ಶಿವಮೊಗ್ಗ : ವಿಮಾನ ನಿಲ್ದಾಣದಿಂದ ಬೆಂಗಳೂರು, ಹೈದರಾಬಾದ್, ಚೆನ್ನೈ, ಗೋವಾ ಮತ್ತು ತಿರುಪತಿ ಸೇರಿದಂತೆ ಹಲವು ನಗರಗಳಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ರಾತ್ರಿ ವೇಳೆಯಲ್ಲಿ ವಿಮಾನ ಲ್ಯಾಂಡಿಂಗ್ ಸೌಲಭ್ಯ ಮಾತ್ರ ಇಂದಿಗೂ ಕನಸಾಗಿಯೇ ಉಳಿದಿದೆ. ಚಳಿಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ದಟ್ಟ ಮಂಜು ಮತ್ತು ಮೋಡ ಕವಿದ ವಾತಾವರಣದಿಂದಾಗಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯಗಳು ಉಂಟಾಗುತ್ತಿದ್ದು, ಪ್ರಯಾಣಿಕರಿಗೆ ಆತಂಕ ಎದುರಾಗಿದೆ. ಇದೀಗ ನೈಟ್ ಲ್ಯಾಂಡಿಂಗ್ ಸಮಸ್ಯೆಯ ಕುರಿತಾಗಿ ಬಿಗ್ ಸುದ್ದಿ ದೊರೆತಿದೆ,
ಅಡಿಕೆ ಬೆಳೆಗಾರರ ಸಮಸ್ಯೆಗೆ ಸಂಸತ್ತಿನಲ್ಲಿ ಧ್ವನಿ: ಬಿ.ವೈ. ರಾಘವೇಂದ್ರ ಅವರಿಂದ ವಿಶೇಷ ಪರಿಹಾರ ಪ್ಯಾಕೇಜ್‌ಗೆ ಆಗ್ರಹ

Shivamogga Airport ಚಳಿಗಾಲದಲ್ಲಿ ಹೆಚ್ಚಿದ ಸಮಸ್ಯೆ
ಕಳೆದ ವರ್ಷದಂತೆ ಈ ವರ್ಷವೂ ಚಳಿಗಾಲ ಆರಂಭವಾಗಿದ್ದು, ಮಲೆನಾಡಿನ ಭಾಗದಲ್ಲಿ ದಟ್ಟ ಮಂಜು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಕಳೆದ ವರ್ಷ, ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಆಗಮಿಸಿದ ಕೆಲವು ವಿಮಾನಗಳು ಮಂಜಿನ ಕಾರಣದಿಂದಾಗಿ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗದೆ, ಆಕಾಶದಲ್ಲಿ ಸುತ್ತು ಹಾಕಿ ವಾಪಸ್ ತೆರಳಿದ್ದ ಉದಾಹರಣೆಗಳಿವೆ. ಇದರಿಂದ ವಿಮಾನಯಾನ ಸಂಸ್ಥೆಗಳು ಹಾರಾಟದ ಸಮಯವನ್ನು ಬೆಳಗ್ಗೆ 11 ಗಂಟೆಯ ನಂತರವೇ ನಿಗದಿಪಡಿಸಿದ್ದರೂ, ಪ್ರಯಾಣಿಕರ ಆಕ್ರೋಶ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗಿದೆ. ಈ ಸಮಸ್ಯೆಗೆ ಕಾರಣವಾಗಿರುವ ನೈಟ್ ಲ್ಯಾಂಡಿಂಗ್ ವ್ಯವಸ್ಥೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಮೂಲಗಳ ಪ್ರಕಾರ, ಈ ಸೌಲಭ್ಯ ಸಂಪೂರ್ಣಗೊಳ್ಳಲು ಇನ್ನೂ ನಾಲ್ಕರಿಂದ ಐದು ತಿಂಗಳುಗಳ ಕಾಲಾವಕಾಶ ಬೇಕಾಗಬಹುದು ಎಂದು ತಿಳಿದು ಬಂದಿದೆ.
