ವಾಂಖೆಡೆಯಲ್ಲಿ ಮೊಹಮ್ಮದ್ ಶಮಿ ವಿಲನ್ ಆಗುತ್ತಿದ್ರು! 7 ವಿಕೆಟ್ ಬೀಳಿಸಿದ ಶಮಿ ಬಾಯ್​ಗೆ ಎದುರಾಗಿದ್ದೇನು ಗೊತ್ತಾ?

KARNATAKA NEWS/ ONLINE / Malenadu today/ Nov 16, 2023 SHIVAMOGGA NEWS

Shivamogga | Malnenadutoday.com |  ನಿನ್ನೆ ಮುಂಬೈನ ಸ್ಟೇಡಿಯಂನಲ್ಲಿ ನಡೆದಿದ್ದು,  ಸೆಮಿಫೈನಲ್ ಅಲ್ಲಾ , ಬದಲಾಗಿ  ಶಮಿ ಫೈನಲ್​ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ವರ್ಡ್ ಹರಿದಾಡುತ್ತಿದೆ. ಆದರೆ ಮೊಹಮ್ಮದ್ ಶಮಿ ಎನ್ನುವ ಅದ್ಭುತ ವ್ಯಕ್ತಿ ಮತ್ತೆ ಸಂಕಷ್ಟ , ಟೀಕೆ, ಅವಮಾನ ಎದುರಿಸುವಂತಹ ಒಂದು ಘಟನೆ ನಿನ್ನೆ ನಡೆದಿತ್ತು. ಕಣ್ತಪ್ಪಿನಿಂದ ಕೈತಪ್ಪಿದ ಆ ಒಂದು ತಪ್ಪಿಗೆ ಆತ ದೊಡ್ಡ ಟೀಕೆಯನ್ನು ಎದುರಿಸಬೇಕಾಗಿತ್ತು. ಹಾಗಿದ್ದರೂ ನೋವನ್ನೆ ತಿಂದುಂಡು ಟೀಂ ಇಂಡಿಯಾವನ್ನು ಫೈನಲ್​ನ ಮೆಟ್ಟಿಲು ಮುಟ್ಟಿಸಿದ ಶಮಿ..ತನ್ನ ಆಕಸ್ಮಿಕ ತಪ್ಪನ್ನು ಏಳು ವಿಕೆಟ್​ನ ಗೊಂಚಲಿನೊಂದಿಗೆ ನಿವಾಳಿಸಿ ಬಿಸಾಡಿಸಿದ್ದಾರೆ.. 

ಏನದು? 

ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್​ಗಳ ರೆಕಾರ್ಡ್​ಗಳು ಹುಡಿಯಾಗುವುದು ಲೆಕ್ಕವೇ ಅಲ್ಲ..ಏಕೆಂದರೆ ಐವತ್ತು ಓವರ್​ಗಳಲ್ಲಿ ಒಬ್ಬ ಆಟಗಾರ ಜೀವಮಾನದ ಸಾಧನೆಗಳನ್ನು ಮಾಡಲು ಸ್ಟೇಡಿಯಂನ ಉದ್ದಗಲದಷ್ಟೆ ಅವಕಾಶಗಳು ಇರುತ್ತದೆ. ಆವುಗಳನ್ನು ದಿಟ್ಟವಾಗಿ ಬಳಸಿಕೊಳ್ಳುವುದೇ ದೊಡ್ಡ ಸಾಧನೆ.. 

ನಿನ್ನೆಯು ಇಂತಹ ಹಲವು ದಾಖಲೆಗಳು ದ್ವಂಸಗೊಂಡವು..ಕ್ರಿಕೆಟ್ ದೇವರು ಸಚಿನ್​ರ ದಾಖಲೆಯನ್ನು ವಿರಾಟ್ ಕೊಹ್ಲಿ ಮೀರಿದ ಮರುಕ್ಷಣ ಇಡೀ ದೇಶ ಕೊಹ್ಲಿಯನ್ನ  ಮನಸಾರೆ ಹೊಗಳಿತ್ತು.. ಕ್ರಿಕೆಟ್ ದೇವರ ಮುಂದೆ ಕೊಹ್ಲಿ ತನ್ನ ಸಾಧನೆಯನ್ನು ಇಟ್ಟು ತಲೆಬಾಗಿಸಿದ್ದರು.. ಇನ್ನೊಂದೆಡೆ ಶ್ರೇಯಸ್​ ಅಯ್ಯರ್ ಸೆಂಚುರಿಯು ದಾಖಲೆ ಬರೆಯಿತು. 

