Shivamogga crime news ಶಿವಮೊಗ್ಗ: ಕೋಳಿ ಫಾರಂಗೆ ಹೂಡಿಕೆ ಮಾಡಲು ಪಡೆದಿದ್ದ ಹಣವನ್ನು ವಾಪಸ್ ಕೇಳಿದ್ದ ವ್ಯಕ್ತಿಯ ಮೇಲೆ ರೌಡಿಗಳನ್ನು ಕರೆಸಿ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ಸಂಬಂಧ ಹಲ್ಲೆಗೊಳಗಾದ ವ್ಯಕ್ತಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರುದಾರರು ಹೊಳೆಹೊನ್ನೂರು ಗ್ರಾಮದವರಾಗಿದ್ದು, ಹಣ ಪಡೆದ ವ್ಯಕ್ತಿ ಸೋವಿನಕೊಪ್ಪದ ನಿವಾಸಿ. ಕೋಳಿ ಫಾರಂ ಆರಂಭಿಸಲು ನೆರವಾಗುವ ಉದ್ದೇಶದಿಂದ ದೂರುದಾರರು ಸೋವಿನಕೊಪ್ಪದ ವ್ಯಕ್ತಿಗೆ 2017 ರಲ್ಲಿ 10 ಲಕ್ಷ ಹಾಗೂ 2021 ರಲ್ಲಿ 8 ಲಕ್ಷ ಸೇರಿ ಒಟ್ಟು 18 ಲಕ್ಷ ಹಣವನ್ನು ನೀಡಿದ್ದರು.
ಹಣ ಪಡೆದ ವ್ಯಕ್ತಿ ಹಂತ ಹಂತವಾಗಿ ಹಣ ತೀರಿಸುವುದಾಗಿ ಹೇಳಿದ್ದರೂ, ಇದುವರೆಗೂ ಅಸಲು ಅಥವಾ ಬಡ್ಡಿ ಯಾವುದನ್ನೂ ಪಾವತಿಸದೆ ಸತಾಯಿಸಿದ್ದಾನೆ ಎನ್ನಲಾಗಿದೆ. ಈ ಹಿಂದೆ, ದೂರುದಾರರು ಹಣ ಕೇಳಲು ಹೋದಾಗ, ಹಣ ಪಡೆದ ವ್ಯಕ್ತಿ ರೌಡಿಗಳನ್ನು ಕರೆಸಿ ದೂರುದಾರನ ಮೇಲೆ ಹಲ್ಲೆ ನಡೆಸಿದ್ದ. ನಂತರ ಈ ವಿಚಾರ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನಕ್ಕೆ ಬಂದಿತ್ತು. ಆಗ ಹಣ ಹಿಂದಿರುಗಿಸುವುದಾಗಿ ಆತ ಒಪ್ಪಿಕೊಂಡಿದ್ದರೂ, ಇಲ್ಲಿಯವರೆಗೂ ಮರುಪಾವತಿ ಮಾಡಿರಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Shivamogga crime news ದುರ್ಗಿಗುಡಿ ಹೋಟೆಲ್ ಬಳಿ ಚಾಕು ಇರಿತ
ಅಕ್ಟೋಬರ್ 17 ರಂದು ರಾತ್ರಿ ಸಮಯದಲ್ಲಿ ದೂರುದಾರರು ಶಿವಮೊಗ್ಗ ನಗರದ ದುರ್ಗಿಗುಡಿ ಪ್ರದೇಶದ ಹೋಟೆಲ್ ಒಂದರ ಬಳಿ ಇದ್ದರು. ಆಗ ಹಣ ಪಡೆದುಕೊಂಡ ವ್ಯಕ್ತಿ ತನ್ನೊಂದಿಗೆ ಇನ್ನೂ ಇಬ್ಬರು ಅಪರಿಚಿತ ವ್ಯಕ್ತಿಗಳನ್ನು ಕರೆದುಕೊಂಡು ಬಂದಿದ್ದಾನೆ. ದೂರುದಾರರು ಆಗ ಮತ್ತೆ ಹಣ ವಾಪಸ್ ನೀಡುವಂತೆ ಕೇಳಿದಾಗ, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.ಆರೋಪಿಯ ಜೊತೆಗಿದ್ದ ಇಬ್ಬರು ವ್ಯಕ್ತಿಗಳು ದೂರುದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಹಣ ಪಡೆದ ಮುಖ್ಯ ಆರೋಪಿ ಹರಿತವಾದ ಆಯುಧದಿಂದ ದೂರುದಾರನ ಎದೆಗೆ ಚುಚ್ಚಿ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಕಲ್ಲಿನಿಂದಲೂ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

