ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ಹೋರಾಟ ನಿಲ್ಲದು

prathapa thirthahalli
Prathapa thirthahalli - content producer

Sharavathi Pumped Storage Project  : ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು (Sharavathi Pumped Storage Project) ಸಂಪೂರ್ಣವಾಗಿ ಕೈಬಿಡುವವರೆಗೆ ತಮ್ಮ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಪರಿಸರ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಸರ ಹೋರಾಟಗಾರರಾದ ಅಖಿಲೇಶ್ ಚಿಪ್ಪಳಿ ಮತ್ತು ಪ್ರೊ. ಎಲ್ ಕೆ ಶ್ರೀಪತಿ ಅವರು, ಇತ್ತೀಚೆಗೆ ಕೆಪಿಸಿಎಲ್ (KPCL) ಅಧಿಕಾರಿಗಳು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಗಳು ಸುಳ್ಳು ಮತ್ತು ಜನರನ್ನು ದಿಕ್ಕು ತಪ್ಪಿಸುವಂತಿದೆ ಎಂದು ತೀವ್ರವಾಗಿ ಆರೋಪಿಸಿದರು. ಅಧಿಕಾರಿಗಳು ಸುಳ್ಳು ಮಾಹಿತಿಗಳನ್ನು ನೀಡಿ, ಮಾಧ್ಯಮಗಳನ್ನು ಬಳಸಿಕೊಂಡು ಜನರನ್ನು ವಂಚಿಸುವ ಹುನ್ನಾರ ಮಾಡಿದ್ದಾರೆ ಎಂದು ದೂರಿದ್ದಾರೆ.

- Advertisement -

Sharavathi Pumped Storage Project ಅರಣ್ಯ ನಾಶ, ಕೃಷಿ ಭೂಮಿ ವಶದ ಕುರಿತು ಆಕ್ಷೇಪ

ಕೆಪಿಸಿಎಲ್ ಅಧಿಕಾರಿಗಳು ಯೋಜನೆಯಿಂದ ಯಾವುದೇ ಅರಣ್ಯ ನಾಶವಾಗುವುದಿಲ್ಲ ಮತ್ತು ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವುದಿಲ್ಲ ಎಂದು ಹೇಳಿರುವುದು ಸಂಪೂರ್ಣ ಸುಳ್ಳು ಎಂದು ಪರಿಸರಾಸಕ್ತರು ಖಂಡಿಸಿದ್ದಾರೆ. ಹೊನ್ನಾವರ ಮತ್ತು ಸಾಗರ ತಾಲೂಕುಗಳ ಕೃಷಿ ಭೂಮಿಗಳು ಯೋಜನೆಯಡಿ ಬಳಕೆಯಾಗಲಿವೆ. ಈಗಾಗಲೇ ಭಟ್ಕಳ ಉಪವಿಭಾಗಾಧಿಕಾರಿ (AC) ಅವರು ಭೂಮಿ ಕಳೆದುಕೊಳ್ಳುವವರ ಸಭೆ ನಡೆಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಪರ್ಯಾಯ ಮಾರ್ಗಗಳಿರುವಾಗ ಯೋಜನೆ ಏಕೆ

ಯೋಜನೆ ರಾಜ್ಯಕ್ಕೆ ಅನಿವಾರ್ಯ ಎಂದು ಅಧಿಕಾರಿಗಳು ಹೇಳಿದ್ದರೂ, ಪ್ರಸ್ತುತ ದಿನಮಾನಗಳಲ್ಲಿ ಇದಕ್ಕೆ ಸಮರ್ಥ ಪರ್ಯಾಯ ಮಾರ್ಗಗಳು ಲಭ್ಯವಿವೆ ಎಂದು ಹೋರಾಟಗಾರರು ಪ್ರತಿಪಾದಿಸಿದರು. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಶರಾವತಿ ಸಿಂಗಳಿಕಾ ಅಭಯಾರಣ್ಯದಲ್ಲಿ ಜಾರಿಯಾಗಲಿರುವ ಈ ಯೋಜನೆ, ಆರ್ಥಿಕ ಹೊರೆಯ ಜೊತೆಗೆ ಎರಡು ಜಿಲ್ಲೆಗಳ ಜನರಿಗೆ ಶಾಪವಾಗಲಿದೆ. ಇದು ವನ್ಯಜೀವಿಗಳ ನೆಲೆಯನ್ನು ಹಾಳುಮಾಡಿ, ಶರಾವತಿ ನದಿಯನ್ನು ಕೊಲ್ಲುವಂತಹ ಅವೈಜ್ಞಾನಿಕ ಯೋಜನೆಯಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಜನರ ವಿರೋಧದ ನಡುವೆಯೂ ಕೆಪಿಸಿಎಲ್ ಇದನ್ನು ಜಾರಿಗೊಳಿಸಲು ಹೊರಟಿರುವುದನ್ನು ಅವರು ತೀವ್ರವಾಗಿ ಖಂಡಿಸಿದರು.

 

Share This Article