KARNATAKA NEWS / ONLINE / Malenadu today/ Nov 16, 2023 SHIVAMOGGA NEWS
Shivamogga | Malnenadutoday.com | ಅಕ್ಕಪಕ್ಕದ ಜಿಲ್ಲೆಗಳಲ್ಲಾಗುವ ಕಾಡಾನೆ ದಾಳಿ ತಪ್ಪಿಸಲು ಸಕ್ರೆಬೈಲಿನಿಂದ ಸಾಕಾನೆ ಕಳಿಸುವ ಅರಣ್ಯಾಧಿಕಾರಿಗಳಿಗೆ ತಮ್ಮದೇ ಜಿಲ್ಲೆಯಲ್ಲಿ ಆಗುತ್ತಿರುವ ಕಾಡಾನೆ ದಾಳಿಗೆ ಆನೆಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲವೇಕೆ?
ಹೀಗೊಂದು ಪ್ರಶ್ನೆ ಮಲೆನಾಡಿನ ಜನತೆಯಲ್ಲಿ ಮೂಡಿ ಬರುತ್ತಿದೆ. ಪಕ್ಕದ ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿ ಮಾಡಿ ಬೆಳೆ ಹಾನಿ ಇಲ್ಲವೇ ಪ್ರಾಣ ಹಾನಿ ಮಾಡಿದ್ರೆ..ಸಕ್ರೆಬೈಲಿನಿಂದ ತಕ್ಷಣದಲ್ಲಿ ಸಾಕಾನೆಗಳನ್ನು ಅಲ್ಲಿಗೆ ಕಳುಹಿಸಲಾಗುತ್ತದೆ. ಆದರೆ ತಮ್ಮದೆ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಕಾಡಾನೆಗಳು ರೈತರ ಬೆಳೆ ಹಾನಿ ಮಾಡಿದ್ರೂ..ಅವುಗಳನ್ನು ಹಿಮ್ಮೆಟ್ಟಿಸಲು ಬಿಡಾರದ ಸಾಕಾನೆಗಳನ್ನು ಬಳಸಿಕೊಳ್ಳಲು ಅರಣ್ಯಾಧಿಕಾರಿಗಳು ಮನಸ್ಸು ಮಾಡಿದಂತೆ ಕಾಣುತ್ತಿಲ್ಲ. ಮೊದಲೇ ಬರಗಾಲದಿಂದ ತತ್ತರಿಸಿರುವ ಮಲೆನಾಡಿನ ರೈತರು ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿರುವ ಸಂದರ್ಭದಲ್ಲಿ ಕಾಡಾನೆಗಳು ಹೊಲಗದ್ದೆಗಳಿಗೆ ಘೀಳಿಟ್ಟು ಎಲ್ಲಾ ಬೆಳೆಗಳನ್ನು ನಾಶ ಮಾಡುತ್ತಿವೆ.
ಕಳೆದ ಒಂದು ವಾರದಿಂದ ಶಿವಮೊಗ್ಗ ತಾಲೂಕಿನ ಸಿರಿಗೆರೆ ಹಾಗೂ ಪುರದಾಳು ಗ್ರಾಮ ಪಂಚಾಯತ್ ವ್ಯಾಪ್ತಿ ಯ ಮಂಜರಿಕೊಪ್ಪ ಮಲೆಶಂಕರ, ನಾಗಮ್ಮ ಕಾಲೋನಿ, ದುರ್ಗಾಂಬ ಕಾಲೋನಿ ಹಣಗೆರೆ ಕಟ್ಟೆ ಹರಿಶಿಣಕೊಪ್ಪ ಭಾಗದಲ್ಲಿ ಕಾಡಾನೆಗಳ ಹಿಂಡು ದಾಳಿ ಮಾಡುತ್ತಿದ್ದು ಭತ್ತ, ಅಡಿಕೆ, ಬಾಳೆಯನ್ನು ನಾಶ ಮಾಡಿವೆ. ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಮಲೆಶಂಕರ, ಮಂಜರಿಕೊಪ್ಪದಲ್ಲೇ ಒಂದು ವಾರದಿಂದ ಆನೆಗಳ ಹಿಂಡು ಬೀಡುಬಿಟ್ಟಿದ್ದು, ರೈತರು ಆತಂಕದಲ್ಲೆ ಓಡಾಡುವಂತಾಗಿದೆ. ಪ್ರತಿನಿತ್ಯ ರಾತ್ರಿ ವೇಳೆಯೇ ದಾಳಿ ಮಾಡುತ್ತಿರುವ ಐದಾರು ಆನೆಗಳ ಹಿಂಡು, ಬೆಳಗಾಗುತ್ತಲೇ ಮತ್ತೇ ಕಾಡು ಸೇರಿಕೊಳ್ಳುತ್ತಿರುವುದು ರೈತರ ತಲೆನೋವಿಗೆ ಕಾರಣವಾಗಿದೆ
READ: ಶಿವಮೊಗ್ಗದ ಎರಡು ತಾಲ್ಲೂಕುಗಳಲ್ಲಿ ವಿಪರೀತವಾದ ಕಾಡಾನೆ ಕಾಟ!
