ಶಿವಮೊಗ್ಗ: 45 ಲಕ್ಷ ರೂಪಾಯಿ ವಿಮಾ ಹಣವನ್ನು ಲಪಟಾಯಿಸುವ ದುರುದ್ದೇಶದಿಂದ ಸ್ವಂತ ಅಂಗವಿಕಲ ಸಹೋದರನನ್ನೇ ಹತ್ಯೆಗೈದಿದ್ದ ಅರೋಪಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.
21 ವರ್ಷದ ಯುವಕನಿಗೆ 20 ವರ್ಷ ಜೈಲು, 50 ಸಾವಿರ ದಂಡ! ಶಿವಮೊಗ್ಗ ಕೋರ್ಟ್ ಆದೇಶ
ಶಿಕಾರಿಪುರ ತಾಲೂಕಿನ ಅಮಟೆಕೊಪ್ಪ ನಿವಾಸಿ ಕುಮಾರ್ ಎಂಬಾತನ ಕ್ರಿಮಿನಲ್ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ನೇತೃತ್ವದ ಪೀಠವು, ಕೆಳ ಹಂತದ ನ್ಯಾಯಾಲಯದ ಆದೇಶವೇ ಸರಿಯಾಗಿದೆ ಎಂದು ತೀರ್ಪು ನೀಡಿದೆ.
Life Term Upheld ಘಟನೆ ಹಿನ್ನೆಲೆ
ಆರೋಪಿ ಕುಮಾರ್ 2015ರ ಏಪ್ರಿಲ್ ತಿಂಗಳಲ್ಲಿ ಮಾವನ ಮನೆಯಲ್ಲಿದ್ದ ತನ್ನ ಅಂಗವಿಕಲ ತಮ್ಮ ಉಮೇಶ್ನನ್ನು ನೋಡಿಕೊಳ್ಳುವ ನೆಪದಲ್ಲಿ ತನ್ನ ಮನೆಗೆ ಕರೆತಂದಿದ್ದನು. ಉಮೇಶ್ ಹೆಸರಿನಲ್ಲಿ 2012ರಲ್ಲೇ 20 ಲಕ್ಷ ರೂಪಾಯಿ ವಿಮೆ ಇತ್ತಾದರೂ ಅದರ ಕಂತುಗಳನ್ನು ಪಾವತಿಸಿರಲಿಲ್ಲ. ತಮ್ಮನನ್ನು ಮನೆಗೆ ಕರೆತರುತ್ತಿದ್ದಂತೆಯೇ ಆರೋಪಿ ಹಳೆಯ ಕಂತುಗಳನ್ನು ಪಾವತಿಸಿದ್ದಲ್ಲದೆ, ಹೊಸದಾಗಿ 25 ಲಕ್ಷ ರೂಪಾಯಿ ಮೊತ್ತದ ಮತ್ತೊಂದು ವಿಮಾ ಪಾಲಿಸಿಯನ್ನು ಮಾಡಿಸಿದ್ದನು. ಒಟ್ಟು 45 ಲಕ್ಷ ರೂಪಾಯಿ ಹಣವನ್ನು ದೋಚುವ ಕ್ರೂರ ಯೋಜನೆ ಇದರ ಹಿಂದೆ ಅಡಗಿತ್ತು.
ನಂತರ ವಿಮಾ ಪಾಲಿಸಿ ಮಾಡಿಸಿದ ಕೇವಲ ನಾಲ್ಕು ತಿಂಗಳಲ್ಲೇ ಉಮೇಶ್ನನ್ನು ಹತ್ಯೆಗೈದಿದ್ದ ಕುಮಾರ್, ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಸಂಚು ರೂಪಿಸಿದ್ದನು. 2015ರ ಮೇ 1ರಂದು ಬೆಳಗಿನ ಜಾವ ಶಿಕಾರಿಪುರ ಗ್ರಾಮೀಣ ಠಾಣಾ ವ್ಯಾಪ್ತಿಯ ರಸ್ತೆಯಲ್ಲಿ ಉಮೇಶ್ ಶವ ಪತ್ತೆಯಾಗಿತ್ತು. ವಾಯುವಿಹಾರಕ್ಕೆ ಹೋದಾಗ ವಾಹನ ಡಿಕ್ಕಿಯಾಗಿರಬಹುದು ಎಂದು ನಂಬಿಸಲು ಯತ್ನಿಸಲಾಗಿತ್ತು. ಆದರೆ ಮೃತನ ಮಾವ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ, ವಿಮಾ ಹಣಕ್ಕಾಗಿ ಅಣ್ಣನೇ ಈ ಕೊಲೆ ಮಾಡಿರುವುದು ಸಾಕ್ಷ್ಯಾಧಾರಗಳ ಸಮೇತ ದೃಢಪಟ್ಟಿತ್ತು.
ಪೊಲೀಸರ ತನಿಖಾ ವರದಿ ಮತ್ತು ಲಭ್ಯವಿರುವ ಗಟ್ಟಿ ಸಾಕ್ಷ್ಯಗಳನ್ನು ಪರಿಗಣಿಸಿದ ಹೈಕೋರ್ಟ್, ಆರೋಪಿಯ ಪರ ವಾದವನ್ನು ತಿರಸ್ಕರಿಸಿದೆ. ಹಣದ ಆಸೆಗಾಗಿ ರಕ್ತಸಂಬಂಧವನ್ನೇ ಬಲಿಕೊಟ್ಟ ಈ ಘೋರ ಕೃತ್ಯಕ್ಕೆ ಜೀವಾವಧಿ ಶಿಕ್ಷೆಯೇ ಸೂಕ್ತ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ತೀರ್ಪಿನ ಮೂಲಕ ಶಿಕಾರಿಪುರ ಭಾಗದಲ್ಲಿ ಸಂಚಲನ ಮೂಡಿಸಿದ್ದ ಈ ಕೊಲೆ ಪ್ರಕರಣಕ್ಕೆ ಅಂತಿಮವಾಗಿ ನ್ಯಾಯ ಸಿಕ್ಕಂತಾಗಿದೆ.
Life Term Upheld for Man Who Killed Brother


