ಧಾರವಾಡ/ಶಿವಮೊಗ್ಗ: ಧಾರವಾಡದ ಡಿಮ್ಹಾನ್ಸ್ (DIMHANS) ಸಂಸ್ಥೆಯಲ್ಲಿ ಮನೋವೈದ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಶಿವಮೊಗ್ಗ ಮೂಲದ ಯುವ ವೈದ್ಯೆ ಡಾ. ಪ್ರಜ್ಞಾ ಪಾಲೇಗರ್ (24) ಅವರು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇವಲ ಎರಡು ವಾರಗಳ ಹಿಂದಷ್ಟೇ ಅವರು ಈ ಸಂಸ್ಥೆಗೆ ಸೇರ್ಪಡೆಯಾಗಿದ್ದರು ಎಂದು ತಿಳಿದುಬಂದಿದೆ.

ಡಾ. ಪ್ರಜ್ಞಾ ಅವರ ಪೋಷಕರು ಮಗಳನ್ನು ನೋಡಲೆಂದು ಶಿವಮೊಗ್ಗದಿಂದ ಧಾರವಾಡಕ್ಕೆ ಬಂದಿದ್ದರು. ನಿನ್ನೆಯಷ್ಟೇ ಮಗಳ ಜೊತೆ ಸಮಯ ಕಳೆದು, ರಾತ್ರಿ ಶಿವಮೊಗ್ಗಕ್ಕೆ ಮರಳಿದ್ದರು. ಪೋಷಕರು ಹೊರಟ ಕೆಲವೇ ಗಂಟೆಗಳಲ್ಲಿ ಪ್ರಜ್ಞಾ ಅವರು ಈ ದುಡುಕಿನ ನಿರ್ಧಾರ ತೆಗೆದುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಹಪಾಠಿ ಡಾ. ಪ್ರಿಯಾ ಪಾಟೀಲ್ ಅವರೊಂದಿಗೆ ರೂಮ್ ಹಂಚಿಕೊಂಡಿದ್ದ ಪ್ರಜ್ಞಾ, ಪೋಷಕರು ಬಂದಿದ್ದ ಕಾರಣ ನಿನ್ನೆ ರಾತ್ರಿ ಕೊಠಡಿಯಲ್ಲಿ ಒಬ್ಬರೇ ಇದ್ದರು. ಈ ವೇಳೆ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,
ಇಂದು ಬೆಳಿಗ್ಗೆ ಸಹಪಾಠಿ ಪ್ರಿಯಾ ಅವರು ರೂಮಿಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಅವರು ನೀಡಿದ ಮಾಹಿತಿಯ ಮೇರೆಗೆ ಧಾರವಾಡದ ಉಪನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
DIMHANS Dharwad Shimoga Female Doctor Found Dead



