national Level Tagaru Kalaga ಶಿವಮೊಗ್ಗ | ನಮ್ಮೂರ ಬಳಗದ ವತಿಯಿಂದ ಫೆಬ್ರವರಿ 15ರಂದು ಅಲ್ಲಮಪ್ರಭು ಮೈದಾನದಲ್ಲಿ ರಾಷ್ಟ್ರ ಮಟ್ಟದ ಭಾರಿ ಟಗರು ಕಾಳಗವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕುರಿತು ನಮ್ಮೂರ ಬಳಗದ ಪ್ರಧಾನ ಸಂಚಾಲಕ ಕೆ. ರಂಗನಾಥ್ ಅವರು ಕಾಳಗದ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

National Level Tagaru Kalaga ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಅಲ್ಲಮಪ್ರಭು ಮೈದಾನದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರ ಮಟ್ಟದ ಟಗರು ಕಾಳಗವನ್ನು ಆಯೋಜಿಸಿದ್ದೇವೆ. ಈ ಕಾಳಗದಲ್ಲಿ ರಾಜ್ಯದ ಅಷ್ಟೇ ಅಲ್ಲದೆ ರಾಷ್ಟ್ರ ಮಟ್ಟದ ಬಲಿಷ್ಠ ಟಗರುಗಳು ಸೆಣಸಾಡಲಿವೆ. ಇದರಲ್ಲಿ 8 ಹಲ್ಲು, 6 ಹಲ್ಲು, 4 ಹಲ್ಲು ಹಾಗೂ 2 ಹಲ್ಲಿನ ಮರಿಗಳಿಗೆ ಪ್ರತ್ಯೇಕ ಪಂದ್ಯಾವಳಿಗಳು ನಡೆಯಲಿದ್ದು, ಎಲ್ಲ ವಿಭಾಗಗಳಿಗೂ ವಿವಿಧ ಟ್ರೋಫಿ ಹಾಗೂ ನಗದು ಬಹುಮಾನವನ್ನು ನಿಗದಿಪಡಿಸಲಾಗಿದೆ ಎಂದರು.
ಬಹುಮಾನದ ವಿವರ ನೀಡಿದ ಅವರು, 8 ಹಲ್ಲಿನ ಟಗರು ಕಾಳಗದಲ್ಲಿ ಪ್ರಥಮ ಸ್ಥಾನ ಪಡೆಯುವ ಟಗರಿಗೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಟ್ರೋಫಿಯೊಂದಿಗೆ 1,01,001 ರೂಪಾಯಿ ನಗದು ಬಹುಮಾನ ನೀಡಲಾಗುವುದು. ದ್ವಿತೀಯ ಸ್ಥಾನಕ್ಕೆ 44,444 ರೂಪಾಯಿ ಹಾಗೂ ತೃತೀಯ ಸ್ಥಾನಕ್ಕೆ 22,222 ರೂಪಾಯಿ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು. ಈ ವಿಭಾಗಕ್ಕೆ 2,500 ರೂಪಾಯಿ ಪ್ರವೇಶ ಶುಲ್ಕವಿರುತ್ತದೆ ಎಂದು ತಿಳಿಸಿದರು.
ಇನ್ನು 6 ಹಲ್ಲಿನ ಟಗರು ಕಾಳಗದಲ್ಲಿ ಮೊದಲ ಸ್ಥಾನ ಪಡೆಯುವ ಟಗರಿಗೆ ‘ವೀರ ಶಿವಪ್ಪ ನಾಯಕ’ ಟ್ರೋಫಿಯೊಂದಿಗೆ 66,666 ರೂಪಾಯಿ ನಗದು ಬಹುಮಾನ, ದ್ವಿತೀಯ ಸ್ಥಾನಕ್ಕೆ 33,333 ರೂಪಾಯಿ ಹಾಗೂ ತೃತೀಯ ಸ್ಥಾನಕ್ಕೆ 11,111 ರೂಪಾಯಿ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು. ಇದಕ್ಕೆ 2,000 ರೂಪಾಯಿ ಪ್ರವೇಶ ಶುಲ್ಕವಿರಲಿದೆ.
4 ಹಲ್ಲಿನ ಕುರಿ ಕಾಳಗದಲ್ಲಿ ಮೊದಲ ಸ್ಥಾನ ಪಡೆಯುವ ಟಗರಿಗೆ ‘ಶ್ರೀ ಭಗೀರಥ’ ಟ್ರೋಫಿಯೊಂದಿಗೆ 44,444 ರೂಪಾಯಿ, ದ್ವಿತೀಯ ಸ್ಥಾನಕ್ಕೆ 22,222 ರೂಪಾಯಿ ಹಾಗೂ ತೃತೀಯ ಸ್ಥಾನಕ್ಕೆ 9,999 ರೂಪಾಯಿ ನಗದು ಹಣದೊಂದಿಗೆ ಟ್ರೋಫಿ ನೀಡಲಾಗುತ್ತಿದ್ದು, ಇದರ ಪ್ರವೇಶ ಶುಲ್ಕ 1,500 ರೂಪಾಯಿ ಇರಲಿದೆ ಎಂದರು.
ಕೊನೆಯದಾಗಿ 2 ಹಲ್ಲಿನ ಟಗರು ಕಾಳಗದಲ್ಲಿ ಪ್ರಥಮ ಸ್ಥಾನ ಪಡೆಯುವವರಿಗೆ ‘ವೀರ ಸಿಂಧೂರ ಲಕ್ಷ್ಮಣ’ ಟ್ರೋಫಿಯೊಂದಿಗೆ 22,222 ರೂಪಾಯಿ, ದ್ವಿತೀಯ ಸ್ಥಾನಕ್ಕೆ 11,111 ರೂಪಾಯಿ ಹಾಗೂ ತೃತೀಯ ಸ್ಥಾನಕ್ಕೆ 5,555 ರೂಪಾಯಿ ನಗದು ಹಣದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಇದಕ್ಕೆ 1,000 ರೂಪಾಯಿ ಪ್ರವೇಶ ಶುಲ್ಕವಿರಲಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಸಮಯದ ಬಗ್ಗೆ ಮಾಹಿತಿ ನೀಡಿದ ಅವರು, ಕಾಳಗವು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಆರಂಭವಾಗಲಿದೆ. ಹೊರ ರಾಜ್ಯಗಳಿಂದಲೂ ಟಗರುಗಳು ಆಗಮಿಸುವುದರಿಂದ ಮರುದಿನ ಮುಂಜಾನೆ 3 ಗಂಟೆಯವರೆಗೆ ಕಾಳಗ ನಡೆಯುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕಾಗಿ ‘ಶಾಂತವೇರಿ ಗೋಪಾಲಗೌಡ’ರ ಹೆಸರಿನಲ್ಲಿ ಭವ್ಯ ವೇದಿಕೆಯನ್ನು ಸಿದ್ಧಪಡಿಸಲಾಗಿದ್ದು, ಅಂದು ಸುಮಾರು 25 ಸಾವಿರ ಜನ ಸೇರುವ ನಿರೀಕ್ಷೆಯಿದೆ. ಮಹಿಳಾ ವೀಕ್ಷಕರಿಗಾಗಿ ಪ್ರತ್ಯೇಕ ‘ಪಿಂಕ್ ಗ್ಯಾಲರಿ’ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.
National Level Tagaru Kalaga 2026 Prize Details



