Sharavati pumped storage : ಶಿವಮೊಗ್ಗ : ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿಯೊಂದಿಗೆ, ಸುಮಾರು 10 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಾಜ್ಯ ಸರ್ಕಾರವು ಕೈಗೆತ್ತಿಕೊಂಡಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಕುರಿತು ಪರ-ವಿರೋಧ ಚರ್ಚೆಗಳು ತೀವ್ರಗೊಂಡಿವೆ. ಈ ಯೋಜನೆ ಜಾರಿ ವಿಚಾರದಲ್ಲಿ ಇದೀಗ ಚಿತ್ರನಟ ಅನಿರುದ್ಧ್ ಜಟ್ಕರ್ ಅವರು ಧ್ವನಿ ಎತ್ತಿದ್ದು, ಯೋಜನೆಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತಾಗಿ ವಿಡಿಯೋ ಸಂದೇಶದ ಮೂಲಕ ಮಾತನಾಡಿರುವ ನಟ ಅನಿರುದ್ಧ್, ಈ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಯೋಜನೆಯಿಂದಾಗಿ ಅಪಾರ ಪ್ರಮಾಣದ ವನ್ಯ ಸಂಕುಲ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸುಮಾರು 10,500 ಕೋಟಿ ರೂಪಾಯಿಗಳ ಬೃಹತ್ ಯೋಜನೆಯ ಇದಾಗಿದ್ದು, ಯೋಜನೆಯ ಅನುಷ್ಠಾನದಿಂದಾಗಿ ಸ್ಥಳೀಯವಾಗಿರುವ ಅನೇಕ ಜನರ ಸ್ಥಳಾಂತರಕ್ಕೂ ಮುಂದಾಗಲಾಗಿದೆ.ಈ ಯೋಜನೆಯಿಂದ ಇಡೀ ಪ್ರದೇಶದ ವನ್ಯಜೀವಿಗಳು ಸಂಪೂರ್ಣ ನಾಶವಾಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿರುವ ಅನಿರುದ್ಧ್ ಜಟ್ಕರ್ ಅವರು, ಕೂಡಲೇ ರಾಜ್ಯ ಸರ್ಕಾರವು ಈ ಯೋಜನೆ ಜಾರಿ ಕುರಿತು ಮರು ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

