನು ಹೇಳುವುದು ಸರಿಯಲ್ಲ. ನೀವು ಅವರನ್ನು ಸಿನಿಮಾದಲ್ಲಿಯೇ ನೋಡಿ ಅವರ ಪಾತ್ರವನ್ನು ಆನಂದಿಸಬೇಕು.
Su from so movie ಜೆಪಿ ತುಮಿನಾಡು – ಭರವಸೆಯ ನಿರ್ದೇಶಕ ಮತ್ತು ನಟ
ಚಿತ್ರದ ನಿರ್ದೇಶಕರ ಬಗ್ಗೆ ಮಾತನಾಡಲೇಬೇಕು. ಜೆಪಿ ತುಮಿನಾಡು ಅವರೇ ಚಿತ್ರದ ನಿರ್ದೇಶಕರು. ಅವರು ಚಿತ್ರದಲ್ಲಿ ಅಶೋಕ ಎಂಬ ಪ್ರಮುಖ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ. ಈ ಚಿತ್ರವನ್ನು ನೋಡಿದಾಗ ಇದು ಅವರ ಮೊದಲ ಚಿತ್ರ ಎಂದು ಅನಿಸುವುದೇ ಇಲ್ಲ. ಪ್ರೇಕ್ಷಕರ ಪಲ್ಸ್ ಅನ್ನು ಚೆನ್ನಾಗಿ ಅರ್ಥಮಾಡಿಕೊಂಡು, ಕರಾವಳಿ ಭಾಗದ ನೈಜ ದೃಶ್ಯಗಳನ್ನು ಮನಸ್ಸಿಗೆ ಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಹಾಗೆಯೇ, ಅಭಿನಯದಲ್ಲೂ ಒಂದು ಕೈ ಮೇಲೆಯೇ ಎಂದು ಹೇಳಬಹುದು. ಜೆಪಿ ತುಮಿನಾಡು ಮುಂದೊಂದು ದಿನ ಭರವಸೆಯ ನಿರ್ದೇಶಕರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಚಿತ್ರಕ್ಕೆ ಯುವ ಸಂಗೀತ ನಿರ್ದೇಶಕರಾದ ಸುಮೇಧ್ ಕೆ. ಹಾಗೂ ಸಂದೀಪ್ ತುಳಸಿದಾಸ್ ಅವರು ತಮ್ಮ ಸಂಗೀತದ ಮೂಲಕ ದೃಶ್ಯಗಳಿಗೆ ಜೀವ ತುಂಬಿದ್ದಾರೆ. ಎಸ್. ಚಂದ್ರಶೇಖರನ್ ಅವರ ಛಾಯಾಗ್ರಹಣ ಸೇರಿದಂತೆ ಎಲ್ಲವೂ ಉತ್ತಮವಾಗಿದೆ. ಚಿತ್ರದಲ್ಲಿ ಬರುವ ರವಿ ಅಣ್ಣ, ಅಶೋಕ, ಸತೀಶ ಹಾಗೂ ಭಾನು ಎಂಬ ಪಾತ್ರಗಳು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ಚಿತ್ರ ಕಾಮಿಡಿಯಿಂದ ಶುರುವಾಗಿ ಭಾವನಾತ್ಮಕ ಕ್ಲೈಮ್ಯಾಕ್ಸ್ ಮೂಲಕ ಕೊನೆಯಾಗುತ್ತದೆ. ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾ, ಭಾವನಾತ್ಮಕವಾಗಿ ನಮ್ಮನ್ನು ಸೆಳೆಯುತ್ತದೆ. ಕೊನೆಯಲ್ಲಿ, ಕೊಟ್ಟಿರುವ ಹಣಕ್ಕೆ ಯಾವುದೇ ಮೋಸವಿಲ್ಲ ಎಂಬ ತೃಪ್ತ ಭಾವನೆ ನಮ್ಮಲ್ಲಿ ಮೂಡಿಸುತ್ತದೆ. ಇದೇ ಅಲ್ವ ಪ್ರೇಕ್ಷಕ ಮತ್ತು ನಿರ್ದೇಶಕ ಇಬ್ಬರಿಗೂ ಬೇಕಾಗಿದ್ದು.
