ಶಿವಮೊಗ್ಗ: ನಗರದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರಿನ ಆಟದ ಮೈದಾನದ ವಿವಾದದ ಕುರಿತು ತುರ್ತು ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಭಕ್ತ ಬಳಗದ ವತಿಯಿಂದ ಜನವರಿ 3ರ ಶನಿವಾರದಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ನಾಯಕರಾದ ಕೆ.ಎಸ್. ಈಶ್ವರಪ್ಪ ಹಾಗೂ ಕೆ.ಇ. ಕಾಂತೇಶ್ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ.

ಶಿವಮೊಗ್ಗ, ಭೀಕರ ಅಪಘಾತ, ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಕೆ ಇ ಕಾಂತೇಶ್ ಮಾತನಾಡಿ ಅಂದು ಬೆಳಗ್ಗೆ 10 ಗಂಟೆಗೆ ನಗರದ ರಾಮಣ್ಣ ಶೆಟ್ಟಿ ಪಾರ್ಕ್ ಆವರಣದಿಂದ ಸಾವಿರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಮೆರವಣಿಗೆಯ ಮೂಲಕ ಹೊರಟು ಮಹಾನಗರ ಪಾಲಿಕೆಯ ಆವರಣದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಶಿವಪ್ಪ ನಾಯಕ ಹೂವಿನ ಮಾರುಕಟ್ಟೆ, ಗಾರ್ಡನ್ ಏರಿಯಾ ಹಾಗೂ ಗಾಂಧಿ ನಗರದ ವಾಣಿಜ್ಯ ಸಂಕೀರ್ಣಗಳು ಸಿದ್ಧಗೊಂಡು ಪಾಲಿಕೆಗೆ ಹಸ್ತಾಂತರವಾಗಿದ್ದರೂ, ಮಳಿಗೆಗಳನ್ನು ಫಲಾನುಭವಿಗಳಿಗೆ ವಿತರಿಸದೆ ಪಾಲಿಕೆಗೆ ಅಂದಾಜು 11.51 ಕೋಟಿ ರೂಪಾಯಿಗೂ ಅಧಿಕ ಬಾಡಿಗೆ ನಷ್ಟ ಉಂಟಾಗಿದೆ ಎಂದು ದೂರಿದರು.
ಜಿಲ್ಲಾಧಿಕಾರಿ ಕಚೇರಿ ಎದುರಿನ ಆಟದ ಮೈದಾನದ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಆದೇಶದ ಅವಧಿ ಮುಗಿದು ಐದು ತಿಂಗಳು ಕಳೆದಿದ್ದರೂ, ಪಾಲಿಕೆ ಆಯುಕ್ತರು ಈವರೆಗೆ ವರದಿ ಸಲ್ಲಿಸಿಲ್ಲ. ಕೂಡಲೇ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡಬೇಕೆಂದು ಅವರು ಒತ್ತಾಯಿಸಿದರು. ಇದರೊಂದಿಗೆ ಆಶ್ರಯ ಯೋಜನೆಯಡಿ ಹಣ ಪಾವತಿಸಿದ ಬಡವರಿಗೆ ಮನೆ ಹಂಚಿಕೆ ಮಾಡುವುದು, ಇ-ಸ್ವತ್ತು ನೋಂದಣಿಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಹಾಗೂ ನಗರದ ರಸ್ತೆ ಗುಂಡಿಗಳ ದುರಸ್ತಿಗೆ ಆಗ್ರಹಿಸಲಾಗುವುದು ಎಂದರು.
ನಗರದ 24/7 ಕುಡಿಯುವ ನೀರಿನ ಪೂರೈಕೆಯಲ್ಲಿನ ವ್ಯತ್ಯಯ, ಬೀದಿ ದೀಪಗಳ ನಿರ್ವಹಣೆ, ಸ್ವಚ್ಛತೆ, ರೋಟರಿ ಅನಿಲ ಚಿತಾಗಾರದ ದುರಸ್ತಿ ಹಾಗೂ ಪಶುವೈದ್ಯಕೀಯ ಅಂಬುಲೆನ್ಸ್ ಸೇವೆಯನ್ನು ಸರಿಪಡಿಸಬೇಕೆಂದು ಅವರು ಆಗ್ರಹಿಸಿದರು. ಕೊಳಚೆ ಪ್ರದೇಶದ ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸುವುದು ಹಾಗೂ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಈ ಹೋರಾಟದ ಪ್ರಮುಖ ಉದ್ದೇಶವಾಗಿದೆ. ಒಂದು ವೇಳೆ ಪಾಲಿಕೆ ಆಡಳಿತವು ಕಾಲಮಿತಿಯೊಳಗೆ ಈ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಪಾಲಿಕೆಗೆ ಮುತ್ತಿಗೆ ಹಾಕಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
Protest Against Shivamogga City Corporation on Jan 3
