Meggan Hospital Shivamogga ಶಿವಮೊಗ್ಗ: ಶಿವಮೊಗ್ಗದ ಪ್ರತಿಷ್ಠಿತ ಮೆಗ್ಗಾನ್ ಬೋಧನಾ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಚಿಂತನೆ ಇದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.
ಇಂದು ಸಚಿವರು ಮೆಗ್ಗಾನ್ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ವೀಕ್ಷಣೆ ನಡೆಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಹಳ ದಿನಗಳಿಂದ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಬೇಕೆಂದುಕೊಂಡಿದ್ದೆ, ಇಂದು ಬಂದು ಮಾಹಿತಿ ಪಡೆದಿದ್ದೇನೆ. ಮೆಗ್ಗಾನ್ ಆಸ್ಪತ್ರೆಗೆ ದಿನಕ್ಕೆ 2,500ಕ್ಕೂ ಹೆಚ್ಚು ರೋಗಿಗಳು ಒಪಿಡಿ (ಹೊರರೋಗಿ ವಿಭಾಗ)ಗೆ ಬರುತ್ತಿದ್ದಾರೆ. ಕೇವಲ ಶಿವಮೊಗ್ಗ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಸಾಕಷ್ಟು ಜನ ಇಲ್ಲಿಗೆ ಬರುತ್ತಿದ್ದಾರೆ” ಎಂದು ಸಚಿವರು ತಿಳಿಸಿದರು. ಮೆಗ್ಗಾನ್ ಆಸ್ಪತ್ರೆಯು ವೈದ್ಯಕೀಯ ಶಿಕ್ಷಣ ವಿಭಾಗದ ಅಡಿಯಲ್ಲಿ ಬರುವುದರಿಂದ, ಅದಕ್ಕೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಈಗಿರುವ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿಯಾಗಿ ಅಪ್‌ಡೇಟ್ ಮಾಡುವ ಯೋಚನೆಯಿದೆ ಎಂದರು
Meggan Hospital Shivamogga ಹೊಸ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಚರ್ಚೆ
ಸಾರ್ವಜನಿಕರ ಹಿತದೃಷ್ಟಿಯಿಂದ ಹೆಚ್ಚುವರಿ ಸೌಲಭ್ಯಗಳ ಅಗತ್ಯವಿದೆ ಎಂದು ಹೇಳಿದ ಸಚಿವರು, ಪ್ರಸ್ತುತ ಆಸ್ಪತ್ರೆ ಮೇಲೆ ಹೊರ ಹೆಚ್ಚಾಗಿರುವುದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಹೊಸ ಜಿಲ್ಲಾ ಆಸ್ಪತ್ರೆ ನಿರ್ಮಾಣದ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಮಾಹಿತಿ ನೀಡಿದರು. “ಹೊಸ ಜಿಲ್ಲಾ ಆಸ್ಪತ್ರೆ ಮಾಡುವ ಬಗ್ಗೆ ದಿನೇಶ್ ಗುಂಡೂರಾವ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಇದನ್ನು ಶಿವಮೊಗ್ಗದಲ್ಲೇ ಮಾಡಬೇಕು, ಬೇರೆ ತಾಲೂಕುಗಳಲ್ಲಿ ಮಾಡಿದರೆ ನಾವು ಹಿಂದೆ ಆರೋಪ ಮಾಡಿದಂತೆ ಆಗುತ್ತದೆ. ಹಿಂದೆ ಶಿಕಾರಿಪುರದಲ್ಲಿ ಮಾಡಿದ್ದರು, ಈಗ ಭದ್ರಾವತಿಯಲ್ಲಿ ಹೋಗಿ ಮಾಡಲು ಬರುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

Meggan Hospital Shivamogga ಎಂಆರ್‌ಐ ಮತ್ತು ನೀರು ಸರಬರಾಜು ಸಮಸ್ಯೆಗಳ ನಿವಾರಣೆಗೆ ಭರವಸೆ
ಎಂಆರ್‌ಐ ವಿಭಾಗದಲ್ಲಿ ರೋಗಿಗಳಿಗೆ ದಿನಾಂಕ ನೀಡುವ ಬಗ್ಗೆ ದೂರುಗಳು ಕೇಳಿಬಂದಿದ್ದು, ತುರ್ತು ಸಂದರ್ಭಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಸೇವೆ ನೀಡಲಾಗುವುದು, ಇಲ್ಲವಾದರೆ ನಂತರದ ದಿನಾಂಕ ನೀಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. “ಒಂದು ಎಂಆರ್‌ಐ ಮಾಡಲು 45 ನಿಮಿಷ ಬೇಕಾಗುತ್ತದೆ, ದಿನಕ್ಕೆ 20-25 ಪ್ರಕರಣಗಳನ್ನು ಮಾತ್ರ ನಿಭಾಯಿಸಲು ಸಾಧ್ಯ. ಆನ್‌ಲೈನ್ ಮೂಲಕ ಔಷಧಿ ನೀಡುವುದು ಕಷ್ಟವಾಗಿದೆ. ಈ ಸಮಸ್ಯೆಗಳನ್ನು ಬಗೆಹರಿಸೋಣ. ಹೆರಿಗೆ ಆಸ್ಪತ್ರೆಯಲ್ಲಿ ನೀರು ಸರಬರಾಜು ಸರಿಯಾಗುತ್ತಿಲ್ಲ ಎಂಬ ದೂರಿದೆ. ಆಸ್ಪತ್ರೆಯಲ್ಲಿ ರೋಗಿಗಳ ಲೋಡ್ ಹೆಚ್ಚಾದಾಗ ಇಂತಹ ಸಮಸ್ಯೆಗಳು ಸಹಜ. ಇವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
