ಶಿವಮೊಗ್ಗ ಸಿಗಂದೂರು ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವು ಜನವರಿ 14 ಮತ್ತು 15 ರಂದು ಅತ್ಯಂತ ವೈಭವದಿಂದ ಜರುಗಲಿದೆ. ವಿಶೇಷವೆಂದರೆ, ಬಹುನಿರೀಕ್ಷಿತ ಸಿಗಂದೂರು ಸೇತುವೆ ಲೋಕಾರ್ಪಣೆಯಾದ ನಂತರ ನಡೆಯುತ್ತಿರುವ ಮೊದಲ ಜಾತ್ರೆ ಇದಾಗಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
Sigandur Jatre 2026 ಜನವರಿ 14: ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ
ಜಾತ್ರೆಯ ಮೊದಲ ದಿನವಾದ ಜನವರಿ 14 ರಂದು ಮುಂಜಾನೆ 4 ಗಂಟೆಯಿಂದಲೇ ದೇವಿಗೆ ಮಹಾಭಿಷೇಕ, ಆಭರಣ ಅಲಂಕಾರ, ಗೋಪೂಜೆ ಮತ್ತು ಗುರುಪೂಜೆಗಳು ನೆರವೇರಲಿವೆ. ಬೆಳಿಗ್ಗೆ 8 ಗಂಟೆಗೆ ರಥಪೂಜೆಯೊಂದಿಗೆ ರಥ ಮತ್ತು ಪಲ್ಲಕ್ಕಿ ಉತ್ಸವವು ದೇವಿಯ ಮೂಲ ಸ್ಥಾನಕ್ಕೆ ಹೊರಡಲಿದೆ. ಇದೇ ವೇಳೆ ಚಂಡಿಕಾ ಹೋಮವೂ ಆರಂಭವಾಗಲಿದೆ.
ಮಧ್ಯಾಹ್ನ ಧರ್ಮಸಭೆ ನಡೆದರೆ, ಸಂಜೆ 6 ಗಂಟೆಗೆ ಆಕರ್ಷಕ ‘ಗಂಗಾರತಿ’ ಕಾರ್ಯಕ್ರಮ ನೆರವೇರಲಿದೆ. ಸಾಂಸ್ಕೃತಿಕ ಲೋಕದ ರಸದೌತಣವಾಗಿ ಅಂದು ಸಂಜೆ 7 ಗಂಟೆಗೆ ಖ್ಯಾತ ‘ಶಿವದೂತ ಗುಳಿಗ’ ನಾಟಕ ಪ್ರದರ್ಶನ ಹಾಗೂ ಸರಿಗಮಪ ಮತ್ತು ಎದೆತುಂಬಿ ಹಾಡುವೆನು ಕಲಾವಿದರಿಂದ ‘ಗಾನ ಮಯೂರಿ’ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಜನವರಿ 15: ಯಕ್ಷಗಾನ ವೈಭವ ಮತ್ತು ದೀಪ ಪೂಜೆ
ಜಾತ್ರೆಯ ಎರಡನೇ ದಿನವಾದ ಜನವರಿ 15 ರಂದು ನವಚಂಡಿಕಾ ಹೋಮ, ಮಹಾಪೂಜೆಗಳು ಜರುಗಲಿವೆ. ಸಂಜೆ 5 ಗಂಟೆಗೆ ಶ್ರೀ ಚಕ್ರ ಸಹಿತ ದುರ್ಗಾ ದೀಪ ಪೂಜೆ ಹಾಗೂ ರಂಗಪೂಜೆ ಆಯೋಜಿಸಲಾಗಿದೆ. ರಾತ್ರಿ 7 ಗಂಟೆಯಿಂದ ಕಲಾಭಿಮಾನಿಗಳಿಗಾಗಿ ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆಯಲ್ಲಿ ಪಾವಂಜಿ ಮೇಳದವರಿಂದ ‘ದೇವಿ ಲಲಿತೋಪಖ್ಯಾನ’ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.
ಸೇತುವೆಯ ಸೌಲಭ್ಯವಿರುವುದರಿಂದ ಈ ಬಾರಿ ವಾಹನ ಸವಾರರಿಗೆ ಹಾಗೂ ಭಕ್ತರಿಗೆ ದರ್ಶನ ಸುಲಭವಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ವಿನಂತಿಸಿದೆ.
