Sharavathi Pumped Storage Project : ಸಾಗರ : ರಾಜ್ಯ ಸರ್ಕಾರವು ಜಾರಿಗೊಳಿಸಲು ಮುಂದಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಿ ಸಾಗರದಲ್ಲಿ ರೈತರು ಮತ್ತು ನಾಗರಿಕರು ನಡೆಸುತ್ತಿರುವ ಬೃಹತ್ ಹೋರಾಟವು ಇಂದು 12ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟ ಹಿನ್ನೆಲೆ ಪ್ರತಿಭಟನಾಕಾರರು ಸಾಗರ ಉಪವಿಭಾಗಾಧಿಕಾರಿ (AC) ಕಚೇರಿ ಎದುರು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಅಣುಕು ಶವಯಾತ್ರೆಯನ್ನು ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘ ಹಾಗೂ ವಿವಿಧ ಪರಿಸರ ಮತ್ತು ನಾಗರಿಕ ಸಂಘಟನೆಗಳ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು, ಸಾಗರದ ಗಾಂಧಿ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ. 12ನೇ ದಿನವಾದ ಇಂದು ಪ್ರತಿಭಟನೆಯ ಅಂಗವಾಗಿ ಪ್ರತಿಭಟನಾಕಾರರು ಇಂಧನ ಸಚಿವರ ಅಣುಕು ಶವಯಾತ್ರೆಯನ್ನು ಕೈಗೊಂಡು ಸಾಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸರ್ಕಾರದ ನಿಲುವಿಗೆ ಖಂಡನೆ ವ್ಯಕ್ತಪಡಿಸಿದರು.
ಶರಾವತಿ ಕಣಿವೆ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಈ ಯೋಜನೆ ಜಾರಿ ಮಾಡಬಾರದು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಯೋಜನೆಯು ಸಿಂಗಳೀಕ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದರಿಂದ, ಪರಿಸರದ ಸೂಕ್ಷ್ಮತೆಯನ್ನು ಅರಿತು ಯೋಜನೆ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಲಾಗುತ್ತಿದೆ.
ಪ್ರತಿಭಟನಾಕಾರರು ಕೂಡಲೇ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈಬಿಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಈ ಹೋರಾಟದಲ್ಲಿ ರೈತ ಸಂಘದ ಮುಖಂಡರಾದ ದಿನೇಶ್ ಶಿರವಾಳ, ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಮಾರುತಿ ಗುರೂಜಿ, ಮಾಜಿ ಶಾಸಕ ಬಿ. ಸ್ವಾಮಿರಾವ್, ಪ್ರಮುಖರಾದ ಮಹಿಮಾ ಪಟೇಲ್, ಮಲ್ಲಿಕಾರ್ಜುನ ಹಕ್ರೆ, ಅಖಿಲೇಶ್ ಚಿಪ್ಪಳಿ ಮತ್ತು ಹಿತಕರ್ ಜೈನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ, ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
Sharavathi Pumped Storage Project
