JP STORY

ಸಕ್ರೆಬೈಲಿನಲ್ಲಿಯು ನಡೆದಿತ್ತಾ ದುಬಾರೆ ಘಟನೆ! ಗಜರಾಜನ ಮಹಾಸಿಟ್ಟಿಗೆ ಕಾರಣವಾಗೋದೇನು! ನಡೆದಿದ್ದಕ್ಕೆ ಹೊಣೆಯಾರು!? ಜೆಪಿ ಬರೆಯುತ್ತಾರೆ!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಮಲೆನಾಡುಟುಡೆ ಸುದ್ದಿ / ನಿನ್ನೆ ದಿನ ದುಬಾರೆಯಲ್ಲಿ ನಡೆದ ಘಟನೆ, ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದಲ್ಲಿಯು ನಡೆಯಲಾಗದು ಎಂದೇನು ಹೇಳಲಾಗದು. ಎರಡು ವರ್ಷಗಳ ಹಿಂದೆ ಇರಬೇಕು, ಸಾಕಾನೆಯೊಂದು ಆನೆಗಳ ಸ್ನಾನಘಟ್ಟದಲ್ಲಿಯೇ ಕೆರಳಿ ಮತ್ತೊಂದು ಆನೆಯನ್ನು ಅಕ್ಷರಶಃ ಅಟ್ಟಿಸಿಕೊಂಡು ಹೋಗಿತ್ತು. ಅಲ್ಲಿದ್ದ ಸಿಬ್ಬಂದಿ ಜನರನ್ನ ಮೊದಲು ದೂರ ಮಾಡಿ ಆನಂತರ ಸಾಕಾನೆಯನ್ನು ಕಂಟ್ರೋಲ್​ಗೆ ತೆಗೆದುಕೊಂಡಿದ್ದರು.

ಇದರ ನಡುವೆ ಮಾವುತ ಸ್ವಲ್ಪದಲ್ಲಿಯೇ ಬಚಾವ್ ಆಗಿದ್ದ. ಅಂದಿನ ಘಟನೆಯ ಮುನ್ಸೂಚನೆಯನ್ನು ಅರಿತಿದ್ದರೆ ಅರಣ್ಯ ಇಲಾಖೆ, ದುಬಾರೆಯಲ್ಲಿ ನಿನ್ನೆ ನಡೆದ ಘಟನೆ ನಡೆಯುತ್ತಿರಲಿಲ್ಲ. ಮೇಲಾಗಿ ಅಲ್ಲಿ ಸಾಕಾನೆ ಕಂಜನ್​ನನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರೂ ಸಹ, ತಪ್ಪು ಮತ್ತು ಅದರ ಹೊಣೆಗಾರಿಕೆಯನ್ನು ಅರಣ್ಯ ಇಲಾಖೆ ಹಾಗೂ ಪ್ರವಾಸಿಗರೇ ಹೊರಬೇಕಾಗುತ್ತದೆ. ಇದಕ್ಕೆ ಕಾರಣ, ಕಾಡಾನೆಗಳ ದಾಳಿಯಂತೆ ಪಳಗಿದ ಆನೆಗಳು ಮನುಷ್ಯರ ಮೇಲೆ ಘೀಳಿಟ್ಟು ಸಾಯಿಸಿದ ಸಾಕಷ್ಟು ಘಟನೆಗಳು ನಡೆದುಹೋಗಿವೆ.

