Shivamogga | Feb 1, 2024 | Dysp J.J. Thirumalesh transfer ಸ್ವತಃ ಸಿಎಂ ಆದೇಶ ಮಾಡಿದ್ರೂ…ಡಿಎಸ್ಪಿ ತಿರುಮಲೇಶ್ ವರ್ಗಾವಣೆ ರದ್ದಾಗಲು ಕಾರಣವೇನು ಸದ್ಯ ಕಾಡುತ್ತಿರುವ ಪ್ರಶ್ನೆಯಾಗಿದೆ. ಶಿವಮೊಗ್ಗ ನಗರ ಡಿವಿಜನ್ ಒನ್ ಡಿವೈಎಸ್ಪಿಯಾಗಿ ಜೆಜೆ ತಿರುಮಲೇಶ್ ರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಮಾಡಿ ಹೊರಡಿಸಿದ ಬೆನ್ನಲ್ಲೇ ಅವರ ವರ್ಗಾವಣೆ ಮತ್ತೊಮ್ಮೆ ರದ್ದಾಗಿದೆ.
ಕಳೆದ ಆರು ತಿಂಗಳ ಹಿಂದೆ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಖುದ್ದು ಆಸಕ್ತಿ ವಹಿಸಿ ತಿರುಮಲೇಶ್ ರನ್ನು ಶಿವಮೊಗ್ಗಕ್ಕೆ ವರ್ಗಾವಣೆ ಮಾಡಿಸಲು ಸಿಎಂ ಸಿದ್ದರಾಮಯ್ಯರಿಂದ ಮಿನಿಟ್ ಹಾಕಿಸಿದ್ದರು. ಇನ್ನೇನು ಶಿವಮೊಗ್ಗಕ್ಕೆ ಬರಬೇಕು ಎನ್ನುವಷ್ಟರಲ್ಲಿ ದಿಢೀರ್ ತಿರುಮಲೇಶ್ ವರ್ಗಾವಣೆ ರದ್ದಾಗಿತ್ತು. ಇದೀಗ ಮತ್ತೊಮ್ಮೆ ಅವರ ಕುರಿತಾದ ಆದೇಶ ರದ್ದಾಗಿದೆ.
ಭದ್ರಾವತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದ ತಿರುಮಲೇಶ್ ಪಾತಕಲೋಕದ ವ್ಯಕ್ತಿಗಳು ಹೆಣೆದ ಬಲೆಗೆ ಸಿಲುಕಿ ಅಪವಾದವನ್ನು ಮೈಮೇಲೆ ಎಳೆದುಕೊಳ್ಳುವಂತಾಯಿತು. ಇದನ್ನೇ ದೊಡ್ಡ ಕಪ್ಪು ಚುಕ್ಕೆ ಎನ್ನುವಂತೆ ಡಿಪಾರ್ಟ್ ಮೆಂಟ್ ನ ಅಧಿಕಾರಿಗಳ ಒಂದು ಗುಂಪು ಕಾಂಗ್ರೇಸ್ನ ಕೆಲ ಮುಖಂಡರ ಕಿವಿ ಕಚ್ಚಿ, ಜೆಜೆ ತಿರುಮಲೇಶ್ ವಿರುದ್ದ ಇಲ್ಲಸಲ್ಲದ ಆರೋಪ ಅಪವಾದಗಳನ್ನು ಮಾಡಿದೆ.
ತಿರುಮಲೇಶ್ ಶಿವಮೊಗ್ಗಕ್ಕೆ ಬಂದ್ರೆ ಹಂಗಾಗುತ್ತೆ…ಹಿಂಗಾಗುತ್ತೆ ಎನ್ನುವ ಅಧಿಕಾರಿ ವರ್ಗ ಶಿವಮೊಗ್ಗದಲ್ಲಿ ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂಬುದನ್ನ ಅರಿವ ಪ್ರಯತ್ನ ಕಾಂಗ್ರೆಸ್ ಮುಖಂಡರು ಮಾಡಬೇಕಿದೆ ಎಂಬುದು ಶಿವಮೊಗ್ಗದ ವ್ಯವಸ್ಥೆಯನ್ನು ಬಲ್ಲವರ ಅಭಿಪ್ರಾಯ
ಚಿಕ್ಕಮಗಳೂರು ಲೋಕಾಯುಕ್ತ ಡಿಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಿರುಮಲೇಶ್ ರನ್ನು ಎರಡನೇ ಬಾರಿಯೂ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ ಸಿಎಂ ಗೆ ಶಿಫಾರಸ್ಸು ಮಾಡಿಸಿ ಶಿವಮೊಗ್ಗಕ್ಕೆ ವರ್ಗಾವಣೆ ಮಾಡಿಸಿದ್ದರು. ತಮ್ಮದಲ್ಲದ ಕ್ಷೇತ್ರದ ಮೇಲೆ ಶಾಸಕರು ಕಣ್ಣು ಹಾಕಿರುವುದು ಕೆಲವರಿಗೆ ಸಿಟ್ಟಿದೆ. ಈ ವರ್ಗಾವಣೆಗೆ ಜಿಲ್ಲಾ ಉಸ್ತುವಾರಿ ಸಚಿವರ ರೆಫರೆನ್ಸ್ ಲೆಟರ್ ಕೂಡ ಇರಲಿಲ್ಲ. ಈ ಬಾರಿಯೂ ವರ್ಗಾವಣೆ ರದ್ದಾಗುವುದು ನಿಕ್ಕಿ ಎಂದೇ ಹೇಳಲಾಗಿತ್ತು. ಅದರಂತೆ ವರ್ಗಾವಣೆ ರದ್ದಾಗಿದೆ.
ಖಾಕಿ ಹಾಕಿದ ಅಧಿಕಾರಿ ಎಂದರೆ ಅವರ ಮೇಲೆ ಆರೋಪಗಳು ಸಹಜ. ಅದನ್ನೇ ಅಸ್ತ್ರವಾಗಿಟ್ಟುಕೊಂಡು ಅಂತಹ ಅಧಿಕಾರಿಯ ಮನೋ ಸ್ಟೈರ್ಯವನ್ನು ಕುಗ್ಗಿಸುವ ಪ್ರಯತ್ನ ರಾಜಕೀಯ ನಾಯಕರು ಮಾಡಬಾರದು. ತಿರುಮಲೇಶ್ ಶಿವಮೊಗ್ಗಕ್ಕೆ ಬರಲು ಯಾವುದೇ ಲಾಭಿ ನಡೆಸಿರಲಿಲ್ಲ. ಸದ್ಯ ಅವರು ಚಿಕ್ಕಮಗಳೂರಿನಲ್ಲಿ ಲೋಕಾಯುಕ್ತದಲ್ಲಿಯೇ ಮುಂದುವರೆಯಲಿದ್ದಾರೆ