Shimoga district | ಮುಂಬೈ ಸ್ಪೋಟಿಸಿತ್ತು ಮಲೆನಾಡಿನ ಸ್ಪೋಟಕ ರಹಸ್ಯ! JP Story PART 2

Shimoga district | Mumbai blasts in 2011 Explosives stored in Malnad Part 2 JP story part 2

Shimoga district | ಮುಂಬೈ ಸ್ಪೋಟಿಸಿತ್ತು ಮಲೆನಾಡಿನ ಸ್ಪೋಟಕ ರಹಸ್ಯ! JP Story PART 2

Shimoga district | ಮುಂಬೈ ಸ್ಪೋಟಿಸಿತ್ತು ಮಲೆನಾಡಿನ ಸ್ಪೋಟಕ! ಮಲೆನಾಡಿನಿಂದ ಮುಂಬೈಗೆ ಉಗ್ರರು ಸ್ಪೋಟಕಗಳನ್ನು ಕೊಂಡೊಯ್ದಿದ್ದು ಹೇಗೆ?ಮಲೆನಾಡಿನ ಸ್ಫೋಟಕದ ರಹಸ್ಯ! JP Story PART 2

ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಲ್ಲು ಕ್ವಾರಿಗಳು ಎಗ್ಗಿಲ್ಲದೆ ನಾಯಿಕೊಡೆಗಳಂತೆ ಹಬ್ಬಿಕೊಂಡಿದೆ. ಇವುಗಳಲ್ಲಿ ಬಳಸುವ ಸ್ಫೋಟಕಗಳು ಎಂದಿದ್ದರೂ ಅಪಾಯಕಾರಿ ಅನ್ನೋದನ್ನ ಮಾದ್ಯಮಗಳು ಸುದ್ದಿ ಮಾಡುತ್ತಲೇ ಬಂದಿದೆ ಆದಾಗ್ಯು ದುಡ್ಡಿನ ಹಿಂದೆ ಬಿದ್ದವರು ಅಕ್ರಮವಾಗಿ ಸ್ಫೋಟಕಗಳನ್ನ ಈ ಕ್ಷಣಕ್ಕೂ ಸಂಗ್ರಹಿಸುತ್ತಿದ್ದಾರೆ ಮತ್ತು ಬ್ಲಾಸ್ಟ್ ಮಾಡುತ್ತಿದ್ದಾರೆ.

ಅಕ್ರಮ ಕ್ವಾರಿಗಳಲ್ಲಿ ಢಂ..ಢಂ

ಹೊಸನಗರ, ತೀರ್ಥಹಳ್ಳಿ ಅಷ್ಟೆಯಾಕೆ ಶಿವಮೊಗ್ಗದ ಆಯ್ದ ಭಾಗಗಳಲ್ಲಿ ಹೊರಗಡೆಯಿಂದ ಯಾವುದೇ ಪರ್ಮಿಟ್ ಎಸ್ಕಾರ್ಟ್​ ಇಲ್ಲದೆ ಸ್ಫೋಟಕಗಳು ತುಂಬಿದ ಲಾರಿಗಳು ಬರುತ್ತಲೇ ಇವೆ.

 ಶಿವಮೊಗ್ಗ ನಗರದ ಅಣತಿ ದೂರದ ಗೆಜ್ಜೆನಹಳ್ಳಿ, ಕೋಟೆಗಂಗೂರು, ದೇವಕಾತಿಕೊಪ್ಪ, ಜಕಾತಿಕೊಪ್ಪ, ಊರುಗಡೂರು,ಗ್ರಾಮದಲ್ಲಿಯೇ ಕಲ್ಲುಕ್ವಾರಿಗಳಲ್ಲಿ ಹಗಲು ರಾತ್ರಿಯೆನ್ನದೆ ಬ್ಲಾಸ್ಟಿಂಗ್ ಸದ್ದು ಕೇಳಿಸ್ತಿರುತ್ತೆ ಇದರ ಬಗ್ಗೆ ಪೊಲೀಸ್ ಅಧಿಕಾರಿಗಳು ಗಮನ ಹರಿಸ್ತಿದ್ದಾರಾ? ಗೊತ್ತಿಲ್ಲ.