ದುಬಾರೆ ಘಟನೆ ಹಾಗೂ ದುಡ್ಡಿನ ದುರಾಸೆ ಮತ್ತು ಪ್ರವಾಸೋದ್ಯಮದ ಹೆಸರು

ಇಲ್ಲಿ ಸಾಕಾನೆಗಳನ್ನ ನೋಡಲು ಬೆಳಗ್ಗೆಯೇ ದೌಡಾಯಿಸುವ ಪ್ರವಾಸಿಗರನ್ನ ತೀರಾ ಆನೆಯನ್ನು ಮುಟ್ಟುವುದು, ಅದರ ಮೇಲೆ ನೀರು ಹೊಯ್ದು ಸ್ನಾನಮಾಡಿಸುವಷ್ಟು ಅವಕಾಶ ನೀಡಬಾರದು. ಆದರೆ, ನಿನ್ನೆ ದುಬಾರೆಯಲ್ಲಿ ತನ್ನ ಪತ್ನಿಯನ್ನ ಕಳೆದುಕೊಂಡ ವ್ಯಕ್ತಿ ತನ್ನ ಮಗುವನ್ನ ಕಾಪಾಡಿಕೊಂಡ ದೃಶ್ಯ ಗಮನಿಸಿದರೇ, ಅಲ್ಲಿದ್ದ ಪ್ರವಾಸಿಗರ ಅವಸ್ಥೆ ಹೇಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಕೇವಲ ಆನೆಯನ್ನು ಅಂತರದಿಂದ ನೋಡಲು ಅವಕಾಶ ಕಲ್ಪಿಸಿದರೆ ಸಾಕು. ಅದನ್ನ ಬಿಟ್ಟು, ಆನೆಯ ಮೈತೊಳೆಯಲು, ದಂತ ಉಜ್ಜಲು, ಸೊಂಡಿಲಿನಿಂದ ಆಶೀರ್ವಾದ ಪಡೆಯಲು ಅವಕಾಶ ನೀಡಬಾರದಿತ್ತು.

ಆದರೆ ಇಲ್ಲಿ ಇಂತಿಷ್ಟು ಹಣ ಫಿಕ್ಸ್ ಮಾಡಿ, ಆನೆಯ ಅಂಗಾಂಗ ಶ್ರವಣಕ್ಕೆ ಅವಕಾಶ ನೀಡಿರುವುದು ಇಲಾಖೆಯ ನಾಚಿಕೆಗೇಡಿನ ಸಂಗತಿಯಾಗಿದೆ. ಸಕ್ರೆಬೈಲಿನಲ್ಲೂ ಇದೇ ಮಾದರಿಯಲ್ಲಿ ಪ್ರವಾಸಿಗರು ಆನೆಯ ಬಳಿ ಎಂಜಾಯ್ ಮಾಡುತ್ತಾರೆ. ಅದರಲ್ಲಿಯು ರೀಲ್ಸ್​ ಕಾಲದಲ್ಲಿ ಆನೆಯನ್ನು ತೋರಿಸುವ ಉತ್ಸುಕತೆಯು ಪ್ರವಾಸಿಗರನ್ನ ಅಪಾಯದ ಸ್ಥಳಗಳೆಲ್ಲಾ ಓಡಾಡಿಸ್ತಿದೆ. ಇದೆಕ್ಕೆಲ್ಲಾ ಕಡಿವಾಣ ಬೇಕು ಎಂಬ ವಾದವನ್ನು ಈಗಲಾದರೂ ಅರಣ್ಯ ಇಲಾಖೆ ಆಲಿಸಬೇಕಿದೆ.