ಎಲ್ಲಿಂದ ಬರುತ್ತಿವೆ ಕಾಡಾನೆಗಳು
ಇನ್ನು ಪ್ರತಿವರ್ಷ ಬೆಳೆ ಬರುವ ಸಮಯದಲ್ಲಿ ಒಂದೆರಡು ಆನೆ ಮಾತ್ರ ದಾಳಿ ಮಾಡುತ್ತಿದ್ದವು. ಆದರೇ, ಈ ಬಾರಿ ಐದಾರು ಆನೆಗಳ ಹಿಂಡು ದಾಳಿ ಮಾಡುತ್ತಿವೆ. ಆನೆಗಳ ಹಿಂಡು ಬೆಳೆ ತಿನ್ನುವುದಕ್ಕಿಂತ ಹೆಚ್ಚಾಗಿ ತುಳಿದು ಬೆಳೆ ನಾಶ ಮಾಡುತ್ತಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ಮುಖ್ಯವಾಗಿ ತುಂಗಾ ನದಿಯಲ್ಲಿ ನೀರು ಕಡಿಮೆಯಾದ ಮೇಲೆ ಭದ್ರಾ ಅಭಯಾರಣ್ಯದಿಂದ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಗೆ ಬರುವ ಕಾಡಾನೆಗಳ ಹಿಂಡು ಅರಣ್ಯಕ್ಕೆ ಹೊಂದಿಕೊಂಡ ಹತ್ತಾರು ಗ್ರಾಮಗಳ ರೈತರ ಜಮೀನಿಗೆ ನೇರವಾಗಿ ನುಗ್ಗಿ, ಬೆಳೆ ನಾಶಪಡಿಸುತ್ತಿದ್ದು, ರೈತರನ್ನ ಕಂಗಲಾಗಿಸಿದೆ.
ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಕೂಡ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಕೆಡಿಪಿ ಸಭೆಯಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿ ಕ್ರಮಕ್ಕೆ ಸೂಚಿಸಿದ್ದರು. ಇಷ್ಟಾದರೂ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.
ಚಿಕ್ಕಮಗಳೂರಿನಲ್ಲಿ ಬಲು ಜೋರಾಗಿ ನಡೆಯುತ್ತಿದೆ ಸಕ್ರೆಬೈಲು ಆನೆಗಳ ಡ್ರೈವಿಂಗ್ ಆಪರೇಷನ್
ಇದು ನಿಜಕ್ಕೂ ವಿಪರ್ಯಾಸದ ಸಂಗತಿ. ತಮ್ಮದೇ ಜಿಲ್ಲೆಯಲ್ಲಿ ರೈತರು ಕಾಡಾನೆ ದಾಳಿಯಿಂದ ಬೆಳೆ ನಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಪಕ್ಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಣಿಸಿಕೊಂಡ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸಕ್ರೆಬೈಲು ಆನೆ ಬಿಡಾರದ ಆನೆಗಳನ್ನು ಕಳುಹಿಸಲಾಗಿದೆ. ಇದಕ್ಕೆ ಲಕ್ಷಾಂತರ ರೂಪಾಯಿ ಸಾಗಣಿಕೆ ಖರ್ಚುವೆಚ್ಚವಾಗಿದೆ. ಮೂಡಿಗೆರೆ ಬಳಿಯ ಆಲ್ದೂರು ರೇಂಜ್ ಬಳಿ ಇರುವ ಕಾಡಾನೆಯನ್ನು ಸೆರೆ ಹಿಡಿಯಲು ಸಕ್ರೆಬೈಲು ಆನೆ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ತೊಡಗಿದೆ. ಈ ಆನೆ ಇಬ್ಬರನ್ನು ಕೊಂದಿದ್ದು ಐದಾರು ಆನೆಗಳಿರುವ ಗುಂಪಿನಲ್ಲಿ ಸೇರಿಕೊಂಡಿದೆ. ಹೀಗಾಗಿ ನಿಖರವಾಗಿ ಕೊಂದ ಆನೆ ಯಾವುದು ಎಂದು ಗುರುತಿಸುವುದು ಡಾರ್ಟ್ ಎಕ್ಸ್ ಪರ್ಟ್ ಗಳಿಗೆ ಕಷ್ಟವಾಗಿದೆ. ಇನ್ನೊಂದೆಡೆ ಮತ್ತಾವರ ಬಳಿ ಕಾಣಿಸಿಕೊಂಡಿರುವ ಕಾಡಾನೆಯನ್ನು ಹಿಮ್ಮೆಟ್ಟಿಸಲು ಸಕ್ರೆಬೈಲಿನ ಆನೆಗಳನ್ನು ಕಳುಹಿಸಲಾಗಿದೆ. ಈ ಹೆಣ್ಣು ಆನೆ ಮರಿ ಹಾಕಿದ್ದು, ಅದು ಗುಂಪು ಬಿಟ್ಟು ಎಲ್ಲೂ ಕದಲುತ್ತಿಲ್ಲ.
