ಮುಗಿಲು ಮುಟ್ಟಿದ ಪುರದಾಳು ಗ್ರಾಮಸ್ಥರ ಆಕ್ರೋಶ : ಬೆಳೆ ಸುರಿದು ಪ್ರತಿಭಟನೆ : ಕಾರಣವೇನು 

prathapa thirthahalli
Prathapa thirthahalli - content producer

Shivamogga Farmers Protest  ಶಿವಮೊಗ್ಗ : ಕಾಡಾನೆಗಳ ನಿರಂತರ ದಾಳಿಯಿಂದಾಗಿ ಬೆಳೆ ಹಾನಿ ಅನುಭವಿಸಿದ ರೈತರ ಆಕ್ರೋಶವು ಶಿವಮೊಗ್ಗದ ವನ್ಯಜೀವಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ (ಡಿಸಿಎಫ್) ಕಚೇರಿ ಆವರಣದಲ್ಲಿ ಇಂದು ಮುಗಿಲು ಮುಟ್ಟಿತ್ತು. ಆನೆಗಳಿಂದ ಹಾನಿಗೊಳಗಾದ ಭತ್ತದ ಸಸಿ, ಅಡಿಕೆ, ಬಾಳೆ ಮತ್ತು ಕಬ್ಬಿನ ಬೆಳೆಗಳನ್ನು ತಂದು ಕಚೇರಿ ಎದುರು ಸುರಿದು, ರೈತರು ರಾಜ್ಯ ಸರ್ಕಾರ ಹಾಗೂ ಅರಣ್ಯ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

Shivamogga Farmers Protest  ಡಿಸಿಎಫ್ ಕಚೇರಿ ಎದುರು ರೈತರ ಆಕ್ರೋಶ

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಪುರದಾಳು ಗ್ರಾಮದ ಸುತ್ತಮುತ್ತ ಹಲವು ದಿನಗಳಿಂದ ಕಾಡಾನೆಗಳ ಹಿಂಡು ರೈತರ ಹೊಲ, ಗದ್ದೆಗಳ ಮೇಲೆ ದಾಳಿ ನಡೆಸುತ್ತಿವೆ. ನಾಟಿ ಮಾಡಿದ್ದ ಭತ್ತದ ಗದ್ದೆ, ಅಡಿಕೆ ಸಸಿ, ಫಸಲಿಗೆ ಬಂದಿದ್ದ ಬಾಳೆ ಹಾಗೂ ಮೆಕ್ಕೆಜೋಳವನ್ನು ನಾಶ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಆನೆಗಳು ಗ್ರಾಮದ ಒಳಗೂ ಲಗ್ಗೆ ಇಡಲು ಪ್ರಾರಂಭಿಸಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣಕ್ಕೆ ಕಾಡಾನೆಗಳನ್ನು ಸೆರೆಹಿಡಿಯಬೇಕು ಇಲ್ಲವೇ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಅವರು ಆಗ್ರಹಿಸಿದರು.ಪುರದಾಳು ಗ್ರಾಮದ ಮೇಲಿನ ಪುರದಾಳ, ಬೇಳೂರು, ಕೌಲಾಪುರ ಸೇರಿದಂತೆ ಹಲವು ಕಡೆ ಕಾಡಾನೆಗಳು ದಿನನಿತ್ಯ ರೈತರ ಹೊಲಗಳಿಗೆ ದಾಳಿ ನಡೆಸುತ್ತಿವೆ. ಫಸಲಿಗೆ ಬಂದ ಬೆಳೆಯನ್ನು ಕಾಡಾನೆಗಳು ಹಾನಿ ಮಾಡುತ್ತಿರುವುದರಿಂದ ರೈತರು ಲಕ್ಷಾಂತರ ರೂಪಾಯಿಗಳ ಬೆಳೆ ನಷ್ಟ ಅನುಭವಿಸುವಂತಾಗಿದೆ. ಕೆಲವು ತಿಂಗಳ ಹಿಂದೆ ಆಲದೇವರ ಹಸೂರಿನಲ್ಲಿ ಕೂಲಿಕಾರ್ಮಿಕ ಹನುಮಂತ ಎಂಬುವವರು ಆನೆ ದಾಳಿಗೆ ಒಳಗಾಗಿ ಮೃತಪಟ್ಟಿರುವ ಘಟನೆ ಇನ್ನೂ ಹಸಿರಿರುವಾಗಲೇ, ಮತ್ತೆ ಗ್ರಾಮಸ್ಥರ ಮೇಲೆ ಆನೆ ದಾಳಿ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆನೆ ಭಯದಿಂದ ಗ್ರಾಮಸ್ಥರು ಜೀವವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರು ಅನುಭವಿಸುತ್ತಿರುವ ನಿತ್ಯ ಸಮಸ್ಯೆಗಳ ಬಗ್ಗೆ ಅರಣ್ಯ ಇಲಾಖೆಯವರಿಗೆ ತಿಳಿದಿದ್ದರೂ ಕ್ರಮ ಕೈಗೊಳ್ಳದೆ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ಹೊರಹಾಕಿದರು.