ದುಬಾರೆ ಘಟನೆ : ಮಾವುತನ ಮಾತು ಕೇಳದ ಕಂಜನ್

ಇನ್ನೂ ಮಾವುತರ ವಿಚಾರಕ್ಕೆ ಬಂದರೆ, ದುಬಾರೆಯಲ್ಲಿ ಕಂಜನ್ ಆನೆಯು ಮಾರ್ತಾಂಡ ಆನೆಯ ಮೇಲೆ ದಾಳಿ ಮಾಡಿದಾಗ ಕಂಜನ್ ಆನೆ ಮೇಲಿದ್ದ ಮಾವುತ ಅಕ್ಷರಶಃ ಅಸಹಾಯಕನಾಗಿದ್ದ. ಅಲ್ಲಿದ್ದ ಪ್ರವಾಸಿಗರು ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುವಾಗಲೇ ಮಹಿಳೆಯೊಬ್ಬರು ಸಾಕಾನೆಗಳ ದಾಳಿಗೆ ಬಲಿಯಾದರು. ಮಾವುತ ಅಂಕುಶವನ್ನು ಬಲವಾಗಿ ಪ್ರಯೋಗಿಸಿದರೂ, ಆನೆ ಮಾವುತನ ಆಜ್ಞೆಗೆ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ. ಇದು ಕಾಡಿನ ನಿಯಮವನ್ನೇ ಎತ್ತಿಹಿಡಿದಿದೆ ‘ವೈಲ್ಡ್ ಈಸ್ ಆಲ್ವೇಸ್ ವೈಲ್ಡ್’ (Wild is always wild). ಕಾಡಿನಲ್ಲಿ ಹುಟ್ಟಿ, ನೈಸರ್ಗಿಕವಾಗಿ ಬೆಳೆದ ಕಾಡಾನೆಯನ್ನು ಸೆರೆಹಿಡಿದು ಪಳಗಿಸಿ, ತರಬೇತಿ ನೀಡಿದ ಮಾತ್ರಕ್ಕೆ ಅವು ಸಾಕುಪ್ರಾಣಿಯ ಸ್ವಭಾವ ತೋರಲು ಸಾಧ್ಯವಿಲ್ಲ. ಹೀಗಾಗಿಯೇ ಅನೇಕ ಮಾವುತ, ಕಾವಾಡಿಗಳು ತಾವು ಸಲಹುತ್ತಿದ್ದ ಆನೆಗಳ ದಾಳಿಗೆ ಬಲಿಯಾಗಿದ್ದಾರೆ.

ಜೀವ ಜೀವನ ಎರಡನ್ನೂ ನೀಡುವ ಮಾವುತರು

ಈ ಹಿಂದೆ ಆನೆಗಳ ಮೇಲೆ ಕೆಲಸ ಮಾಡಿದ ಮಾವುತರು ತಮ್ಮ ಬದುಕನ್ನೇ ಆನೆಗಳ ಲಾಲನೆ-ಪಾಲನೆ ಮಾಡಲು ಸಮರ್ಪಿಸಿದ್ದರು. ಅವರು ಕೇವಲ ಸಂಬಳಕ್ಕಾಗಿ ಕೆಲಸ ಮಾಡುತ್ತಿರಲಿಲ್ಲ. ಹಗಲು-ರಾತ್ರಿ ಆನೆಗಳ ಸೇವೆಯಲ್ಲಿಯೇ ಅವುಗಳ ಪ್ರೀತಿ-ವಿಶ್ವಾಸ ಗಳಿಸುತ್ತಿದ್ದರು. ಅಲ್ಲದೆ ತಲೆಮಾರಿನಂತೆ ಆನೆಯನ್ನು ತಮ್ಮ ಮನೆಯವರು ಪ್ರೀತಿಸುವಂತೆ ಮಾವುತ ನೋಡಿಕೊಳ್ಳುತ್ತಿದ್ದ. ತನ್ನದು ಕುಟುಂಬವಿದೆ ಎಂದು ಆನೆಗೆ ಪರಿಚಯಿಸುತ್ತಿದ್ದ. ಆತನ ಸುಪರ್ಧಿಯಲ್ಲಿದ್ದ ಸಾಕಾನೆಗಳು ಮಾವುತನನ್ನು ತನ್ನ ಸ್ವಂತಕಾರ ಎಂದು ಅಪ್ಪಿಕೊಳ್ಳುತ್ತಿದ್ದವು.

