Jp story : ಶಿವಮೊಗ್ಗ ನಗರದಲ್ಲಿ ಇಂದು ಬೆಳಗಿನ ಜಾವ ಸರ್ಕ್ಯೂಟ್ ಹೌಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿರುವುದು ದುರಂತವೇ ಸರಿ. ಇನ್ನೆರೆಡು ವರ್ಷ ಪೂರೈಸಿದ್ದರೆ. ವೈದ್ಯರಾಗಿ ಚೆನ್ನಾಗಿ ಬದುಕು ಕಟ್ಟಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಮಾಡಿದ ಅದೊಂದು ಸಣ್ಣ ತಪ್ಪು ಅವರ ಬದುಕನ್ನೇ ಬಲಿ ಪಡೆದಿದೆ. ಹೊನ್ನಾಳಿ ಮೂಲದ ಸಂದೀಪ್ ಮತ್ತು ಉಡುಪಿ ಮೂಲದ ಆದಿತ್ಯ ಇಂಟರ್ ನೆಲ್ ಎಕ್ಸಾಮ್ ಗೆ ರಾತ್ರಿಯೆಲ್ಲಾ ಓದಿದ್ದಾರೆ. ಬೆಳಿಗ್ಗೆ ಟೀ ಕುಡಿಯುವ ಸಲುವಾಗಿ ಇಬ್ಬರು ಬೈಕ್ ಏರಿ ಸರ್ಕ್ಯೂಟ್ ಹೌಸ್ ಬಳಿ ಬಂದಿದ್ದಾರೆ. ಆದರೆ ವೃತ್ತದ ಬಳಿ ಹಾಲಿನ ವಾಹನ ನೇರವಾಗಿ ಬೈಕ್ ಗೆ ಅಪ್ಪಳಿಸಿದೆ. ಪರಿಣಾಮ ಸಂದೀಪ್ ಮತ್ತು ಆದಿತ್ಯ ತೀವ್ರ ರಕ್ತ ಸ್ರಾವದಿಂದ ಬಳಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರ ಸಾವಿಗೆ ಕಾರಣವಾಗಿದ್ದು ಅದೇ ಹೆಲ್ಮೆಟ್.
Jp story : ಹೌದು ರಾತ್ರಿಯಿಂದ ಬೆಳಗಿನವರೆಗೆ ಓದಿದ ಇಬ್ಬರು ವಿದ್ಯಾರ್ಥಿಗಳು ಬೈಕ್ ಹತ್ತುವಾಗ ಹೆಲ್ಮೆಟ್ ಧರಿಸಿರಲಿಲ್ಲ ಎಂಬುದೇ ದುರಂತ. ಶಿವಮೊಗ್ಗ ನಗರದಲ್ಲಿ ಬಹುತೇಕ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸುವ ಗೋಜಿಗೆ ಹೋಗುವುದಿಲ್ಲ. ಪರಿಣಾಮ ಅಪಘಾತದಲ್ಲಿ ಸಾವಿಗೆ ಅದೇ ಹೆಲ್ಮೆಟ್ ಧರಿಸದಿರುವುದೇ ಕಾರಣವಾಗಿರುತ್ತದೆ. ಮೆಡಿಕಲ್ ಇಂಜಿನಿಂಯರಿಂಗ್ ಓದಿಸುವುದು ಪೋಷಕರಿಗೆ ಎಷ್ಟು ಕಷ್ಟದ ಕೆಲಸ ಎಂಬುದು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಅದರಲ್ಲೂ ಕಷ್ಟಪಟ್ಟು ನೀಟ್ ಎಕ್ಸಾಂ ಬರೆದು ಫ್ರೀ ಸೀಟ್ ಗಿಟ್ಟಿಸಿಕೊಳ್ಳುವ ವಿದ್ಯಾರ್ಥಿಗಳ ಕನಸು ದೊಡ್ಡದಾಗಿರುತ್ತದೆ. ಪೋಷಕರು ಫ್ರೀ ಸೀಟ್ ಸಿಕ್ಕರೂ ವರ್ಷಕ್ಕೆ ಹೊಂದಿಸಬೇಕಾದ ಹಣಕಾಸಿಗೆ ಸಾಕಷ್ಟು ಕಷ್ಟಪಡುತ್ತಾರೆ. ಶ್ರೀಮಂತರ ಮಕ್ಕಳು ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿರುವುದು ವಿರಳಾತಿ ವಿರಳ. ಮಿಡ್ಲ್ ಕ್ಲಾಸ್ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಲೇಜಿನಲ್ಲಿ ಓದುತ್ತಿದ್ದಾರೆ. ಸಂದೀಪ್ ಮತ್ತು ಆದಿತ್ಯ ರಂತ ಅದೆಷ್ಟೋ ಕುಟುಂಬಗಳು ಮಕ್ಕಳು ಐದು ವರ್ಷದ ಶಿಕ್ಷಣ ಪೂರೈಸಿದರೆ ವೈದ್ಯರಾಗುತ್ತಾರೆ. ನಮ್ಮ ಕಷ್ಟಗಳು ನೀಗುತ್ತವೆ ಎಂದು ಆರ್ಥಿಕ ಹೊರೆ ದೊಡ್ಡದಾಗಿದ್ದರೂ ಭಾರ ಹೋರುತ್ತಾರೆ.