ಸಕ್ರೆಬೈಲು ಆನೆ ಬಿಡಾರದಲ್ಲಿ ಅಷ್ಟೊಂದು ಆನೆಗಳಿದ್ದರೂ ಕಾರ್ಯಾಚರಣೆಗೆ ಏಕೆ ಬಳಕೆಯಾಗುತ್ತಿಲ್ಲ
ಸಕ್ರೆಬೈಲಿನಲ್ಲಿ ಇಪ್ಪತ್ತಕ್ಕು ಹೆಚ್ಚು ಆನೆಗಳಿದ್ದು, ಅವುಗಳನ್ನು ಇಲಾಖೆಯ ಕಾರ್ಯಗಳಿಗೆ ಸದ್ಬಳಿಕೆ ಮಾಡಿಕೊಳ್ಳುತ್ತಿಲ್ಲ. ಕೇವಲ ಪ್ರವಾಸಿಗರ ವೀಕ್ಷಣೆಗೆ ಸೀಮಿತ ಎಂಬಂತೆ ಅಧಿಕಾರಿಗಳು ಭಾವಿಸಿದಂತಿದೆ. ದುಬಾರೆಗಿಂತಲೂ ನುರಿತ ಮಾವುತ ಕಾವಾಡಿಗಳ ತಂಡ ಸಕ್ರೆಬೈಲಿನಲ್ಲಿತ್ತು. ಆದರೆ ಅದರಲ್ಲಿ ಸಾಕಷ್ಟು ಮಂದಿ ನಿವೃತ್ತಿಯಾಗಿದ್ದಾರೆ.
ಕನಿಷ್ಠ ಹತ್ತು ಆನೆಗಳನ್ನಾದರೂ ಕಾಡಾನೆ ಹಿಮ್ಮೆಟ್ಟಿಸಲು ಇಲ್ಲವೇ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲು ವಿಫುಲ ಅವಕಾಶಗಳಿವೆ. ಚಿಕ್ಕಮಗಳೂರಿಗೆ ಲಾರಿಯಲ್ಲಿ ಆನೆ ಕಳಿಸಲು ಅಧಿಕಾರಿಗಳಿಗೆ ಸಾಧ್ಯವಾಗುವುದಾದರೆ..ಕಾಲ್ನಡಿಗೆಯಲ್ಲಿಯೇ ತಲುಪಬಹುದಾದ ಪುರುದಾಳು ಮಂಚಿಕೊಪ್ಪಕ್ಕೆ ಆನೆಗಳನ್ನು ಕಳುಹಿಸಬಹುದಿತ್ತಲ್ಲವೇ..ಕಡಿಮೆ ಖರ್ಚಿನಲ್ಲಿ ಅಲ್ಲಿ ಬೀಡುಬಿಟ್ಟು ಕಾಡಾನೆಗಳನ್ನು ಹಿಮ್ಮೆಟ್ಸಿಸಬಹುದಾಗಿದೆ. ಈ ನಿಟ್ಟಿನಲ್ಲಿ ಹಿರಿಯ ಅರಣ್ಯಾಧಿಕಾರಿಗಳು ಕಣ್ಣಾಯಿಸಲಿ…ಬರಗಾಲದಿಂದ ತತ್ತರಿಸುವ ರೈತರ ಬೆಳೆ ಉಳಿವಿಗಾಗಿ ಅರಣ್ಯಾಧಿಕಾರಿಗಳು ಕೂಡ ಟೊಂಕಕಟ್ಟಿ ನಿಲ್ಲಬೇಕಾದ ತುರ್ತು ಎದುರಾಗಿದೆ.
