ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಮಹತ್ವದ ತಿರುವು ಸಿಕ್ಕಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರ ನೇತೃತ್ವದಲ್ಲಿ ಸಾಗರ ಜಿಲ್ಲಾ ಹೋರಾಟ ಸಮಿತಿಯ ನಿಯೋಗವು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಅಧಿಕೃತವಾಗಿ ಮನವಿ ಸಲ್ಲಿಸಿತು.

ಕಳೆದ ಕೆಲವು ತಿಂಗಳುಗಳಿಂದ ಸಾಗರದಲ್ಲಿ ಜಿಲ್ಲಾ ರಚನೆಗಾಗಿ ನಿರಂತರ ಹೋರಾಟಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಗೃಹ ಕಚೇರಿಯಲ್ಲಿ ನಡೆದ ಭೇಟಿಯ ಸಂದರ್ಭದಲ್ಲಿ, ಸಾಗರವನ್ನು ಜಿಲ್ಲೆಯನ್ನಾಗಿ ಘೋಷಿಸಲು ಅಗತ್ಯವಿರುವ ಶಿಫಾರಸುಗಳನ್ನು ಕಳುಹಿಸುವಂತೆ ಸಮಿತಿಯ ಸಂಚಾಲಕರು ಒತ್ತಾಯಿಸಿದರು. ಭೌಗೋಳಿಕ ವಿಸ್ತೀರ್ಣ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಸಾಗರ ಜಿಲ್ಲೆಯಾಗುವುದು ಅನಿವಾರ್ಯ ಎಂಬುದನ್ನು ನಿಯೋಗವು ಸಿಎಂ ಗಮನಕ್ಕೆ ತಂದಿತು.
ಹೋರಾಟ ಸಮಿತಿಯ ಮನವಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಾಗರ ಜಿಲ್ಲೆ ರಚನೆಯ ಕುರಿತು ತಾವು ಉತ್ಸುಕರಾಗಿದ್ದೇವೆ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸುವ ಭರವಸೆಯನ್ನೂ ಅವರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಸಾಗರ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕ ತೀ.ನಾ. ಶ್ರೀನಿವಾಸ್, ಮಾಜಿ ಎಂಎಲ್ಸಿ ಪ್ರಫುಲ್ಲಾ ಮಧುಕರ್, ಮಾಜಿ ಪುರಸಭಾ ಅಧ್ಯಕ್ಷೆ ನಂದಾ ಗೊಜನೂರು, ಹಿತಕರ್ ಜೈನ್, ಸುಂದರ್ ಸಿಂಗ್, ನಾಗರಾಜ್ ಗುಡ್ಡೇಮನೆ, ನಾಗರಾಜ್ ಎನ್.ಹೆಚ್, ಮಂಜಪ್ಪ, ತುಕಾರಾಂ ಶಿರಿವಾಳ ಹಾಗೂ ಧರ್ಮೇಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
MLA Belur Meets CM Over Sagara District Demand



