ಶುಗರ್ ಫ್ಯಾಕ್ಟರಿ ಜಾಗದ ಸರ್ವೆ ವಿಚಾರದಲ್ಲಿ ಸಿಡಿದೆದ್ದ ಮಲವಗೊಪ್ಪದ ಜನ! ಏನಾಯ್ತು ಓದಿ!

Shivamogga | Feb 2, 2024 |  ಶಿವಮೊಗ್ಗದ ಶುಗರ್ ಪ್ಯಾಕ್ಟರಿ ಜಾಗದ ವಿಚಾರ ದಿನದಿಂದ ದಿನಕ್ಕೆ ಸಾಕಷ್ಟು ವಿವಾದವೆಬ್ಬಿಸುತ್ತಿದೆ. ಹೈಕೋರ್ಟ್​ನ ಆದೇಶದಂತೆ ಅಧಿಕಾರಿಗಳು ಸರ್ವೆ ಕಾರ್ಯ ನಡೆಸ್ತಿದ್ದಾರೆ. 

ಆದರೆ, ಸ್ಥಳೀಯ ಜನರನ್ನು ಶುಗರ್ ಫ್ಯಾಕ್ಟರಿ ವಿಚಾರದಲ್ಲಿ ಎತ್ತಂಗಡಿ ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದಲೇ ಕೇಳಿಬಂದಿದೆ. ಸ್ಥಳೀಯರನ್ನ ಒಕ್ಕಲೆಬ್ಬಿಸ್ತಿರುವ ವಿಚಾರದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇದೆ ಎಂದು ನಾಗರಿಕರು ಆರೋಪಿಸ್ತಿದ್ದಾರೆ  

ಶುಗರ್ ಫ್ಯಾಕ್ಟರಿ ಜಾಗ

ಸ್ಥಳೀಯ ಸಂಸ್ಥೆಗಳಿಗೆ ನೀರು, ಕಂದಾಯ ಕಟ್ಟುತ್ತಿರುವ ಮನೆಗಳನ್ನು ಸಹ ಒಕ್ಕಲೆಬ್ಬಿಸಲಾಗುತ್ತಿದೆ. ಸಂಬಂಧವಿಲ್ಲದ ಜಾಗದಲ್ಲಿಯು  ಸ್ಥಳೀಯ ಜನರನ್ನ ಬೀದಿಪಾಲು ಮಾಡಲಾಗುತ್ತಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಶಿವಮೊಗ್ಗ ಜನಪ್ರತಿನಿಧಿಗಳು, ಮುಖಂಡರು , ಹೋರಾಟಗಾರರು ಧ್ವನಿ ಎತ್ತುತ್ತಿಲ್ಲ. 

ಇದರ ನಡುವೆ ಶಿವಮೊಗ್ಗ ನಗರದ ಮಲವಗೊಪ್ಪದ ಸಮೀಪ, ಜನವಸತಿ ಜಾಗದಲ್ಲಿಯೇ ಅಧಿಕಾರಿಗಳು ಸರ್ವೆ ಮಾಡಲು ಬಂದಿದ್ದು, ಅವರನ್ನ ಸ್ಥಳೀಯರು ತೀರಾಮಾರಾ ತರಾಟೆ ತೆಗದುಕೊಂಡಿದ್ದಾರೆ. ಸುಳ್ಳು ಹೇಳಿ ಅಧಿಕಾರಿಗಳು ಜನವಸತಿ ಪ್ರದೇಶದಲ್ಲಿ ಸರ್ವೆ ಮಾಡಲು ಬಂದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜನರ ವಿರೋಧ ಹೆಚ್ಚಾಗುತ್ತಲೇ ಅಧಿಕಾರಿಗಳು ಜಾಗ ಖಾಲಿ ಮಾಡಿದ್ದಾರೆ. 

ಹೈಕೋರ್ಟ್ ಆದೇಶ

ಶುಗರ್ ಫ್ಯಾಕ್ಟರಿ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ನ ಆದೇಶದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೆ ನಡೆಸ್ತಿದ್ದಾರೆ. ಇದೇ ರೀತಿಯಲ್ಲಿ ಮಲವಗೊಪ್ಪದ ರಾಮಮಂದಿರದ ಹಿಂಭಾಗ ಸರ್ವೆ 71, 73, 50 ಮತ್ತು 55 ರಲ್ಲಿ  ಅಧಿಕಾರಿಗಳು ಸರ್ವೆಗೆ ಮುಂದಾಗಿದ್ದಾರೆ. ಈ ವೇಳೆ ಸ್ಥಳೀಯರಿಗೆ ಖಾಲಿ ಜಾಗವನ್ನ ಸೈಟು ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ ಎಂಬುದು ಪ್ರತಿಭಟನೆ ನಡೆಸಿದ ಸ್ಥಳೀಯರ ಆರೋಪವಾಗಿದೆ. 