ನಂಬಿಕೆಯಲ್ಲಿ ನಡೆಯುವ ತರಬೇತಿ

ತನ್ನ ಮರಿಯನ್ನು ಮುಟ್ಟಲು ತನ್ನ ಮಾವುತನಿಗಷ್ಟೆ ಅನುಮತಿಸುವಷ್ಟು ಸಾಕಾನೆಗಳು ನಂಬಿಕೆ ಮೂಡಿಸುತ್ತಿದ್ದವು ಮತ್ತು ಖುದ್ದು ಆ ನಂಬಿಕೆಯಲ್ಲಿರುತ್ತಿದ್ದವು. ಆದರೆ, ಬದಲಾದ ಕಾಲಮಾನದಲ್ಲಿ ಮಾವುತ, ಕಾವಾಡಿ ಕೆಲಸವೆಂಬುದು ಕೇವಲ ವೃತ್ತಿಯಾಗಿ ಉಳಿದಿದೆ. ಆನೆಗಳ ಮೇಲೆ ಕಮಿಟ್‌ಮೆಂಟ್ ಇಲ್ಲದಂತಾಗಿದೆ. ಒಬ್ಬ ಮಾವುತನಿಗೆ ಒಂದೇ ಆನೆಯ ನಿರ್ವಹಣೆ ಕೊಟ್ಟರೆ, ಆತನೂ ಕೂಡ ತನಗೆ ವಹಿಸಿದ ಆನೆಯ ಜವಾಬ್ದಾರಿ ನಿರ್ವಹಿಸಬಲ್ಲ. ಆದರೆ ಮಾವುತ, ಕಾವಾಡಿಯಾದವರು ಬೇರೆ ಬೇರೆ ಆನೆಗಳ ಮೇಲೂ ಕೆಲಸ ಮಾಡಬೇಕಾಗುತ್ತದೆ.ಇದು ಅರಣ್ಯ ಇಲಾಖೆಯ ಅವೈಜ್ಞಾನಿಕ ನಿಯಮ.

ಒಂದು ಆನೆಗೆ ಮಾವುತ,

ಒಂದು ಆನೆಗೆ ಮಾವುತ, ಆತನ ಕೆಳಗೆ ಕಾವಾಡಿ ಹಾಗೂ ಬಿಡಾರದ ನಿರ್ವಹಣೆಗೆ ಜಮೇದಾರ ಇರುತ್ತಾನೆ. ಜಮೇದಾರನ ಅಣತಿಯಂತೆ ಆನೆಗಳ ಮೇಲೆ ಸಿಬ್ಬಂದಿಗಳು ಕೆಲಸ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ತನಗಿಷ್ಟವಿಲ್ಲದ ಆನೆಯ ಮೇಲೆ ಕೆಲಸ ಮಾಡಬೇಕಾದ ಸಂದರ್ಭದಲ್ಲಿ ಮಾವುತ ಆಸಕ್ತಿ ಕಳೆದುಕೊಳ್ಳುತ್ತಾನೆ. ಸಾಕಾನೆ ಸಹ ತನ್ನ ಮೇಲೆ ಸವಾರಿ ಮಾಡುವ ಮಾವುತನ ಮೇಲೂ ಅಷ್ಟೊಂದು ವಿಶ್ವಾಸ, ಪ್ರೀತಿ ಹೊಂದಿರುವುದಿಲ್ಲ. ಇದೇ ಕಾರಣಕ್ಕೆ ಮಸ್ತಿಗೆ ಬಂದ ಸಂದರ್ಭದಲ್ಲಿ ಮಾವುತ, ಕಾವಾಡಿಯ ಜೀವಕ್ಕೆ ಗ್ಯಾರಂಟಿ ಇಲ್ಲ. ಇಲ್ಲಿ ಕೂಡ ಯಾರು ಆನೆಗೆ ಪರ್ಮನೆಂಟ್ ಮಾವುತನಿರುತ್ತಾನೋ, ಆತನೇ ಅದರ ಜವಾಬ್ದಾರಿ ಹೊರಬೇಕಾಗುತ್ತದೆ. ಮಾವುತ, ಕಾವಾಡಿಗಳ ಜೀವಕ್ಕೇ ಗ್ಯಾರಂಟಿ ಇಲ್ಲದ ಸಂದರ್ಭದಲ್ಲಿ, ಇನ್ನು ಬಿಡಾರಕ್ಕೆ ಆನೆಗಳನ್ನು ನೋಡಲು ಬರುವ ಪ್ರವಾಸಿಗರ ಜೀವಕ್ಕೆ ಗ್ಯಾರಂಟಿ ಏನು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