ಆದರೆ ಬ್ಯಾಟ್ಸ್​ಮನ್​ಗಳಿಗೆ ಇರುವಷ್ಟು ಅವಕಾಶ ಬೌಲರ್​ಗಳಿಗೆ ಇರುವುದಿಲ್ಲ. ಸೀಮಿತ ಹತ್ತು ಓವರ್​ಗಳಲ್ಲಿಯೇ ತನ್ನೆಲ್ಲಾ ರೆಕಾರ್ಡ್​ಗಳನ್ನ ದಾಖಲಿಸಬೇಕು ಒಬ್ಬ ಬೌಲರ್​. ಈ ನಡುವೆ ಏನೆ ಹೆಚ್ಚು ಕಮ್ಮಿಯಾದರೂ ಅಲ್ಲಿ ರೆಕಾರ್ಡ್​, ರೆಕಾರ್ಡ್ ಆಗದು. ಅಂತಹ ಸನ್ನಿವೇಶದಲ್ಲಿಯೇ ಶಮಿ ನಿರ್ಮಿಸಿದ್ದು ಕೆಜಿಎಫ್​ ಸ್ಟೈಲ್​ನ ದಾಖಲೆ.. 

ಯಶ್, ಸಿನಿಮಾದಲ್ಲಿ ಒಂದು ಡೈಲಾಗ್ ಹೊಡೆಯುತ್ತಾರೆ. ನಾನು ಹೊಡೆದವರೆಲ್ಲಾ ಗ್ಯಾಂಗ್​ಸ್ಟರ್​ಗಳೆ ಎಂಬಂತಹ ಮಾತದು. ನಿನ್ನೆ ಶಮಿಯು ಅಷ್ಟೆ,  ಆತ ತೆಗೆದ ವಿಕೆಟ್​ಗಳೆಲ್ಲಾ ಕಿವೀಸ್​ನ ಹೊಡೆಬಡಿಯ ದಾಂಡಿಗರೇ ಆಗಿದ್ದರು. ಇದರ ನಡುವೆ ಶಮಿಗೆ ಒಂದು ಕ್ಯಾಚ್​ ಜೀವಮಾನದ ಕಳಂಕ ತಂದಿಡುವ ಸಾಧ್ಯತೆ ಎದುರಾಗಿತ್ತು.. ನಿರ್ಣಾಯಕ ಪಂದ್ಯದಲ್ಲಿ ಕೈ ಬಿಟ್ಟರು ಕ್ಯಾಚ್ ಎನ್ನುವುದೇ ಸಾಕಾಗಿತ್ತು ಕೆಲಸವಿಲ್ಲದೇ ಕುಳಿತಿರುವ ಟೀಕಾಕಾರರಿಗೆ .. ಆದರೆ ಶಮಿ ಬಾಯ್ ಅದ್ಯಾವುದಕ್ಕೂ ಅವಕಾಶ ನೀಡಲಿಲ್ಲ..

READ :ನಾಳೆಯಿಂದ ಶಿವಮೊಗ್ಗದಲ್ಲಿ ಕ್ರಿಕೆಟ್ ಹಬ್ಬ! Under 15 ಮಹಿಳಾ ಕ್ರಿಕೆಟ್ ಪಂದ್ಯಾವಳಿಯ ವಿವರ ಇಲ್ಲಿದೆ!

28 ಓವರ್ ನ ನಾಲ್ಕನೆ ಬಾಲ್ ಅದು, ಜಸ್ಪ್ರಿತ್ ಬುಮ್ರಾ ಎಸೆದ ಚೆಂಡನ್ನ ನ್ಯೂಜಿಲೆಂಡ್​​ನ ಆಟಗಾರ ಮೇಲಕ್ಕೆತ್ತಿ ಹೊಡೆದಿದ್ದ. ಆಕಾಶವನ್ನು ಚುಂಬಿಸ್ತಿದ್ದ ಚೆಂಡು ನೇರವಾಗಿ ಮೊಹಮ್ಮದ್ ಶಮಿ ಇದ್ದ ಜಾಗದಲ್ಲಿ ಬೀಳುತ್ತಿತ್ತು. ಅದನ್ನು ಹಿಡಿಯುವ ಬರದಲ್ಲಿ ಶಮಿಯ ಕೈಯಿಂದ ಚೆಂಡು ಜಾರಿ ಕೆಳಕ್ಕೆ ಬಿದ್ದಿತ್ತು. ಇದನ್ನ ನೋಡಿದ ಬುಮ್ರಾ ಮುಖ ಮುಚ್ಚಿಕೊಂಡಿದ್ದರು.. 

180 ಸ್ಕೋರ್ ಆದರೂ ಕೇವಲ 2 ವಿಕೆಟ್ ಕಳೆದುಕೊಂಡಿದ್ದ ಕಿವೀಸ್​ ನಮ್ದೆ ಗೆಲುವು ಅನ್ನುವಷ್ಟರ ಮಟ್ಟಿಗೆ ಪಂದ್ಯವನ್ನ ತನ್ನೆಡೆಗೆ ಸೆಳೆದುಕೊಂಡಿತ್ತು. ವಿಲಿಯಮ್ಸ್​ಸನ್​ ಹೊಡೆದಿದ್ದ ಬಾಲ್​ನ​ ಕ್ಯಾಚ್ ಡ್ರಾಪ್ ಮಾಡಿದ್ದರು ಶಮಿ. ಇಡೀ ಸ್ಟೇಡಿಯಂ ತೆಗೆದುಕೊಂಡಿದ್ದ ನಿಟ್ಟುಸಿರನ್ನ ….ನೋ…ಎನ್ನುತ್ತಲೇ ಬಿಟ್ಟಿತ್ತು… ಟೀಂ ಇಂಡಿಯಾ ಆಟಗಾರರು ಶಮಿಯನ್ನ ಒಮ್ಮೆ ನೋಡಿ ಮುಖದಲ್ಲಿಯೇ ಬೇಸರ ವ್ಯಕ್ತಪಡಿಸಿದ್ದರು.. 

