Hosanagara Accident : ಹೊಸನಗರ: ಚಾಲಕನ ನಿಯಂತ್ರಣ ತಪ್ಪಿದ ಆಲ್ಟೋ ಕಾರು ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊಸನಗರ ತಾಲೂಕಿನ ಮಡೋಡಿಯಲ್ಲಿ ಸಂಭವಿಸಿದೆ.ಮೃತ ವ್ಯಕ್ತಿಯನ್ನು ಬಿ.ಕೆ. ಹರಿಭಟ್ (76) ಎಂದು ಗುರುತಿಸಲಾಗಿದೆ.
ಬಿ.ಕೆ. ಹರಿಭಟ್ ಅವರು ತಮ್ಮ ಪತ್ನಿ ಕಮಲಾಕ್ಷಿ, ಸುಜಾತಾ ಮತ್ತು ಲೀಲಾವತಿ ಅವರೊಂದಿಗೆ ಆಲ್ಟೋ ಕಾರಿನಲ್ಲಿ ಹೊಸನಗರದ ನಿಟ್ಟೂರಿನಿಂದ ಮತ್ತಿಕೈ ಗ್ರಾಮಕ್ಕೆ ತೆರಳುತ್ತಿದ್ದರು. ಮಡೋಡಿ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಕಾರು ನಿಯಂತ್ರಣ ಕಳೆದುಕೊಂಡು ಶರಾವತಿ ಹಿನ್ನೀರಿನತ್ತ ಸಾಗಿ ಹಲವು ಬಾರಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಹರಿಭಟ್ ಅವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿದ್ದ ಹರಿಭಟ್ ಅವರ ಪತ್ನಿ ಕಮಲಾಕ್ಷಿ, ಸುಜಾತಾ ಮತ್ತು ಲೀಲಾವತಿ ಅವರು ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Hosanagara Accident