Jp story : ಅದೃಷ್ಟವೋ ದುರದೃಷ್ಟವೋ ಗೊತ್ತಿಲ್ಲ…ಕೆಲವು ವಿದ್ಯಾರ್ಥಿಗಳು ಬದುಕಿನ ದಡ ಸೇರದೆ, ಇಹದ ಯಾತ್ರೆ ಮುಗಿಸಿಬಿಡುತ್ತಾರೆ. ಕೆಲವು ಆಕ್ಸಿಡೆಂಟ್ ಗಳಾದರೆ, ಮತ್ತೆ ಕೆಲವು ಅಚಾತುರ್ಯದಿಂದಲೇ ಮಾಡಿಕೊಂಡ ಎಡವಟ್ಟುಗಳಾಗಿರುತ್ತವೆ. ಬೈಕ್ ಹತ್ತುವಾಗ ಹೇಗೆ ಮನದೇವರನ್ನು ಸ್ಮರಿಸುತ್ತೇವೋ..ಅದೇ ರೀತಿ ಹೆಲ್ಮೇಟ್ ಧರಿಸುವದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸಂದೀಪ್ ಮತ್ತು ಆದಿತ್ಯ ಇಬ್ಬರು ಇನ್ನೇನು ಎರಡು ವರ್ಷ ಪೂರೈಸಿದ್ದರೆ ವೈದ್ಯಲೋಕಕ್ಕೆ ಎಂಟ್ರಿಯಾಗುತ್ತಿದ್ದರು. ಪೋಷಕರ ಕನಸು ನನಸಾಗುತ್ತಿತ್ತು. ಮೂರು ವರ್ಷ ಅವರು ವ್ಯಯಿಸಿದ ಹಣ..ಪಟ್ಟ ಶ್ರಮ ಸಾರ್ಥಕತೆ ಕಾಣುತ್ತಿತ್ತು. ಬದುಕಿನಲ್ಲಿ ಅರಳಬೇಕಾದ ಹೂವುಗಳು,,,ಬಹುಬೇಗನೆ ಬಾಡಿಹೋಗಿರುವುದೇ ಇಲ್ಲಿ ದುರಂತ.
ಬಹುತೇಕ ಬೈಕ್ ಸವಾರರು ಬೆಳಿಗ್ಗೆ ಮತ್ತು ರಾತ್ರಿ ಹೆಲ್ಮೇಟ್ ಧರಿಸುವುದಿಲ್ಲ. ಹೆಲ್ಮೇಟ್ ಗೆ ಹಗಲು ರಾತ್ರಿ ಎಂಬುದಿಲ್ಲ. ಬೈಕ್ ಹತ್ತುವಾಗ ಹೆಲ್ಮೇಟ್ ಧರಿಸುವದನ್ನು ಅಭ್ಯಾಸಮಾಡಿಕೊಳ್ಳಬೇಕು. ರಾತ್ರಿ 9 ಗಂಟೆ ನಂತರದಿಂದ ಬೆಳಿಗ್ಗೆ 9 ಗಂಟೆಯವರೆಗೆ ಟ್ರಾಫಿಕ್ ಪೊಲೀಸರು ಹಿಡಿಯುವುದಿಲ್ಲ ಎಂಬ ಭ್ರಮೆಯೇ ಇಂತಹ ಅಪಘಾತಗಳಿಗೆ ಕಾರಣವಾಗುತ್ತಿದೆ.
ಮೆಡಿಕಲ್ ಮತ್ತು ಇಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳೇ ನಿಮ್ಮಲ್ಲೊಂದು ಮನವಿ. ನೀವು ಬೈಕ್ ಚಲಾಯಿಸುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ನಿಮ್ಮನ್ನು ನಂಬಿಕೊಂಡ ಪೋಷಕರು, ದೊಡ್ಡ ಕನಸನ್ನೇ ಕಂಡಿರುತ್ತಾರೆ. ಮಗ ಮಗಳು ವಿದ್ಯಾಭ್ಯಾಸ ಪೂರೈಸಿದರೆ, ಪೋಷಕರ ಬದುಕು ಸಾರ್ಥಕ ಎಂಬಂತಾಗಿರುತ್ತದೆ. ಅವರ ಆಶಯಗಳಿಗೆ ಎಂದೂ ವಿರುದ್ಧವಾಗಿ ನಡೆಯದಿರಿ ಎಂಬುದು ಮಲೆನಾಡು ಟುಡೆ ಕಳಕಳಿ.
Jp story
