SHIVAMOGGA | Jan 19, 2024 | Hanagere Katte ತೀರ್ಥಹಳ್ಳಿ ತಾಲೂಕಿನ ಹಿಂದೂ ಮುಸ್ಲಿಂ ಭಾವೈಕ್ಯ ಕೇಂದ್ರವಾಗಿರುವ ಹಣಗೆರೆ ಕಟ್ಟೆಯಲ್ಲಿರುವ ಭೂತರಾಯ ಚೌಡೇಶ್ವರಿ ದೇವಾಲಯ ಮತ್ತು ಸೈಯದ್ ಹಜರತ್ ದರ್ಗಾದ ಕಾಣಿಕೆ ಹುಂಡಿಯನ್ನು ತೆಗೆಯಲಾಗಿದ್ದು ಅರ್ಧ ಕೋಟಿಗೂ ಹೆಚ್ಚಿನ ಹಣ ಸಂಗ್ರಹವಾಗಿದೆ.
ಹಣಗೆರೆ ಕಟ್ಟೆ ದರ್ಗಾ
ಹಣಗೆರೆಕಟ್ಟೆಯ ಈ ಧಾರ್ಮಿಕ ಕೇಂದ್ರದಲ್ಲಿ ಮುಜರಾಯಿ ಇಲಾಖೆಯ ಸಿಬ್ಬಂದಿಗಳು ಕಾಣಿಕೆ ಹುಂಡಿ ಎಣಿಕೆಗೆ ಹೋದಾಗ ಅಲ್ಲಿನ ಗ್ರಾಪಂ ಅಧ್ಯಕ್ಷರು ಮತ್ತಿತರರು ಕೆಲ ಬೇಡಿಕೆಯನ್ನಿಟ್ಟು ಪ್ರತಿಭಟಿಸಿದ್ದರು. ಈ ಪ್ರತಿಭಟನೆಯಿಂದ ಹುಂಡಿ ಎಣಿಕೆ ಕಾರ್ಯ ತಡವಾಗಿ ಆರಂಭವಾಗಿತ್ತು.
ಆ ಬಳಿಕ ನಡೆದ ಹಣ ಎಣಿಕೆಯಲ್ಲಿ ನಾಣ್ಯದ ಎಣಿಕೆ ಹೊರತುಪಡಿಸಿ ಒಟ್ಟು ನೋಟುಗಳ ಎಣಿಕೆಗಳನ್ನು ಮಾಡಲಾಗಿದ್ದು 54,50,760 ( ಐವತ್ನಾಲ್ಕು ಲಕ್ಷದ ಐವತ್ತು ಸಾವಿರದ ಏಳು ನೂರ ಅರವತ್ತು) ರೂ. ಸಂಗ್ರಹವಾಗಿದೆ. ಪ್ರತಿ ಮೂರು ತಿಂಗಳಿಗೆ ಈ ಧಾರ್ಮಿಕ ಕೇಂದ್ರದಲ್ಲಿ ಇಷ್ಟೇ ಹಣ ಸಂಗ್ರಹವಾಗುತ್ತಿದೆ.
ಈ ಕಾಣಿಕೆಯ ಸಂಗ್ರಹದ ಆಧಾರದ ಮೇಲೆಯೇ ಧಾರ್ಮಿಕ ಕೇಂದ್ರ ಯಾವ ಶ್ರೇಣಿಯಲ್ಲಿದೆ ಎಂಬುದನ್ನ ನಿಗದಿಪಡಿಸಲಾಗುತ್ತದೆ. ಹಣಗೆರೆಕಟ್ಟೆಯ ಈ ಧಾರ್ಮಿಕ ಕೇಂದ್ರ ‘ಎ’ ಶ್ರೇಣಿಯ ಧಾರ್ಮಿಕ ಕೇಂದ್ರ ಎನಿಸಿಕೊಂಡಿದೆ.