lion safari shimoga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಿಂದ ಪ್ರಾಣಿಗಳ ವಿನಿಮಯ ಯೋಜನೆಯ ಅಡಿಯಲ್ಲಿ ಎರಡು ಗಂಡು ಕಾಟಿಗಳನ್ನು (ಕಾಡುಕೋಣ) ಬಿಹಾರದ ಪಾಟ್ನಾ ಮೃಗಾಲಯಕ್ಕೆ ಗುರುವಾರದಂದು ಯಶಸ್ವಿಯಾಗಿ ಕಳುಹಿಸಿಕೊಡಲಾಗಿದೆ. ಈ ಬಗ್ಗೆ ಮಲೆನಾಡು ಟುಡೆಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಪ್ರಾಣಿಗಳಿಗೆ ಪ್ರತಿಯಾಗಿ ತೋಳ, ಮೊಸಳೆಗಳನ್ನು ಲಯನ್ ಸಫಾರಿಗೆ ತರಲಾಗುತ್ತಿದೆ.
ಲಭ್ಯವಾದ ಮಾಹಿತಿ ಪ್ರಕಾರ, ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಕಾಟಿ ಸಫಾರಿಯನ್ನು ಆರಂಭಿಸಿದ ಹೆಗ್ಗಳಿಕೆ ಶಿವಮೊಗ್ಗ ಮೃಗಾಲಯಕ್ಕಿದೆ. ಇಲ್ಲಿನ ಕಾಡುಕೋಣಗಳಿಗೆ ದೇಶದ ವಿವಿಧ ಮೃಗಾಲಯಗಳಿಂದ ಬೇಡಿಕೆ ಬರುತ್ತಿದೆಯಂತೆ. ಈ ಬೇಡಿಕೆಗೆ ಅನುಗುಣವಾಗಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಗಳನ್ವಯ ಪ್ರಾಣಿಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಪಾಟ್ನಾ ಮೃಗಾಲಯಕ್ಕೆ ಕಳುಹಿಸಿಕೊಟ್ಟಿರುವ ಎರಡು ಗಂಡು ಕಾಟಿಗಳಿಗೆ ಪ್ರತಿಯಾಗಿ, ಆಗಸ್ಟ್ 20 ರಂದು ಶಿವಮೊಗ್ಗ ಮೃಗಾಲಯಕ್ಕೆ ಹೊಸ ಪ್ರಾಣಿಗಳು ಆಗಮಿಸಲಿವೆ. ಪಾಟ್ನಾದಿಂದ ಒಟ್ಟು 8 ತೋಳಗಳು ಹಾಗೂ 4 ಘರಿಯಾಲ್ ಜಾತಿಗೆ ಸೇರಿದ ಅಪರೂಪದ ಮೊಸಳೆಗಳನ್ನು ತರಲಾಗುತ್ತಿದೆ.
ತೋಳಗಳ ಪೈಕಿ 3 ಗಂಡು ಮತ್ತು 5 ಹೆಣ್ಣು ತೋಳಗಳಿದ್ದರೆ, ಮೊಸಳೆಗಳಲ್ಲಿ 2 ಗಂಡು ಹಾಗೂ 2 ಹೆಣ್ಣು ಮೊಸಳೆಗಳು ಸೇರಿವೆ. ಹೊಸ ಪ್ರಾಣಿಗಳ ಆಗಮನದಿಂದ, ಲಯನ್ ಸಫಾರಿಗೆ ಬರುವ ವೀಕ್ಷಕರಿಗೆ ಹೊಸ ಆಕರ್ಷಣೆ ಸಿಗಲಿದೆ ಅಂತಾ ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