ಇನ್ನೂ ಈ ಸ್ಫೋಟಕಗಳ ವಿಚಾರಕ್ಕೆ ಬರುವುದಾದರೆ,  ಅಕ್ರಮವಾಗಿ ಬಂಡೆ ಸ್ಟೋಟಿಸಲು ಎಕ್ಸ್ ಪ್ಲೋಸಿವ್ ಗಳು ಸುಲಭವಾಗಿ ಕೈ ಸೇರುತ್ತವೆ. ಮಲೆನಾಡಿನಲ್ಲಿ ಸುಮಾರು 150 ಕ್ಕೂ ಹೆಚ್ಚು ಕಲ್ಲುಕ್ವಾರಿಗಳು ಕಾನೂನೂ ಬಾಹಿರವಾಗಿ ಬಂಡೆಗಳನ್ನು ಸ್ಪೋಟಿಸುತ್ತಿವೆ.

ಹುಣಸೋಡು ಸ್ಫೋಟದ ನೆನಪು

ಬಂಡೆ ಸ್ಟೋಟದ ಸಂದರ್ಭದಲ್ಲಿ ಹಲವು ಮಂದಿ ಪ್ರಾಣಕಳೆದುಕೊಂಡಿದ್ದಾರೆ.  ಮತ್ತೆ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಷ್ಟಾದ್ರು ಪೊಲೀಸ್,ಪಾರೆಸ್ಟ್, ರೆವಿನ್.ಮೈನ್ಸ್ ಅಂಡ್ ಜಿಯಾಲಜಿ,ಎನ್ವೈರ್ನ್ ಡಿಪಾರ್ಟ್ ಮೆಂಟ್  ಸ್ಥಳಕ್ಕೆ ಹೋಗೋದಿಲ್ಲ.ಹೋದ್ರು ಖಡಕ್ ಆಗಿ ಕೇಸು ಹಾಕಲ್ಲ.ಕ್ವಾರಿ ಬಾಗಿಲು ಸಹ ಮುಚ್ಚಿಸಲ್ಲ.

ಮಲೆನಾಡಿನಲ್ಲಿ ಅಕ್ರಮ ಕ್ವಾರಿಯ ಕಾಳದಂಧೆಯಲ್ಲಿ ದಿನವಿಡೀ ಹಬ್ಬದೂಟ ಮಾಡ್ತಿರೋ ಅಧಿಕಾರಿಗಳ ದಿವ್ಯ ನಿರ್ಲಕ್ಷವೇ ಹುಣಸೋಡು ಸ್ಪೋಟಕ್ಕೂ ಕಾರಣವಾಯಿತು.

ಸ್ಪೋಟದ ತೀವ್ರತೆ 130 ಕಿಲೋಮೀಟರ್ ವರೆಗೂ ಭಾರಿ ಸದ್ದಿನೊಂದಿಗೆ ಅಪ್ಪಳಿಸಿದ್ದು ದೇಶಾದ್ಯಂತ ಸುದ್ದಿಯಾಯಿತು.

ಸ್ಪೋಟದಲ್ಲಿ ಆರು ಮಂದಿ ಪ್ರಾಣ ಕಳೆದುಕೊಳ್ಳುವಂತಾಯಿತು.ಮುಂಬೈನ ಎಟಿಎಸ್ ಅಧಿಕಾರಿಗಳು ಎಚ್ಚರಿಸಿದ್ದ ಸಂದರ್ಭದಲ್ಲಿಯೇ ಇಲ್ಲಿನ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದರೆ..ಮಲೆನಾಡು ಬಾಂಬ್ ನಗರಿ ಆಗುತ್ತಿರಲಿಲ್ಲ.