Shivamogga Farmers Protest  ಶಾರದಾ ಪೂರ್ಯಾನಾಯ್ಕ್ ಪ್ರತಿಭಟನೆಯಲ್ಲಿ ಭಾಗಿ

ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿದ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಅಧಿಕಾರಿಗಳ ನೀತಿಯನ್ನು ಖಂಡಿಸಿದರು. ನಂತರ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಶಾಸಕರು, ತಕ್ಷಣ ಸಮಸ್ಯೆ ಪರಿಹಾರಕ್ಕಾಗಿ ಡಿಸಿಎಫ್ ಪ್ರಸನ್ನ ಪಟಗಾರ್ ಅವರಿಗೆ ಆಗ್ರಹಿಸಿದರು.

ಪುರದಾಳು ಗ್ರಾಮದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರು ಹೆಚ್ಚಾಗಿ ವಾಸಿಸುತ್ತಿದ್ದು, ರೈತರು ಪುನರ್ವಸತಿ ಕಲ್ಪಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಲ್ಪಸ್ವಲ್ಪ ಪ್ರಮಾಣದಲ್ಲಿ ಜಮೀನು ಸಾಗುವಳಿ ಮಾಡಿಕೊಂಡು ತೆಂಗು, ಅಡಿಕೆ, ಭತ್ತ, ಬಾಳೆ, ಜೋಳ, ಕಬ್ಬು ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ, ಕಳೆದ ಮೂರು-ನಾಲ್ಕು ವರ್ಷಗಳಿಂದ ಕಾಡಾನೆಗಳು ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ. ಆನೆಗಳು ಗ್ರಾಮದೊಳಗೆ ಮತ್ತು ಜಮೀನುಗಳಿಗೆ ನುಗ್ಗದಂತೆ ತಡೆಯಲು ಅರಣ್ಯ ಇಲಾಖೆಯವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಸಹ, ಅರಣ್ಯ ಇಲಾಖೆಯವರು ನಾಮಕಾವಸ್ಥೆಯ ಕಾರ್ಯಗಳನ್ನು ಮಾಡುತ್ತಾ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಪುರದಾಳು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪ್ರದೀಪ್ ಎಸ್. ಹೆಬ್ಬೂರು ಆಕ್ರೋಶ ವ್ಯಕ್ತಪಡಿಸಿದರು.

Shivamogga Farmers Protest  ಪ್ರತಿಭಟನಾಕಾರರು ಬಳಿಕ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದರು. ಶಾರದಾ ಪೂರ್ಯಾನಾಯ್ಕ್ ನೇತೃತ್ವದಲ್ಲಿ ಅಧಿಕಾರಿಗಳು ಸಭೆ ನಡೆಸಿ, ಆನೆ ದಾಳಿ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಪುರದಾಳು ಗ್ರಾ.ಪಂ. ಉಪಾಧ್ಯಕ್ಷ ಪ್ರದೀಪ್ ಎಸ್. ಹೆಬ್ಬೂರು, ಸದಸ್ಯರಾದ ಮಾನಸ ಹೆಬ್ಬೂರು, ಕುಸುಮಾ ಜಗದೀಶ್, ಹಾಗೂ ಗ್ರಾಮಸ್ಥರಾದ ಪ್ರಭಾಕರ್ ಸಂಪೋಡಿ, ಅಶೋಕ್, ಗೋಪಾಲ್, ಮುಕುಂದಪ್ಪ ಕಿಡದುಂಬೆ, ಮುಕುಂದ ಎಂ.ಜಿ, ಕೃಷ್ಣಮೂರ್ತಿ ಹಿಳ್ಳೋಡಿ, ನಾಗರಾಜ್, ಸುರೇಶ್ ಜಿ, ವಸಂತ ಹಿಳ್ಳೋಡಿ, ಬಸವರಾಜ್, ರವಿ ಸಂಪೋಡಿ, ಕೋದಂಡ, ಶಿವಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Shivamogga Farmers Protest 
Shivamogga Farmers Protest

 

Share This Article