Shivamogga Airport ಏನಿದು ನೈಟ್ ಲ್ಯಾಂಡಿಂಗ್ ವ್ಯವಸ್ಥೆ
ರಾತ್ರಿ ಅಥವಾ ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ವಿಮಾನಗಳು ಸುರಕ್ಷಿತವಾಗಿ ಇಳಿಯಲು ಡಿವಿಆರ್ (DVOR) – ಡಾಪ್ಲರ್ ವಿಹೆಚ್ಎಫ್ ಒಮ್ಮಿ-ಡೈರೆಕ್ಷನಲ್ ರೇಂಜ್ ಮತ್ತು ಸೂಕ್ತ ಗ್ರೌಂಡ್ ಲೈಟಿಂಗ್ ವ್ಯವಸ್ಥೆಗಳು ಅತ್ಯಗತ್ಯ. ಡಿವಿಆರ್ ಒಂದು ರೇಡಿಯೋ ನ್ಯಾವಿಗೇಷನ್ ವ್ಯವಸ್ಥೆಯಾಗಿದ್ದು, ಪೈಲಟ್‌ಗಳಿಗೆ ವಿಮಾನದ ನಿಖರವಾದ ಸ್ಥಾನವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ರನ್‌ವೇ ಲೈಟಿಂಗ್ ಸಿಸ್ಟಮ್‌ಗಳು, ವಾಯುಮಾರ್ಗ ಸೂಚಕ ನಕ್ಷೆಗಳು ಸೇರಿದಂತೆ ಅಗತ್ಯ ಉಪಕರಣಗಳನ್ನು ವಿಮಾನ ನಿಲ್ದಾಣದಲ್ಲಿ ಅಳವಡಿಸುವುದು ಕಡ್ಡಾಯ. ಈ ಉಪಕರಣಗಳನ್ನು ಅಳವಡಿಸಲು ರಾಜ್ಯ ಸರ್ಕಾರ 6.5 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದರೂ, ಅಳವಡಿಕೆ ಕಾರ್ಯ ಭರದಿಂದ ಸಾಗಿದ್ದರೂ, ಪೂರ್ಣಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ.
Shivamogga Airport ಕೈಗಾರಿಕಾ ವಲಯದಿಂದ ಅಸಮಾಧಾನ
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಬಿ. ಗೋಪಿನಾಥ್ ಮಾತಾನಾಡಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುತ್ತದೆಯೋ ಇಲ್ಲವೋ ಎಂಬ ಅನುಮಾನದಿಂದ ಹಲವು ಉದ್ಯಮಿಗಳು ಮತ್ತು ಪ್ರಯಾಣಿಕರು ಶಿವಮೊಗ್ಗಕ್ಕೆ ಪ್ರಯಾಣಿಸಲು ಹಿಂಜರಿಯುತ್ತಿದ್ದಾರೆ. ನೈಟ್ ಲ್ಯಾಂಡಿಂಗ್ ಉಪಕರಣ ಅಳವಡಿಕೆ ಕಾರ್ಯ ಬೇಗನೆ ಪೂರ್ಣಗೊಳ್ಳದೆ ವಿಳಂಬವಾಗುತ್ತಿರುವುದರಿಂದ ಶಿವಮೊಗ್ಗದ ವಿಮಾನ ನಿಲ್ದಾಣದ ಘನತೆಗೆ ಧಕ್ಕೆಯಾಗುತ್ತಿದೆ. ರಾಜ್ಯ ಸರ್ಕಾರ ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಒದಗಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಸಂಸದ ಬಿ.ವೈ. ರಾಘವೇಂದ್ರ ಅವರು, ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಪೂರ್ಣಗೊಂಡ ಬಳಿಕ ನವದೆಹಲಿ ಮತ್ತು ಮುಂಬೈ ಸೇರಿದಂತೆ ಪ್ರಮುಖ ನಗರಗಳೊಂದಿಗೆ ನೇರ ವಿಮಾನ ಸಂಪರ್ಕ ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದು ಈ ಹಿಂದೆ ತಿಳಿಸಿದ್ದಾರೆ. ಈ ವ್ಯವಸ್ಥೆ ಬೇಗನೆ ಪೂರ್ಣಗೊಂಡರೆ ಮಲೆನಾಡಿನಿಂದ ದೇಶದ ಇತರ ನಗರಗಳಿಗೂ ಸಂಪರ್ಕ ಸಿಗಲಿದೆ ಎಂಬ ವಿಶ್ವಾಸ ಪ್ರಯಾಣಿಕರಲ್ಲಿದೆ.
Shivamogga Airport Night Landing Facility


