Sn channabasappa : ಶಿವಮೊಗ್ಗ : ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಜಾತಿ ಗಣತಿ ನಡೆಸುವ ಮೂಲಕ ಹಿಂದೂ ಧರ್ಮವನ್ನು ಒಡೆಯಲು ಯತ್ನಿಸುತ್ತಿದೆ. ರಾಜ್ಯದ ಜನರು ಈ ‘ಒಡೆದು ಆಳುವ’ ನೀತಿಯನ್ನು ವಿರೋಧಿಸಬೇಕು ಎಂದು ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದ್ದಾರೆ.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರ್ಕಾರ ಜಾತಿ ಗಣತಿಗೆ ಮುಂದಾಗಿದ್ದು, ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ನಡೆಸಲು ಯಾವುದೇ ಅಧಿಕಾರವಿಲ್ಲ. ಕಾನೂನುಬಾಹಿರವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಹಿಂದೂ ರಾಷ್ಟ್ರವನ್ನು ಒಡೆದ ನಂತರವೂ ಇದೇ ನೀತಿಯನ್ನು ಅನುಸರಿಸುತ್ತಿದೆ. ಜಾತಿ ಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಎಲ್ಲರೂ ‘ಹಿಂದೂ’ ಎಂದು ಬರೆಸಬೇಕು ಎಂದು ಅವರು ಮನವಿ ಮಾಡಿದರು. ಜಾತಿ ಮತ್ತು ಉಪ ಜಾತಿಯನ್ನು ಬರೆಸುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿದರು.
ಅಷ್ಟೇ ಅಲ್ಲದೆ ರಾಜ್ಯದ ವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರ ಬುಡಮೇಲು ಮಾಡಲು ಹೊರಟಿದೆ. ಇದುವರೆಗೂ ಅವರು ಮಾಡಿದ ಯಾವುದೇ ಸಮೀಕ್ಷೆಯೂ ಸರಿಯಾಗಿ ಆಗಿಲ್ಲ . ಈ ಸಮೀಕ್ಷೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದರ ನಡುವೆ ಕ್ರಿಶ್ಚಿಯನ್ ಎಂದು ಬರೆಯಲು ರಾಜ್ಯ ಸರ್ಕಾರ ಹೇಳುತ್ತಿರುವುದು ಅಕ್ಷಮ್ಯ ಅಪರಾಧ. ಮತಾಂತರಗೊಂಡವರಿಗೆ ಹಿಂದೂ ಧರ್ಮ ಏಕೆ ಬೇಕು? ಅವರಿಗೆ ಸೌಲಭ್ಯವೇಕೆ ಕೊಡಬೇಕು? ಸರ್ಕಾರದ ಈ ನಡೆ ಮತಾಂತರಕ್ಕೆ ಪ್ರೋತ್ಸಾಹ ನೀಡಿದಂತಿದೆ ಎಂದು ಅವರು ಹೇಳಿದರು.
ಸೋನಿಯಾ ಗಾಂಧಿಯನ್ನು ತೃಪ್ತಿಪಡಿಸಲು ಕಾಂಗ್ರೆಸ್ ಸರ್ಕಾರ ಈ ಕುತಂತ್ರ ನಡೆಸುತ್ತಿದೆ. ಸಂಪುಟ ಸಭೆಯಲ್ಲೂ ಈ ಬಗ್ಗೆ ದಂಗೆ ಏಳುವ ಪರಿಸ್ಥಿತಿ ಬಂದಿತ್ತು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಧರ್ಮ ವಿರೋಧಿಗಳು ಮತ್ತು ರಾಷ್ಟ್ರ ವಿರೋಧಿಗಳು. ಅವರು ಧರ್ಮವನ್ನು ಒಡೆಯುವ ಹುನ್ನಾರ ನಡೆಸುತ್ತಿದ್ದಾರೆ. ಹಿಂದೂ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಈ ಬಗ್ಗೆ ಯೋಚಿಸಬೇಕಿತ್ತು. ಎಂದರು.