ನಿನ್ನೆ ವಾಂಖೆಡೆಯಲ್ಲಿ ಶಮಿ ಏಳರ ಸೇಡು (ದೋನಿ ಜರ್ಸಿ ನಂಬರ್​) ತೀರಿಸಿಕೊಳ್ಳದೇ ಹೋಗಿದ್ದರೆ, ಆತನನ್ನು ಟೀಕಾಸ್ವಾಮಿಗಳು ಖಳನಾಯಕನ ಸ್ಥಾನದಲ್ಲಿ ನಿಲ್ಲಿಸುತ್ತಿದ್ದರು. ಆದರೆ ಕಷ್ಟಗಳನ್ನೆ ನುಂಗಿ ನೀರು ಕುಡಿದಿರುವ ಶಮಿಗೆ ಬಿಟ್ಟ ಕ್ಯಾಚ್​ ಕೂಡ ಹೊಸ ರೆಕಾರ್ಡ್​ಗೆ ದಾರಿ ಮಾಡಿಕೊಟ್ಟಿತ್ತು. 

ಕ್ಯಾಚ್ ಬಿಟ್ಟಿದ್ದ ಶಮಿ, ನ್ಯೂಜಿಲೆಂಡ್​ನ ಆಟಗಾರರನ್ನ, ಅಕ್ಷರಶಃ ದಾಳಿಕೋರರನ್ನು ಹತ್ತಿಕ್ಕುವ ಹಾಗೆ ಹತ್ತಿಕ್ಕಿದರು. ಆದರೆ ಎದುರಾಳಿಗೆ ಅವಮಾನವಾಗುವಂತೆ ಎಲ್ಲಿಯು ನಡೆದುಕೊಳ್ಳದ ಶಮಿ,, ಜಸ್ಟ್ ತನ್ನ ಮಾಮೂಲಿ ಸಿಗ್ನೇಚರ್ ಸ್ಟೈಲ್​ನಲ್ಲಿಯೇ ವಿಕೆಟ್ ತೆಗೆದ ವಿಕ್ಟರಿಯನ್ನ ಸೂಚಿಸಿದ್ದರು. ಅಪಾಯಕಾರಿ ಬ್ಯಾಟ್ಸ್​ಮನ್​ಗಳನ್ನ  ಪೆವಿಲಿಯನ್​ಗೆ ಕಳುಹಿಸಿದ ಶಮಿಯ ಬೌಲಿಂಗ್​ನಲ್ಲಿ ಟೀಂ ಇಂಡಿಯಾ ಆಟಗಾರರು ಹಾಗೂ ಇಡೀ ಸ್ಟೇಡಿಯಂನ ಜನರು ಹುಚ್ಚೆದ್ದು ಕುಣಿದಿದ್ದರು. 

ಅಂದಹಾಗೆ ನಿನ್ನೆ ವಿಕೆಟ್ ಕಿತ್ತು ಹಾರಿಹೋಗುವಂತಹ ರೋಮಾಂಚಕ ಸೌಂಡ್​ ಕೇಳಿಬರಲಿಲ್ಲ. ಆದರೆ ರವೀಂದ್ರ ಜಡೇಜಾ ಎಲ್ಲಾದರೂ ಹೊಡೆಯಿರಿ, ಅಲ್ಲಿ ನಾನಿರುವೆ ಅಂತಾ ಕ್ಯಾಚ್ ಹಿಡಿಯುತ್ತಿದ್ರು.. ಆತನಲ್ಲಿ ಅದೇನು ಚಮತ್ಕಾರ ಇದೆಯೋ ಗೊತ್ತಿಲ್ಲ. ಆದರೆ ಗೆಲುವಿನ ಸಾಧನೆಗೆ ಯಾವಾಗಲೂ ಟೀಂ ಇಂಡಿಯಾದ ಮೊದಲ ಮೆಟ್ಟಿಲಾಗುತ್ತಾ ಬಂದಿದ್ದಾನೆ..ಮೊಹಮ್ಮದ್ ಶಮಿಯ ಸಾಧನೆಯ ಕ್ಯಾಚ್​ ಹಿಡಿದ ಜಡ್ಡುರದ್ದು ಸಹ ಒಂಥರಾ ರೆಕಾರ್ಡ್​… 


Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು