Shivamogga : ಹೆಚ್ ಸಿ ಯೋಗೇಶ್ ಆರೋಪಕ್ಕೆ, ಸಿಎಸ್ ಷಡಾಕ್ಷರಿ ಸವಾಲು : ಏನಂದ್ರು
ಸಿದ್ದಗಂಗಾ ಮಠಕ್ಕೆ ಅಕ್ಕಿ ಸಮರ್ಪಣೆ ಕಾರ್ಯಕ್ರಮ ವಿಚಾರವಾಗಿ ಭಾಗಿಯಾಗಿದ್ದ ಸಭೆಗೆ ರಾಜಕೀಯ ಬಣ್ಣ ಬಳಿಯುತ್ತಿದ್ದು, ಇಂತಹ ವಿಚಾರಗಳಲ್ಲಿ ರಾಜಕೀಯ ತರುವುದು ಸರಿಯಲ್ಲ ಎಂದು ಹೆಚ್ ಸಿ ಯೋಗೇಶ್ ಆರೋಪಕ್ಕೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ತಿರುಗೇಟು ನೀಡಿದ್ದಾರೆ.
Shivamogga ಸಿ ಎಸ್ ಷಡಾಕ್ಷರಿ ಅವರು ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಿಜೆಪಿ ಸದಸ್ಯರಂತೆ ವರ್ತಿಸುತ್ತಿದ್ದಾರೆ ಎಂಬ ಯೋಗೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಷಡಾಕ್ಷರಿ, “ನಾನು ಪ್ರತಿದಿನ ಹತ್ತಾರು ಸಭೆಗಳಲ್ಲಿ ಭಾಗವಹಿಸುತ್ತೇನೆ. ಈ ಹಿಂದೆ ಕೂಡಾ ಸಿದ್ಧಗಂಗಾ ಮಠಕ್ಕೆ ಅಕ್ಕಿ ಸಮರ್ಪಣೆ ಕಾರ್ಯಕ್ರಮದ ಬಗ್ಗೆ ಸಭೆ ನಡೆಸಿದ್ದೇವೆ. ಅಲ್ಲಿ ಬಿಜೆಪಿ ಕಾರ್ಯಕರ್ತರೂ ಇದ್ದರು. ಇದಕ್ಕೆ ಯೋಗೇಶ್ ಅವರು ರಾಜಕೀಯ ಬಣ್ಣ ಬಳಿಯುತ್ತಿರುವುದು ತಪ್ಪು. ನಿನ್ನೆ ಕಾರ್ಯಕ್ರಮದ ಬಗ್ಗೆ ನಾನು ಶಾಸಕ ಸಂಗಮೇಶ್ವರ್ ಹಾಗೂ ಆಯನೂರು ಮಂಜುನಾಥ್ ಅವರನ್ನೂ ಭೇಟಿ ಮಾಡಿದ್ದೆ. ಹಾಗಾದರೆ ನಾನು ಕಾಂಗ್ರೆಸ್ ಪಕ್ಷದವನು ಎಂದು ಹೇಳುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.
ಯಾವುದೇ ರೀತಿಯ ಪ್ರಚಾರಕ್ಕಾಗಿ ಇಂತಹ ಅಪಪ್ರಚಾರ ಮಾಡಬೇಡಿ ಎಂದು ಯೋಗೇಶ್ ಅವರಿಗೆ ಸಲಹೆ ನೀಡಿದ ಷಡಾಕ್ಷರಿ, “ನಿನ್ನೆ ನಾನು ನಿಮ್ಮ ಮನೆಗೆ ಬಂದು ನಿಮ್ಮ ತಂದೆಯವರನ್ನು ಸಮರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ಆಗ ನೀವು ಈ ಬಗ್ಗೆ ನನ್ನ ಬಳಿ ಮಾತನಾಡಬಹುದಿತ್ತು. ಆಗ ಮಾತನಾಡದೆ ಈಗೇಕೆ ಮಾತನಾಡುತ್ತಿದ್ದೀರಿ?” ಎಂದು ಕೇಳಿದರು.
Shivamogga ನಾನು ಬಿಜೆಪಿ ಅಥವಾ ಸಂಸದರ ಬ್ಯಾನರ್ ಅಥವಾ ಲೋಗೋ ಕೆಳಗೆ ಸಭೆ ಮಾಡಿದ್ದರೆ ಅದರ ಫೋಟೋ ತೋರಿಸಿ. ನಾನು ಅದನ್ನು ಒಪ್ಪಿಕೊಳ್ಳುವೆ. ನಾನು ಸರ್ಕಾರಿ ನೌಕರ. ನನಗೂ ಇತಿಮಿತಿ ಗೊತ್ತಿದೆ. ಪಬ್ಲಿಸಿಟಿಗೋಸ್ಕರ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ನನ್ನಬಳಿ ಇಂತಹ ನೂರಾರು ಫೋಟೋಗಳಿವೆ, ಬೇಕಿದ್ದರೆ ಕಳುಹಿಸುತ್ತೇನೆ. ಒಂದು ವೇಳೆ ನಾನು ಬಿಜೆಪಿ ಅಥವಾ ಸಂಸದರ ಬ್ಯಾನರ್ ಅಡಿಯಲ್ಲಿ ಸಭೆ ಮಾಡಿದ್ದನ್ನು ಸಾಬೀತುಪಡಿಸಿದರೆ, ಚರ್ಚೆಗೆ ನಾನು ಸಿದ್ಧ. ಸಿದ್ಧಗಂಗಾ ಮಠದ ವಿಷಯದಲ್ಲಿ ರಾಜಕೀಯ ಮಾಡಬಾರದು” ಎಂದು ಷಡಾಕ್ಷರಿ ಹೇಳಿದರು.