SHIVAMOGGA | Jan 12, 2024 | ಶಿವಮೊಗ್ಗ ನಗರದ ಫ್ರೀಡಂಪಾರ್ಕ್ನಲ್ಲಿ ಯುವನಿಧಿ ಯೋಜನೆ ಕಾರ್ಯಕ್ರಮ ಆರಂಭವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಂ ಡಿಕೆ ಶಿವಕುಮಾರ್ ರವರ ಆಗಮನದೊಂದಿಗೆ ಕಾರ್ಯಕ್ರಮ ಆರಂಭವಾಗಿದೆ. ಸಾವಿರಾರು ಜನರು ವಿದ್ಯಾರ್ಥಿಗಳು ಯುವಕರು ಫ್ರೀಡಂಪಾರ್ಕ್ನಲ್ಲಿ ಜಮಾಯಿಸಿದ್ದು, ಯುವನಿಧಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.
ಶಾಸಕ ಚನ್ನಬಸಪ್ಪರ ಬೆನ್ನುತಟ್ಟಿದ ಸಿದ್ದರಾಮಯ್ಯ
ಶಾಸಕ ಚೆನ್ನಬಸಪ್ಪರವರು ಈ ಹಿಂದೆ ಸಿದ್ದರಾಮಯ್ಯರವರನ್ನ ಟೀಕಿಸಿದ ವಿಚಾರಕ್ಕೆ ಸುದ್ದಿಯಾದವರು. ಸದ್ಯ ಅವರು ಶಿವಮೊಗ್ಗ ನಗರದ ಶಾಸಕರಾಗಿದ್ದಾರೆ.
ವಿಶೇಷ ಅಂದರೆ, ಫ್ರೀಡಂಪಾರ್ಕ್ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯರವರನ್ನ ಬಿಜೆಪಿ ಜನಪ್ರತಿನಿಧಿಗಳು ಮಾತನಾಡಿಸಿ ಸನ್ಮಾನಿಸಿದರು. ಈ ವೇಳೆ ಶಾಸಕ ಚನ್ನಬಸಪ್ಪರವರ ಕುಶಲೋಪರಿ ವಿಚಾರಿಸಿದ ಸಿದ್ದರಾಮಯ್ಯರವರು ಆತ್ಮೀಯವಾಗಿ ಮಾತನಾಡಿಸಿದರು.
ಇಷ್ಟೆ ಅಲ್ಲದೆ ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಒಂದು ತೆಂಗಿನ ಹಿಂಗಾರವನ್ನು ಬಿಡಿಸಿದ ಸಿಎಂ ಸಿದ್ದರಾಮಯ್ಯರವರು ಬಳಿಕ ಅಲ್ಲೆ ಚನ್ನಬಸಪ್ಪರವರಿಗೆ ಇನ್ನೊಂದು ಹಿಂಗಾರವನ್ನು ಬಿಡಿಸುವಂತೆ ಸೂಚಿಸಿದರು.
ಗಡಿಬಿಡಿಯಲ್ಲಿ ಹಿಂಗಾರದ ಬುಡ ಮುರಿಯಿತು. ಅದನ್ನ ಗಮನಿಸಿದ ಸಿಎಂ ಸಿದ್ದರಾಮಯ್ಯ ಚನ್ನಬಸಪ್ಪರವರ ಹೆಗಲಿಗೆ ಕೈ ಹಾಕಿ ತಮ್ಮತ್ತ ಸೆಳೆದುಕೊಂಡು ಭುಜವನ್ನ ತಟ್ಟಿದರು. ಅಲ್ಲದೆ ಖುಷಿಯಿಂದ ಹಾಸ್ಯ ಮಾಡಿದರು.
ಇವತ್ತಿನ ಕಾರ್ಯಕ್ರಮ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯಾದರೂ ಸಹ ಸಿಎಂ ಸಿದ್ದರಾಮಯ್ಯರವರು ವೇದಿಕೆಯಲ್ಲಿ ಬಿಜೆಪಿ ಜನಪ್ರತಿನಿಧಿಗಳನ್ನು ಆತ್ಮೀಯವಾಗಿ ಗೌರವಿಸಿದ್ದು ವಿಶೇಷವಾಗಿತ್ತು.