Shimoga Congress : ಶಿವಮೊಗ್ಗ:ಹಾಲಿ ವಿಧಾನಪರಿಷತ್ ಸದಸ್ಯರಾದ ಸಿ.ಟಿ. ರವಿ ಅವರು ಇತ್ತೀಚೆಗೆ ಸವಿತಾ ಸಮಾಜವನ್ನು ಅವಾಚ್ಯ ಶಬ್ದ ಬಳಸಿ ನಿಂದಿಸಿರುವುದನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗವು (ಒಬಿಸಿ ಘಟಕ) ತೀವ್ರವಾಗಿ ಖಂಡಿಸಿದೆ. ಈ ಹಿನ್ನೆಲೆ ಸಿ.ಟಿ. ರವಿಯವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾ ಓಬಿಸಿ ಅಧ್ಯಕ್ಷ ಎಂ. ರಮೇಶ್ ಶಂಕರಘಟ್ಟ ಒತ್ತಾಯಿಸಿದ್ದಾರೆ.
ಸಿ ಟಿ ರವಿ ವಿರುದ್ದ ವಿರುದ್ಧ ಹಿಂದುಳಿದ ವರ್ಗಗಳ ವಿಭಾಗದಿಂದ ಜಿಲ್ಲಾ ಪೊಲೀಸ್ ಅಧೀಕ್ಷರಿಗೆ ದೂರನ್ನು ಸಲ್ಲಿಸಿ ಮಾತನಾಡಿದ ರಮೇಶ್ ಶಂಕರಘಟ್ಟ, ಶಾಸಕರಾಗಿ, ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸಿ.ಟಿ. ರವಿಯವರ ದುರಹಂಕಾರದ ವರ್ತನೆಯಿಂದಾಗಿ ಅವರ ಕ್ಷೇತ್ರದ ಜನ ಅವರನ್ನು ಹೀನಾಯವಾಗಿ ಸೋಲಿಸಿದರು. ಇದರಿಂದ ಅವರ ತಲೆಗೆ ಏರಿದ್ದ ಅಧಿಕಾರದ ಅಮಲು ಇಳಿದಿರಬಹುದು. ಆದರೂ ಬುದ್ಧಿ ಕಲಿಯದ ಅವರು ಇನ್ನೂ ಕೂಡ ಇಂತಹ ಗೊಂದಲಕಾರಿ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿಲ್ಲ, ಎಂದು ರಮೇಶ್ ಶಂಕರಘಟ್ಟ ಅವರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ಸವಿತಾ ಸಮಾಜದ ವಿರುದ್ಧ ಸಂವಿಧಾನ ಮತ್ತು ಕಾನೂನುಗಳ ಮೂಲಭೂತ ಆಶಯಗಳಿಗೆ ವಿರುದ್ಧವಾಗಿ ಮಾತನಾಡಿ, ಆ ಸಮಾಜವನ್ನು ಅತ್ಯಂತ ತುಚ್ಛವಾಗಿ ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಸಿ.ಟಿ. ರವಿ ಅವರ ವಿಧಾನಪರಿಷತ್ ಸದಸ್ಯತ್ವದಿಂದ ಅವರನ್ನು ಕೂಡಲೇ ವಜಾ ಮಾಡಬೇಕು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗವು ಒತ್ತಾಯಿಸಿದೆ.
Shimoga Congress


