Shivamogga Krishi Mela 2025 : ಶಿವಮೊಗ್ಗ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು (ಕೃಷಿ ವಿವಿ) ‘ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ’ ಎಂಬ ಘೋಷವಾಕ್ಯದಡಿ ನವೆಂಬರ್ 07 ರಿಂದ 10 ರವರೆಗೆ ನವುಲೆಯ ಕೃಷಿ ವಿವಿ ಆವರಣದಲ್ಲಿ ಬೃಹತ್ ಕೃಷಿ ಮತ್ತು ತೋಟಗಾರಿಕೆ ಮೇಳವನ್ನು ಆಯೋಜಿಸಿದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಆರ್.ಸಿ. ಜಗದೀಶ್ ಅವರು ಪ್ರಕಟಿಸಿದರು.
ಕೃಷಿ ವಿವಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಡಾ. ಜಗದೀಶ್ ಅವರು, ಈ ನಾಲ್ಕು ದಿನಗಳ ಮೇಳದಲ್ಲಿ ಕೃಷಿ ಮತ್ತು ತೋಟಗಾರಿಕೆ ವಸ್ತು ಪ್ರದರ್ಶನ, ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪ್ರಾತ್ಯಕ್ಷಿಕೆಗಳು, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಕೃಷಿ ಪರಿಕರಗಳ ಉತ್ಪಾದನಾ ಘಟಕಗಳನ್ನು ಏರ್ಪಡಿಸಲಾಗಿದೆ. ಇದರ ಜೊತೆಗೆ, ವಿಜ್ಞಾನಿಗಳು ಮತ್ತು ರೈತರೊಂದಿಗೆ ಸಂವಾದ ಕಾರ್ಯಕ್ರಮಗಳು ಹಾಗೂ ವಿಚಾರಗೋಷ್ಠಿಗಳನ್ನೂ ಸಹ ಹಮ್ಮಿಕೊಳ್ಳಲಾಗಿದೆ ಎಂದರು. ಮೇಳದಲ್ಲಿ ಪ್ರಮುಖ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು, ಸಸಿಗಳು ಮತ್ತು ತಳಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ತಂತ್ರಜ್ಞಾನ ಉದ್ಯಾನವನ, ಸಮಗ್ರ ಕೃಷಿ ಪದ್ಧತಿ, ಸಂರಕ್ಷಿತ ಕೃಷಿ, ಸಿರಿಧಾನ್ಯಗಳ ಮಹತ್ವ ಮತ್ತು ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡುವ ಕಾರ್ಯಕ್ರಮಗಳು ರೈತರ ಮನಮುಟ್ಟುವಂತೆ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
Shivamogga Krishi Mela 2025 ಅನೇಕ ವಿಶೇಷತೆಗಳೊಂದಿಗೆ ಆಯೋಜಿಸಲಾಗಿರುವ ಈ ಕೃಷಿಮೇಳದಲ್ಲಿ, ತಂತ್ರಜ್ಞಾನ ಉದ್ಯಾನವನವು ಪ್ರಮುಖ ಆಕರ್ಷಣೆಯಾಗಿದ್ದು, ಇಲ್ಲಿ ವಿವಿಧ ಬೆಳೆಗಳ ನವೀನ ತಂತ್ರಜ್ಞಾನಗಳನ್ನು ರೈತರಿಗೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಸಮಗ್ರ ಕೃಷಿ ಪದ್ಧತಿ, ಸಂರಕ್ಷಿತ ಕೃಷಿ, ಪುಷ್ಪ ಕೃಷಿ, ತಾರಸಿ ತೋಟ, ಲಂಬ ತೋಟ, ಜೇನು ಸಾಕಾಣಿಕೆ, ಕೀಟ ಪ್ರಪಂಚ, ಗೋಡಂಬಿ ಬೆಳೆ ಪ್ರಾತ್ಯಕ್ಷಿಕೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಹಾಗೂ ಸಾವಯವ ಕೃಷಿ ಕುರಿತ ಮಾಹಿತಿ ಲಭ್ಯವಿರಲಿದೆ. ಜೊತೆಗೆ, ಪಶುಸಂಗೋಪನೆ, ಮೀನುಗಾರಿಕೆ ತಂತ್ರಜ್ಞಾನಗಳು, ಕೊಯ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ಮಾಹಿತಿ ಇರುತ್ತದೆ. ಮೇಳದಲ್ಲಿ ಗಣನೀಯ ಸಾಧನೆ ಮಾಡಿದ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕರು ಮತ್ತು ಕೃಷಿಕ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು.
ಕೃಷಿ ವಿವಿಯ ಸಾಧನೆಗಳನ್ನು ವಿವರಿಸಿದ ಕುಲಪತಿಗಳು, ವಿಶ್ವವಿದ್ಯಾಲಯದ ಸಂಘಟಿತ ಪ್ರಯತ್ನಗಳ ಫಲವಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ನೀಡುವ 25ಕ್ಕೂ ಹೆಚ್ಚು ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ವರ್ಷ ದಕ್ಷಿಣ ಭಾರತದ ಪ್ರಪ್ರಥಮ ಬಾರಿಗೆ ‘ಸಹ್ಯಾದ್ರಿ ಸಿಂಧೂರ’ ಎಂಬ ಸಣ್ಣ ಕೆಂಪಕ್ಕಿ ಭತ್ತದ ತಳಿಯನ್ನು ಬಿಡುಗಡೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಅಲ್ಲದೆ, ಗುಡ್ಡಗಾಡು ಪ್ರದೇಶಕ್ಕೆ ಕೆಹೆಚ್ಪಿ-11 ಭತ್ತದ ತಳಿ ಹಾಗೂ ಕೆಎಂಆರ್ 630 ರಾಗಿ ತಳಿ ಮತ್ತು ಸಹ್ಯಾದ್ರಿ ಪ್ರಗತಿ ಎಂಬ ಕಡಲೆ ತಳಿಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿದೆ. ವಿವಿಧ ವಿಸ್ತರಣೆ ಚಟುವಟಿಕೆಗಳ ಮೂಲಕ ಇಲ್ಲಿಯವರೆಗೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿನ 7 ಜಿಲ್ಲೆಗಳಲ್ಲಿ 4 ಲಕ್ಷ ರೈತರಿಗೆ ತಾಂತ್ರಿಕ ಮಾಹಿತಿಯನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಮೇಳವನ್ನು ನವೆಂಬರ್ 07ರಂದು ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಉದ್ಘಾಟಿಸುವರು. ಈ ಸಂದರ್ಭದಲ್ಲಿ ರಾಜ್ಯ ಶಾಲಾ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ತಾಂತ್ರಿಕ ಕೈಪಿಡಿಗಳನ್ನು ಬಿಡುಗಡೆಗೊಳಿಸುವರು ಮತ್ತು ಗಣಿ, ಭೂ ವಿಜ್ಞಾನ ಮತುತರ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ತಂತ್ರಜ್ಞಾನ ಉದ್ಯಾನವನ ಉದ್ಘಾಟಿಸುವರು. ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗಣ್ಯರು ಭಾಗವಹಿಸಲಿರುವರು. ರೈತ ಬಾಂಧವರು ಈ ಮೇಳಕ್ಕೆ ಆಗಮಿಸಿ, ಹೊಸ ತಂತ್ರಜ್ಞಾನಗಳ ಪ್ರಯೋಜನ ಪಡೆಯಬೇಕೆಂದು ಕುಲಪತಿಗಳು ಮನವಿ ಮಾಡಿದ್ದಾರೆ.
Shivamogga Krishi Mela 2025

 