Shimoga district | 2011 ರಲ್ಲಿ ಮುಂಬೈ ಸ್ಪೋಟಿಸಿತ್ತು ಮಲೆನಾಡಿನ ಸ್ಪೋಟಕ! ಮುಂಬೈನ ಎ.ಟಿ.ಎಸ್, ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಚ್ ಶೀಟ್ ನಲ್ಲಿ ಮಲೆನಾಡು ಥಳಕು ಹಾಕಿಕೊಂಡಿದ್ದು ಹೇಗೆ ಗೊತ್ತಾ? ಭಾಗ-01 JP Story

ಹುಡುಕಲಾಗದ ಸಂಕಟ

ಶಿವಮೊಗ್ಗ ಚಿಕ್ಕಮಗಳೂರು ಕಲ್ಲು ಗಣಿಗಾರಿಕೆಗೆ ಹೇಳಿ ಮಾಡಿಸಿದ ಸ್ವರ್ಗತಾಣ. ಇಲ್ಲಿನ ಕಲ್ಲುಗಳಿಗೆ ರಾಜ್ಯದಲ್ಲಿ ವ್ಯಾಪಕ ಬೇಡಿಕೆಯಿದೆ. ಹೀಗಾಗಿ ಇಲ್ಲಿ ಅಕ್ರಮ ಕಲ್ಲುಕ್ವಾರಿಗಳು ಮುಗಿಲೆತ್ತರಕ್ಕೆ ತಲೆಎತ್ತಿ ನಿಂತಿದೆ.

ನೆಲದಾಳದವರಿಗೂ ತನ್ನ ಕದಂಬಬಾಹು ಚಾಚಿದೆ. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೂ ತಲೆಕೆಡಿಸಿಕೊಳ್ಳದ ಇಲ್ಲಿನ ಮಾಫೀಯ, ಹಗಲು ರಾತ್ರಿಯನ್ನದೆ ಬಂಡೆಗಳನ್ನು ಸಿಡಿಸುತ್ತಲೇ ಇರುತ್ತವೆ.

ಸದ್ದು ಕೇಳುವ ಅಧಿಕಾರಿಗಳು ನಿದ್ದೆಯಲ್ಲಿ ಇನ್ನೊಂದು ಗೊರಕೆ ಜಾಸ್ತಿ ಹೊಡಿತಾರೆ ಹೊರತು ಕಲ್ಲುಕ್ವಾರಿ ಕಡೆ ತಲೆಹಾಕಿ ಕೂಡ ಮಲಗಿಕೊಳ್ಳೋಲ್ಲ.

 ಇಲ್ಲಿ ನಿಮಗೊಂದು ವಿಷಯ ಹೆಳಬೇಕಾಗಿದೆ. ತಮಗೆ ಬೇಕಾದಷ್ಟು ಸ್ಫೋಟಕಗಳನ್ನು ತರಿಸಿಕೊಳ್ಳುವ ಕೆಲವರು, ಅದನ್ನು ಬೇರೆಯವರಿಗೆ ದುಪ್ಪಟ್ಟು ರೇಟಿಗೆ ಮಾರುತ್ತಾರೆ.

ಹಾಗೆ ಮಾರುವಾಗ ಈ ಸ್ಫೋಟಕಗಳು ಯಾವ ಕಾರಣಕ್ಕೆ ಬಳಕೆಯಾಗುತ್ತವೆ ಎಂಬುದು ಗೊತ್ತಿರುವುದಿಲ್ಲ. ಅದು ಮನುಷ್ಯರನ್ನು ಸಹ ಸ್ಫೋಟಿಸಬಹುದು ಎಂಬುದಕ್ಕೆ ಯಾಸಿನ್ ಭಟ್ಕಳ್​ ಸಾಕ್ಷಿ ಕೊಟ್ಟಿದ್ದ.

ನಕ್ಸಲರಿಗೂ ಸಪ್ಲೆಯಾಗಿತ್ತು ಸ್ಫೋಟಕ

ನಕ್ಸಲರು ಸಹ ನಾಡಬಾಂಬ್ ತಯಾರಿಕೆಗೆ ಸ್ಥಳೀಯ ಕ್ವಾರಿ ಮಾಲೀಕರಿಂದಲೇ ಸ್ಪೋಟಕಗಳನ್ನು ಖರೀದಿಸಿದ್ರು.

2008 ರಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ನಕ್ಸಲ್ ಕೋರನಕುಂಟೆ ಕೃಷ್ಣ ತೋರಿಸಿದ ಡಂಪ್ ನಲ್ಲಿ ಅಪಾರ ಪ್ರಮಾಣದ ಅಮೋನಿಯಂ ನೈಟ್ರೇಟ್, ಜಿಲೆಟಿನ್ ಕಡ್ಡಿ ಡಿಟೋನೇಟರ್ ಗಳು ಪ್ರಮುಖವಾಗಿ ಪತ್ತೆಯಾಗಿದ್ವು. ಇವೆಲ್ಲಾ ನಕ್ಸಲರಿಗೆ ಸ್ಥಳೀಯ ಕ್ವಾರಿಗಳಿಂದಲೇ ಪೂರೈಕೆಯಾಗಿತ್ತು

ಹೀಗೆ ಮಲೆನಾಡಿನಲ್ಲಿ ಓಪನ್ ಮಾರ್ಕೆಟ್ ನಲ್ಲಿ ಪೆಪ್ಪರ್ ಮೆಂಟ್ ರೀತಿ ಸಿಗೋ  ಸ್ಪೋಟಕ ವಿಷಯವನ್ನು ಟ್ರಂಪ್ ಕಾರ್ಡ್ ಮಾಡಿಕೊಂಡ ಉಗ್ರರು ಸ್ಪೋಟಕಗಳ ಮೇಲೆ ತಮ್ಮ ಕಣ್ಣು ನೆಟ್ಟಿದ್ರು.

ಅಮೋನಿಯಂ ನೈಟ್ರೈಟ್ ಹಾಗು ಜಿಲೆಟಿನ್ ಕಡ್ಡಿಗಳ ಖರೀದಿ ಮತ್ತು ಬಳಕೆಗೆ ಸಂಭದಿಸಿದಂತೆ ಕಠಿಣ ನೀತಿ ಜಾರಿಯಲ್ಲಿದ್ರೂ, ಉಗ್ರರೂ ಅಕ್ರಮ ಕ್ವಾರಿಗಳ ಮಾಲೀಕರು ಮತ್ತು ಕೆಲಸಗಾರರಿಗೆ ಹಣದ ಆಮೀಷ ಒಡ್ಡಿ ಸ್ಫೋಟಕಗಳನ್ನ ಖರೀದಿಸಿದ್ರು.

ಮಲೆನಾಡಿನಿಂದ ಮಂಗಳೂರಿಗೆ ಸ್ಪೋಟಕ

2011 ರ ಜನವರಿಯಿಂದಲೇ ಉಗ್ರರು ಮುಂಬೈ ಸ್ಪೋಟಿಸುವ ಸಂಚು ರೂಪಿಸಿದ್ರು.  ಆ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿದ್ದ ಇಂಡಿಯನ್ ಮುಜಾಹಿದ್ದೀನ್ ಉಗ್ರ ರಿಯಾಝ್ ಭಟ್ಕಳ್ ಭಾರತದ್ಲಲಿದ್ದ ಯಾಸಿನ್ ಭಟ್ಕಳ್ ಗೆ ಸೂಚನೆ ನೀಡಿದ್ದ.

