Karnataka Public Schools ಶಿವಮೊಗ್ಗ: ರಾಜ್ಯದಲ್ಲಿ ₹ 3,000 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಿರುವ 800 ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಯೋಜನೆಗೆ ಮುಖ್ಯಮಂತ್ರಿಗಳು ನವೆಂಬರ್ ಎರಡನೇ ವಾರದಲ್ಲಿ ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಎಸ್.ಬಂಗಾರಪ್ಪ ಅವರು ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಗ್ರಾಮೀಣ ಭಾಗದಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆಯನ್ನು ತಗ್ಗಿಸಲು ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಈ ಕೆಪಿಎಸ್ ಶಾಲೆಗಳ ವಿದ್ಯಾರ್ಥಿಗಳನ್ನು ಮನೆಯಿಂದ ಶಾಲೆಗೆ ಕರೆತರಲು ಮತ್ತು ವಾಪಸ್ ಬಿಡಲು ಇಲಾಖೆಯಿಂದಲೇ ಉಚಿತವಾಗಿ ಬಸ್ ವ್ಯವಸ್ಥೆ ಮಾಡಲಾಗುವುದು. ಆಯಾ ಶಾಲೆಗಳ ಆಡಳಿತ ಮಂಡಳಿಗಳು ಬಸ್‌ನ ನಿರ್ವಹಣೆಯನ್ನು ನೋಡಿಕೊಳ್ಳಲಿವೆ ಎಂದು ವಿವರಿಸಿದರು.
ಹಾಗೆಯೇ ಶಿಕ್ಷಣ ಇಲಾಖೆಯಲ್ಲಿ ಬೃಹತ್ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಪದವಿಪೂರ್ವ ಕಾಲೇಜಿನ 800, ಸರ್ಕಾರಿ ಶಾಲೆಗಳ 13,000 ಹಾಗೂ ಅನುದಾನಿತ ಶಾಲೆಗಳ 6,000 ಶಿಕ್ಷಕರ ನೇಮಕಾತಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಲಾಗುವುದು ಎಂದರು.
ನೇಮಕಾತಿ ಪ್ರಕ್ರಿಯೆಗೆ ಪೂರ್ವಭಾವಿಯಾಗಿ, ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಅನ್ನು ಡಿಸೆಂಬರ್ 7ರಂದು ನಡೆಸಲಾಗುವುದು . ಟಿಇಟಿಗಾಗಿ ಅಕ್ಟೋಬರ್ 23ರಂದು ಅಧಿಸೂಚನೆ ಪ್ರಕಟಿಸಲಾಗುತ್ತದೆ. ಪರೀಕ್ಷೆಗೆ ಹಾಜರಾಗಲು ಇಚ್ಛಿಸುವ ಅಭ್ಯರ್ಥಿಗಳು ನವೆಂಬರ್ 9ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ 2.5 ವರ್ಷದ ಅವಧಿಯಲ್ಲಿಯೇ ಒಟ್ಟು 30,000ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸುವ ಮೂಲಕ ಟೀಕಾಕಾರರಿಗೆ ಸೂಕ್ತ ಉತ್ತರ ನೀಡಲಾಗುವುದು ಎಂದು ಸಚಿವ ಮಧು ಎಸ್.ಬಂಗಾರಪ್ಪ ಈ ಸಂದರ್ಭದಲ್ಲಿ ತಿಳಿಸಿದರು.

