Kantara movie : ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ‘ಕಾಂತಾರ: ಚಾಪ್ಟರ್ 1’ ಅಕ್ಟೋಬರ್ 2 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಇದರ ನಡುವೆ ಯಾವುದೇ ಸದ್ದಿಲ್ಲದೆ ಚಿತ್ರತಂಡ ಕನಕವತಿ ಎಂಬ ಪಾತ್ರದ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಿದ್ದು, ಈ ಪಾತ್ರದಲ್ಲಿ ಕನ್ನಡದ ಜನಪ್ರಿಯ ನಟಿ ನಟಿಸುತ್ತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಹೌದು ಕಾಂತಾರಾ ಚಾಪ್ಟರ್ 1 ಚಿತ್ರದಲ್ಲಿ ಸಪ್ತ ಸಾಗರದ ಆಚೆ ಎಲ್ಲೋ ಖ್ಯಾತಿಯ ರುಕ್ಮಿಣಿ ವಸಂತ್ ಕನಕವತಿಯಾಗಿ ಅಭಿನಯಿಸಲಿದ್ದಾರೆ. ಈ ಚಿತ್ರದಲ್ಲಿ ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರಾ ಅಥವಾ ಇನ್ಯಾವುದೇ ಪಾತ್ರ ನಿರ್ವಹಿಸುತ್ತಿದ್ದಾರ ಎಂದು ಕಾದು ನೋಡಬೇಕಿದೆ.
Kantara movie ಪೋಸ್ಟರ್ ನಲ್ಲಿ ಏನಿದೆ
ಇದುವರೆಗೆ ರುಕ್ಮಿಣಿ ಅವರು ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಇರಲಿಲ್ಲ. ಆದರೆ, ಇಂದು ಬಿಡುಗಡೆಯಾದ ಪೋಸ್ಟರ್ ನಲ್ಲಿ ರುಕ್ಮಿಣಿ ವಸಂತ್ ಅವರು ರಾಜಮನೆತನದ ಉಡುಪು, ಆಭರಣಗಳನ್ನು ಧರಿಸಿ ಸೌಮ್ಯವಾದ ನಗುವಿನೊಂದಿಗೆ ನಿಂತಿದ್ದಾರೆ. ಇದನ್ನು ಗಮನಿಸಿದರೆ, ಅವರು ಅರಮನೆಯ ರಾಣಿಯ ಪಾತ್ರದಲ್ಲಿ ನಟಿಸುತ್ತಿರಬಹುದು ಎಂದು ಊಹಿಸಲಾಗಿದೆ. ಈ ಹಿಂದೆ ಬಿಡುಗಡೆಯಾದ ಟೀಸರ್ ನಲ್ಲಿ ಇದು ಕದಂಬರ ಕಾಲದ ಕಥೆ ಎಂದು ಹೇಳಲಾಗಿದ್ದರಿಂದ, ಕನಕವತಿ ರಾಜಮನೆತನಕ್ಕೆ ಸೇರಿದ ಪಾತ್ರವ ಎಂದು ಕಾದು ನೋಡಬೇಕಿದೆ.
ರುಕ್ಮಿಣಿ ವಸಂತ್ ಅವರ ಹಿನ್ನೆಲೆ
ಬೀರ್ಬಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ರುಕ್ಮಿಣಿ, ನಂತರ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ತಮ್ಮ ಸಹಜ ಮತ್ತು ಮನಮುಟ್ಟುವ ನಟನೆಯ ಮೂಲಕ ಎಲ್ಲರ ಗಮನ ಸೆಳೆದರು. ಇದೀಗ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ಮೂಲಕ ಇನ್ನಷ್ಟು ಜನಪ್ರಿಯತೆ ಗಳಿಸಲು ಮುಂದಾಗಿದ್ದಾರೆ.
ಈಗಾಗಲೇ ಮೇಕಿಂಗ್ ವಿಡಿಯೋ ಮತ್ತು ಟೀಸರ್ ಗಳ ಮೂಲಕ ಭಾರಿ ಹೈಪ್ ಸೃಷ್ಟಿಸಿರುವ ‘ಕಾಂತಾರ: ಚಾಪ್ಟರ್ 1’ ಚಿತ್ರವು ಯಾವ ರೀತಿ ಮೂಡಿಬಂದಿದೆ ಎಂಬುದನ್ನು ನೋಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.
