ಶಿವಮೊಗ್ಗ: ಸಾರ್ವಜನಿಕರ ವಿಶ್ವಾಸದೊಂದಿಗೆ ಕೆಲಸ ಮಾಡುವುದಾಗಿ ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಭರವಸೆ ನೀಡಿದ್ದಾರೆ.
Shivamogga : ಶಿವಮೊಗ್ಗದಿಂದ ಮುಂಬೈಗೆ ಪ್ರಥಮ ಏರ್‌ಲಿಫ್ಟ್ : ಯುವತಿ ಬಗ್ಗೆ ವೈದ್ಯರು ಹೇಳಿದ್ದೇನು
ಇಂದು ನಗರದ ಪತ್ರಿಕಾ ಭವನದಲ್ಲಿ ನೂತನವಾಗಿ ನೇಮಕಗೊಂಡಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಯಾಗಿ ನಿಖಿಲ್ ಬಿ ಅವರೊಂದಿಗೆ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದರು.
ಬೆಳಗಾವಿ ಮೂಲದ ಪ್ರಭುಲಿಂಗ ಕವಲಿಕಟ್ಟಿ ಕೆಎಎಸ್ ಮತ್ತು ಐಎಎಸ್ ಎರಡರಲ್ಲೂ ಸಾಧನೆ ಮಾಡಿ, ಮಂಗಳೂರಿನಲ್ಲಿ ವೃತ್ತಿಜೀವನ ಆರಂಭಿಸಿದ ತಮ್ಮ ಅನುಭವವನ್ನು ವಿವರಿಸಿದರು. ಶಿವಮೊಗ್ಗದ ಸಮಸ್ಯೆಗಳನ್ನು ಹಂತ ಹಂತವಾಗಿ ಅರ್ಥಮಾಡಿಕೊಳ್ಳುತ್ತಿದ್ದು, ಪರಿಸರ ಸಂರಕ್ಷಣೆ ಹಾಗೂ ಯುವಜನತೆಯ ಏಳಿಗೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಶರಾವತಿ ಸಂತ್ರಸ್ತರು ಹಾಗೂ ವಿಮಾನ ನಿಲ್ದಾಣಕ್ಕೆ ಜಮೀನು ನೀಡಿದವರಿಗೆ ನ್ಯಾಯಯುತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಇದೇ ವೇಳೆ ಕೆಎಫ್‌ಡಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮಹಿಳಾ ಸುರಕ್ಷತೆಗೆ ಅಕ್ಕ ಪಡೆ, ಜಿಲ್ಲೆ ನಶಾ ಮುಕ್ತಗೊಳಿಸಲು ಎಸ್‌ಪಿ ಪಣ
ಡಿಸಿಯವರ ನಂತರ ಮಾತನಾಡಿದ ಎಸ್‌ಪಿ ಬಿ. ನಿಖಿಲ್, ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಸನ್ನದ್ಧರಾಗಿದ್ದಾರೆ ಎಂದು ತಿಳಿಸಿದರು. ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಜಿಲ್ಲೆಯಲ್ಲಿ ವಿಶೇಷವಾಗಿ ಅಕ್ಕ ಪಡೆಗೆ ಚಾಲನೆ ನೀಡುವುದಾಗಿ ಹೇಳಿದರು. ಗೃಹರಕ್ಷಕ ದಳದ ಸಿಬ್ಬಂದಿಯನ್ನು ಒಳಗೊಂಡ ಈ ವಿಶೇಷ ಪಡೆಯು ಹೈಸ್ಕೂಲ್ ಮತ್ತು ಕಾಲೇಜುಗಳ ಬಳಿ ನಿರಂತರ ನಿಗಾ ವಹಿಸಲಿದ್ದು, ಪೋಕ್ಸೋ ಪ್ರಕರಣಗಳನ್ನು ತಡೆಯುವುದು ಈ ಪಡೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಶಿವಮೊಗ್ಗವನ್ನು ಸಂಪೂರ್ಣವಾಗಿ ನಶೆ ಮುಕ್ತ ಮಾಡುವುದೇ ಇಲಾಖೆಯ ಮುಖ್ಯ ಗುರಿ. ಇದಕ್ಕಾಗಿ ಸಾರ್ವಜನಿಕರಿಗೆ ಪೊಲೀಸರು ಸುಲಭವಾಗಿ ಲಭ್ಯವಾಗುವಂತೆ ಹೊಸ ಕಾರ್ಯಕ್ರಮವೊಂದನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು. ಸುಳ್ಳು ಸುದ್ದಿಗಳ ಹರಡುವಿಕೆಯನ್ನು ತಡೆಯಲು ಬೀಟ್ ಸಿಬ್ಬಂದಿ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ತಿಳಿಸಿದರು.
ನಂತರ ತಮ್ಮ ವ್ಯಯಕ್ತಿಕ ವಿವರವನ್ನು ಹಂಚಿಕೊಂಡ ಅವರು , ಚಿತ್ರದುರ್ಗ ಮೂಲದ ತಾವು ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಐಪಿಎಸ್ ಪರೀಕ್ಷೆ ಎದುರಿಸಿದ್ದಾಗಿ ತಿಳಿಸಿದರು. ಈ ಹಿಂದೆ ಆ್ಯಂಟಿ ನಕ್ಸಲ್ ಫೋರ್ಸ್ ಹಾಗೂ ಕೋಲಾರ, ರಾಯಚೂರಿನಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದು, ಮಲೆನಾಡಿನ ಬಗ್ಗೆ ತಮಗೆ ಭಾವನಾತ್ಮಕ ಸಂಬಂಧವಿದೆ ಎಂದರು. ಜಿಲ್ಲಾಡಳಿತ ಮತ್ತು ಜನರ ನಡುವೆ ಪತ್ರಕರ್ತರು ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದ ಅವರು, ಸಂಕ್ರಾಂತಿ ಹಬ್ಬದ ನಂತರ ಜಿಲ್ಲೆಯಲ್ಲಿ ‘ಆರಕ್ಷಕ ದಿನಾಚರಣೆ’ಯನ್ನು ಆಯೋಜಿಸುವುದಾಗಿ ತಿಳಿಸಿದರು .
Shivamogga DC and SP Press Meet 2026