ಮೇಲ್ಕಂಡ ಸರ್ವೆ ನಂಬರ್​ಗಳಲ್ಲಿರುವ ಜಾಗದಲ್ಲಿ  ಹಕ್ಕುಪತ್ರ ಪಡೆದವರು, ಕಂದಾಯ ರಿಜಿಸ್ಟೇಷನ್ ಆದವರು, ಹೀಗೆ ಸ್ವಯಾರ್ಜಿತ ಸ್ವತ್ತುಗಳಿವೆ. ಇದರ ನಡುವೆ ಆಧಿಕಾರಿಗಳು ಖಾಲಿ ಜಾಗದ ಸರ್ವೆಗೆ ಬಂದಿರುವುದು ಸ್ಥಳೀಯರಿಗೆ ಅನುಮಾನ ಮೂಡಿಸಿದೆ. ಆ ಬಳಿಕ ಸ್ಥಳೀಯರಿಗೆ ಶುಗರ್ ಫ್ಯಾಕ್ಟರಿಗೆ ಸೇರಿದ ಜಾಗಕ್ಕೆ ಸಂಬಂಧಿಸಿದಂತೆ ಸರ್ವೆಗೆ ಅಧಿಕಾರಿಗಳು ಬಂದಿದ್ದಾರೆ ಎಂದು ಸ್ಥಳೀಯರಿಗೆ ಗೊತ್ತಾಗಿದೆ. 

ಮಲವಗೊಪ್ಪ ವಿರೋಧ

ವಿಷಯ ಗೊತ್ತಾಗುತ್ತಲೇ ಅಧಿಕಾರಿಗಳನ್ನ ಅಡ್ಡಗಟ್ಟಿದ ಸ್ಥಳೀಯರು ತರಾಟೆ ತೆಗೆದುಕೊಂಡಿದ್ದಾರೆ. ಸಮಾಧಾನ ಮಾಡಲು ಮುಂದಾದ ಪೊಲೀಸರ ವಿರುದ್ಧವೂ ಪ್ರತಿಭಟಿಸಿದ ಸ್ಥಳೀಯರು ಸ್ಥಳಕ್ಕೆ ಡಿಸಿ ಬರಬೇಕು ಎಂದು ಪಟ್ಟುಹಿಡಿದಿದ್ದಾರೆ. ಜನರ ವಾಗ್ವಾದ ಹೆಚ್ಚಾಗುತ್ತಲೇ ಅಲ್ಲಿಂದ ಅಧಿಕಾರಿಗಳು ತೆರಳಿದ್ದಾರೆ. 

ಇನ್ನೂ ಈ ಭಾಗದಲ್ಲಿ ಸ್ಥಳೀಯರ ಹೋರಾಟ ದೊಡ್ಡಮಟ್ಟದಲ್ಲಿ ಸಾಗುತ್ತಿದೆ. ಸ್ಥಳೀಯರೇ ಒಂದಾಗುತ್ತಿದ್ದು ಸುತ್ತಮುತ್ತ ಹಳ್ಳಿಯಲ್ಲಿ ಅಧಿಕಾರಿಗಳ ಸರ್ವೆಗೆ ಅವಕಾಶ ನೀಡುತ್ತಿಲ್ಲ.ಇನ್ನೂ ಜನರ ವಿರೋಧದ ಹಿನ್ನೆಲೆಯಲ್ಲಿ  ಪೊಲೀಸ್ ಇಲಾಖೆ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸುತ್ತಿದೆ.

ತುಂಗಭದ್ರಾ ಸಕ್ಕರೆ ಕಾರ್ಖಾನೆ

ಇನ್ನೂ 25 ವರ್ಷಗಳ ಹಿಂದೆ ಮುಚ್ಚಲಾಗಿರುವ ತುಂಗಭದ್ರಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಸುಮಾರು 2 ಸಾವಿರ ಎಕೆರೆ ಭೂಮಿಗೆ ಸಂಬಂಧಿಸಿದಂತೆ ಹೈಕೋರ್ಟ್​ ಸರ್ವೆ ಕಾರ್ಯಕ್ಕೆ ಆದೇಶ ನೀಡಿದೆ. ಇದೇ ಫೆಬ್ರವರಿ 12 ರೊಳಗೆ ಸರ್ವೆ ಕಾರ್ಯ ಮುಗಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ  ಶಿವಮೊಗ್ಗ ತಾಲೂಕಿನ ಜಾವಳ್ಳಿ, ಹಕ್ಕಿಪಿಕ್ಕಿ ಕ್ಯಾಂಪ್,  ಬಸಾಪುರ, ಹಸೂಡಿ ಸೇರಿದಂತೆ ಹಲವು ಗ್ರಾಮಸ್ಥರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಭೂಮಿಯ ಹಕ್ಕುಗಾರಿಕೆಯ ವಿಚಾರದಲ್ಲಿ ಈ ಭಾಗದಲ್ಲಿ ಹಲವು ಗೊಂದಲಗಳಿವೆ. ಆದಾಗ್ಯು ಸಾವಿರಾರು ಮಂದಿ ಇಲ್ಲಿಯೇ ವಾಸವಿದ್ದು ಕೃಷಿ ಜೀವನ ನಡೆಸುತ್ತಿದ್ದಾರೆ. ಇದೀಗ ಸರ್ವೆ ಕಾರ್ಯ ನಡೆಸ್ತಿರುವುದರಿಂದ ರೈತರು ಭೂಮಿಹಕ್ಕಿನ ಹೋರಾಟಕ್ಕೆ  ಇಳಿದಿದ್ದಾರೆ. ತಮ್ಮ ಜಾಗವನ್ನು  ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಅಲ್ಲದೆ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು ಹೋರಾಟಕ್ಕೆ ಬೆಂಬಲ ಕೋರುತ್ತಿದ್ದಾರೆ 


Leave a Comment