ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 25 2025 : ಶಿವಮೊಗ್ಗದಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದ ಇವತ್ತಿನ ಚಟ್ಪಟ್ ನ್ಯೂಸ್
ನಿವೃತ್ತ ಉದ್ಯೋಗಿಗೆ ಡಿಜಿಟಲ್ ಅರೆಸ್ಟ್
ವಾಟ್ಸಾಪ್ನಲ್ಲಿ ವಿಡಿಯೋ ಕರೆ ಮಾಡಿದ ವ್ಯಕ್ತಿಯೊಬ್ಬ ಶಿವಮೊಗ್ಗದ ನಿವೃತ್ತ ಉದ್ಯೋಗಿಯೊಬ್ಬರಿಂದ 19 ಲಕ್ಷ ವಂಚಿಸಿದ್ದಾರೆ. ವಾಟ್ಸಾಪ್ ಕರೆ ಮಾಡಿದ ವ್ಯಕ್ತಿ ತಾನು ಮುಂಬೈನ ಕೊಲಾಬಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿಖಾವತ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಕೇಸ್ವೊಂದರ ಬಗ್ಗೆ ಮಾತನಾಡುತ್ತಾ ನಿಮ್ಮನ್ನು ಕೂಡಲೇ ಬಂಧಿಸಬೇಕಾಗುತ್ತದೆ ಎಂದು ಬೆದರಿಸಿದ್ದಾನೆ. ಬಳಿಕ ಮರುದಿನ ಮತ್ತೆ ವಿಡಿಯೋ ಕರೆ ಮಾಡಿದ ವಂಚಕರು, ನ್ಯಾಯಾಲಯದಲ್ಲಿ ನಿಮಗೆ ಜಾಮೀನು ಕೊಡಿಸುವುದಾಗಿ ನಂಬಿಸಿ, ನ್ಯಾಯಾಧೀಶರು ಎಂದು ವ್ಯಕ್ತಿಯೊಬ್ಬನನ್ನ ತೋರಿಸಿದ್ದಾರೆ. ಆ ಬಳಿಕ 19 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ. ಈ ಸಂಬಂಧ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಚಾಲನೆ ವೇಳೆಯೇ ಹೃದಯಾಘಾತ, ಚಾಲಕ ಸಾವು
ಶಿವಮೊಗ್ಗದ ಪೊಲೀಸ್ ಚೌಕಿ ಬಳಿ ಕಾರು ಚಾಲನೆ ಮಾಡುತ್ತಿದ್ದಾಗಲೇ ಚಾಲಕರೊಬ್ಬರಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಹುಡ್ಕೊ ಕಾಲೋನಿ ನಿವಾಸಿ 45 ವರ್ಷದ ಮಲ್ಲಿಕಾರ್ಜುನ್ ಮೃತ ಕಾರು ಚಾಲಕ . ನಗರದ ವಿನೋಬನಗರ ಪೊಲೀಸ್ ಚೌಕಿ ಬಳಿ ಕಾರು ಚಾಲನೆ ಮಾಡುವಾಗ ಮಲ್ಲಿಕಾರ್ಜುನ್ ಗೆ ಎದೆ ನೋವು ಕಾಣಿಸಿಕೊಂಡಿದೆ. ಕಾರಿನಲ್ಲೇ ಅವರು ಕುಸಿದುಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುತ್ತಿರುವ ವೇಳೆ ಅವರು ಸಾವನ್ನಪ್ಪಿದ್ದಾರೆ.
ಕುಡಿದು ಹಸುವನ್ನ ತೋಟಕ್ಕೆ ಬಿಟ್ಟು ಹೊಡೆದ ದಾಖಲಾಯ್ತು ದೂರು
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಕುಡಿದು ಟೈಟಾಗಿ, ತನ್ನ ಹಸುಗಳನ್ನ ಬೇರೆಯವರ ತೋಟಕ್ಕೆ ಬಿಟ್ಟಿದ್ದಾನೆ. ಇದರಿಂದ ಸಮಸ್ಯೆಗೆ ಒಳಗಾದ ತೋಟದ ಮಾಲೀಕರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಹಸುವಿನ ಮಾಲೀಕನಿಗೆ ವಾರ್ನಿಂಗ್ ಕೊಟ್ಟು ಪ್ರಕರಣವನ್ನು ಇತ್ಯರ್ಥ ಪಡಿಸಿದ್ದಾರೆ.