ಆ ವರ್ಷದ ಮಾರ್ಚ್ ನಲ್ಲಿ ಸ್ಪೋಟಕಕ್ಕೆ ಸ್ಥಳ ನಿಗದಿ ಮಾಡಲು ಅಸಾಧುಲ್ಲಾ ಅಕ್ತರ್ ಹಾಗು ಪಾಕಿಸ್ತಾನಿ ಪ್ರಜೆ ವಖಾಸ್ ಮುಂಬೈಗೆ ಆಗಮಿಸಿದ್ದರು.

ಪ್ರತಿ ತಿಂಗಳು ಪಾಕಿಸ್ತಾನದಿಂದ ಹವಾಲ ಮೂಲಕ ಹಣ ಬಂದು ಇವರಿಗೆ ತಲುಪುತಿತ್ತು. ಈ ಮದ್ಯೆ ಮುಂಬೈ ನಲ್ಲಿದ್ದ ಯಾಸಿನ್ ದೆಹಲಿಗೆ ತೆರಳಿದ್ದ, ಜೂನ್ 15 ರಂದು ಯಾಸಿನ್ ಮುಂಬೈ ಗೆ ಮರಳುತ್ತಾನೆ.

ಯಾಸಿನ್ ಆಗಮನದ ಬಳಿಕ ಅಸಾದುಲ್ಲಾ ಮತ್ತು ವಕಾಸ್ ಮಂಗಳೂರಿಗೆ ತೆರಳಿದ್ದರು. ಮಂಗಳೂರಿನ ಹಂಪನಕಟ್ಟೆಯಲ್ಲಿ ಈ ಇಬ್ಬರ ಮೊಬೈಲ್ ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಕಸ್ತೂರಬಾ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ಬರುವಂತೆ ಸೂಚಿಸಿದ್ದ.

ಬಸ್​ನಲ್ಲಿಯೇ ಮುಂಬೈಗೆ ಹೋಗಿತ್ತು!

ಅಲ್ಲಿಗೆ ತೆರಳಿದ ಅಸಾದುಲ್ಲಾ ಮತ್ತು ವಕಾಸ್ ಕೈಗೆ 25 ಕೇಜಿ ತೂಗುವ ಒಂದು ಟ್ರಾವೆಲ್ ಬ್ಯಾಗ್ ಮತ್ತು 7 ಕೇಜಿ ತೂಗುವ ಕಾಲೇಜು ಬ್ಯಾಗೊಂದನ್ನು ಹಸ್ತಾಂತರಿಸಿದ್ದ. ಇದರಲ್ಲಿ ಅಮೋನಿಯಂ ನೈಟ್ರೈಟ್, ಡಿಟೋನೇಟರ್, ನೈಟ್ರೋ ಗ್ಲಿಸರಿನ್, ಜಿಲೆಟಿನ್ ಕಡ್ಡಿ, ಜೆಲ್ ಇತ್ತು.

ಇದನ್ನು ಬಸ್ಸಿನ ಮೂಲಕವೇ ಉಗ್ರರು ಮುಂಬೈಗೆ ಕೊಂಡೊಯ್ದಿದ್ದರು. ಈ ಸ್ಪೋಟಕ ಮಲೆನಾಡಿನ ಅಕ್ರಮ ಕ್ವಾರಿಗಳಿಂದಲೇ ಮಂಗಳೂರಿನವರೆಗೆ ತಲುಪಿರುವ ಸಾಧ್ಯತೆಯಿದೆ ಎಂದು ಗುಪ್ತಚರ ಸಂಸ್ಥೆಗಳು ಖಚಿತ ಪಡಿಸಿತ್ತು.

ಹಾಗಿದ್ರೆ ಮಲೆನಾಡಿನಲ್ಲಿ ಯಾವೆಲ್ಲಾ ಉಗ್ರರು ಆಶ್ರಯ ಪಡೆದಿದ್ದರು ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ.