ಕಬಾಬ್ ಪೀಸ್ ತಿನ್ನುವ ನಾಯಿಗಳೇ ಹೆಚ್ಚು ಕೆರಳುವುದು ಏಕೆ..?

Malenadu Today

shivamogga street dog problem ಬೀದಿನಾಯಿಗಳಿಗೆ ಆಸರೆಯಾದ ಚಿಕನ್ ಕಬಾಬ್ ಸೆಂಟರ್ ಗಳು

ಜನರಿಗೆ ಮುಳುವಾದ ಬೀದಿನಾಯಿಗಳು

shivamogga street dog problem
shivamogga street dog problem

ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿಯಾದ ನಂತರ ಅಗಲವಾದ ಫುಟ್ ಪಾತ್ ಗಳು ಬೀದಿಬದಿ ವ್ಯಾಪಾರಿಗಳಿಗೆ ಸ್ವರ್ಗತಾಣವಾಗಿದೆ. ಬದುಕಿಗಾಗಿ ಬೀದಿಬದಿ ವ್ಯಾಪಾರಿಗಳು ಅಲ್ಲಿ ನೆಲೆಕಂಡುಕೊಂಡಿರುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ವ್ಯಾಪಾರದ ಹಂತದಲ್ಲಿ ತಾವು ತೆಗೆದುಕೊಳ್ಳಬೇಕಾದ ವೈಜ್ಞಾನಿಕ ಕ್ರಮಗಳಲ್ಲಿ ಕೆಲವು ಬೀದಿಬದಿ ವ್ಯಾಪಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಾಂಸಹಾರ ಮಾರಾಟ ಮಾಡುವ ಮಾಲೀಕರು ಚಿಕನ್ ಮತ್ತು ಮಟನ್ ಎಲಗದ ಚೂರುಗಳನ್ನು ನೇರವಾಗಿ ಬೀದಿನಾಯಿಗಳಿಗೆ ಆಹಾರ ರೂಪದಲ್ಲಿ ನೀಡುತ್ತಿದ್ದಾರೆ. ಚಿಕನ್ ಕಬಾಬ್ ಎಲಗವನ್ನು ತಿನ್ನುವ ನಾಯಿಗಳು ದಷ್ಟಪುಷ್ಟವಾಗಿ ಬೆಳೆದಿರುತ್ತವೆ. ಅದರಲ್ಲೂ ಕಬಾಬ್ ಪೀಸ್ ತಿನ್ನುವ ನಾಯಿಗಳೇ ಹೆಚ್ಚು ಕೆರಳುತ್ತಿವೆ ಎಂದು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಆದರೆ ಕಬಾಬ್ ಪುಡಿಯಲ್ಲಿ ಏನಾದರೂ ವ್ಯತ್ಯಾಸಗಳಿವೆಯಾ ಎಂಬುದರ ಬಗ್ಗೆ ಸಂಶೋಧನೆಯಾಗಬೇಕಿದೆ. ಕಬಾಬ್ ತಿನ್ನುವ ಬೀದಿನಾಯಿಗಳು ರಾತ್ರಿಯ ವೇಳೆ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ವಾಹನ ಸವಾರರ ಮೇಲೆ ಗುಂಪಾಗಿ ಎರಗುತ್ತವೆ. ಹಾಸ್ಟೆಲ್‌ಗಳು, ಬೀದಿ ಬದಿ ತಿಂಡಿಗಾಡಿಗಳು ಮತ್ತು ಇನ್ನಿತರ ಆಹಾರ ಮಳಿಗೆಗಳು ಉಳಿದ ಆಹಾರ ಪದಾರ್ಥಗಳನ್ನು ಸರಿಯಾದ ರೀತಿಯಲ್ಲಿ ವಿಲೇ ಮಾಡುತ್ತಿಲ್ಲ. ಎಲ್ಲೆಂದರಲ್ಲಿ ಆಹಾರ ತ್ಯಾಜ್ಯವನ್ನು ಎಸೆಯುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತದೆ.  ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಬೀದಿ ನಾಯಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ನಿಯಂತ್ರಣಕ್ಕೆ ಸಿಗದೆ ಹೆಚ್ಚುತ್ತಿದೆ, ಇದರಿಂದ ನಾಯಿ ಕಡಿತಕ್ಕೆ ಒಳಗಾಗುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ 70 ಸಾವಿರಕ್ಕೂ ಅಧಿಕ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ವರ್ಷದಲ್ಲಿ ಇದುವರೆಗೆ 23,540 ಜನರಿಗೆ ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷದಲ್ಲಿ ರೇಬಿಸ್ ಸೋಂಕಿನಿಂದ ನಾಲ್ಕು ಸಾವುಗಳು ಸಹ ಸಂಭವಿಸಿವೆ.

shivamogga street dog problem
shivamogga street dog problem

ಜಿಲ್ಲೆಯಲ್ಲಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿವೆ. ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗಳನ್ನು (ಎಬಿಸಿ – ಅನಿಮಲ್ ಬರ್ತ್ ಕಂಟ್ರೋಲ್) ನಡೆಸುತ್ತಿದ್ದರೂ, ಬೀದಿ ನಾಯಿಗಳ ಸಂಖ್ಯೆ ಕಡಿಮೆಯಾಗುವ ಬದಲು ಹೆಚ್ಚುತ್ತಲೇ ಇದೆ.

ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಕಳೆದ ವರ್ಷ ನಾಯಿ ಕಡಿತದಿಂದ ರೇಬಿಸ್ ಉಂಟಾಗಿ ಇಬ್ಬರು ಸಾವನ್ನಪ್ಪಿದ್ದರಾರೆ. ಬೆಕ್ಕು ಪರಚಿದ್ದ ಗಾಯಕ್ಕೆ ಸೂಕ್ತ ಚಿಕಿತ್ಸೆ ಪಡೆಯದೆ ನಿರ್ಲಕ್ಷ್ಯ ಮಾಡಿದ ಪರಿಣಾಮವಾಗಿ ಇಬ್ಬರು ರೇಬಿಸ್‌ಗೆ ಬಲಿಯಾಗಿದ್ದಾರೆ.

ರೇಬಿಸ್ ಲಸಿಕೆ ಉಚಿತ ಲಭ್ಯ/shivamogga street dog problem

ಶಿವಮೊಗ್ಗದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜ್ ನಾಯ್ಕ ಅವರು ತಿಳಿಸಿದಂತೆ, ಕಳೆದ ವರ್ಷ ರೇಬಿಸ್‌ನಿಂದ ನಾಲ್ವರು ಮೃತಪಟ್ಟಿದ್ದಾರೆ. ಜಿಲ್ಲೆಯಾದ್ಯಂತ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು ಮತ್ತು ಮೆಗ್ಗಾನ್ ಆಸ್ಪತ್ರೆಗಳಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರಿಗೆ ಆಂಟಿ ರೇಬಿಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಡೋಸ್ ಲಸಿಕೆಗೆ ದುಬಾರಿ ವೆಚ್ಚ ತಗುಲುತ್ತದೆ. ಆರೋಗ್ಯ ಇಲಾಖೆಯು ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ರೇಬಿಸ್‌ಗೆ ಸಂಬಂಧಿಸಿದ ಔಷಧಗಳ ಕೊರತೆಯಾಗದಂತೆ ನಿಗಾವಹಿಸುತ್ತಿದೆ. ನಾಯಿ ಕಡಿತದ ಪ್ರಕರಣಗಳು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದರೆ, ನ್ಯಾಷನಲ್ ರೇಬಿಸ್ ಕಂಟ್ರೋಲ್ ಪ್ರೋಗ್ರಾಂನ ಅಡಿಯಲ್ಲಿ ಆ ಮಾಹಿತಿಯನ್ನು ಜಿಲ್ಲಾ ಕಣ್ಣಾವಲು ಘಟಕಗಳಿಗೆ ವರದಿ ಮಾಡುವುದು ಕಡ್ಡಾಯವಾಗಿದೆ ಎಂದು ಹಿರಿಯ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಇದರ ಜೊತೆಗೆ, ನಾಯಿಗಳನ್ನು ಸಾಕುವವರು ಮತ್ತು ಅವುಗಳನ್ನು ನಿರ್ವಹಣೆ ಮಾಡುವವರು ಅಥವಾ ಹಿಡಿಯುವವರು ಮುನ್ನೆಚ್ಚರಿಕೆ ಕ್ರಮವಾಗಿ ಮೂರು ಡೋಸ್ ಚುಚ್ಚುಮದ್ದನ್ನು ತೆಗೆದುಕೊಳ್ಳುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ.

mad dog attack
mad dog attack

ಜಿಲ್ಲಾಧಿಕಾರಿಯಿಂದ ಸಮಿತಿ ರಚನೆ/ shivamogga street dog problem

ಬೀದಿ ನಾಯಿಗಳ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ಸುಪ್ರೀಂ ಕೋರ್ಟ್‌ನ ಸೂಚನೆ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಜಿಲ್ಲಾ ಸಮಿತಿಯನ್ನು ರಚಿಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ಮಹಾನಗರ ಪಾಲಿಕೆ ಮಟ್ಟದವರೆಗೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಕುರಿತು ಸಭೆ ನಡೆಸಿ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬೀದಿಬದಿ ವ್ಯಾಪಾರಸ್ಥರಿಗೆ ಆಹಾರ ನಿರ್ವಹಣೆಯ ಸೂಕ್ತ ಮಾಹಿತಿ ನೀಡಿ,ಅದನ್ನು ನಿರ್ವಹಣೆ ಮಾಡುವ ಜವಬ್ದಾರಿಯನ್ನು ಅವರಿಗೆ ವಹಿಸಬೇಕಿದೆ. ಬೀದಿನಾಯಿ ಹಾವಳಿಗೆ ಬೀದಿಬದಿ ವ್ಯಾಪಾರಿಗಳೇ ಕಾರಣ ಎಂದು ತಕ್ಷಣಕ್ಕೆ ಅವರ ಬದುಕಿನ ಮೇಲೆ ಕೊಡಲಿಪೆಟ್ಟು ಕೊಡಲು ಹೋಗಬಾರದು. ವ್ಯಾಪಾರಸ್ಥರಿಗೆ ಜಿಲ್ಲಾಡಳಿತ ಸೂಕ್ತ ಮಾರ್ಗದರ್ಶನ ನೀಡಬೇಕಿದೆ.

shivamogga street dog problem

Share This Article