Dcc bank : ಡಿಸಿಸಿ ಬ್ಯಾಂಕ್ ನ 68 ನೇ ವರ್ಷದ ಮಹಾ ಸಭೆಯನ್ನು ಸೆಪ್ಟೆಂಬರ್ 10 ರಂದು ನಗರದ ಬಂಜಾರ ಸಮುದಾಯ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿದ್ದೇವೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ಹೇಳಿದರು .
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ಯಾಂಕ್ 72 ವರ್ಷಗಳನ್ನು ಪೂರೈಸಿ 73ನೇ ವರ್ಷಕ್ಕೆ ಕಾಲಿಟ್ಟಿದ್ದು, 2024-25ನೇ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 36.75 ಕೋಟಿ ರೂ.ಗಳ ದಾಖಲೆ ಲಾಭ ಗಳಿಸಿದೆ. ಇದು ಬ್ಯಾಂಕಿನ ಇತಿಹಾಸದಲ್ಲೇ ಅತಿ ಹೆಚ್ಚು ಲಾಭವಾಗಿದೆ. ಮುಂದಿನ ವರ್ಷ 45 ಕೋಟಿ ರೂ. ಲಾಭ ಗಳಿಸುವ ಗುರಿಯನ್ನು ಹೊಂದಿದ್ದೇವೆ ಎಂದರು.
ಬ್ಯಾಂಕ್ ಉತ್ತಮ ಕಾರ್ಯನಿರ್ವಹಣೆಗಾಗಿ ಜಿಲ್ಲೆಯ 10 ಪ್ರಾಥಮಿಕ ಸಹಕಾರ ಸಂಘಗಳಿಗೆ ಪ್ರೋತ್ಸಾಹಧನ ನೀಡುತ್ತಿದ್ದು, ಇದನ್ನು ವಾರ್ಷಿಕ ಸಭೆಯಲ್ಲಿ ಪ್ರದಾನ ಮಾಡಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ಬ್ಯಾಂಕ್‌ಗೆ 75 ವರ್ಷ ತುಂಬಲಿದ್ದು, ಈ ಅಮೃತ ಮಹೋತ್ಸವದ ನೆನಪಿಗಾಗಿ ನ್ಯಾಯಾಲಯ ಮತ್ತು ಬ್ಯಾಂಕ್ ಕಟ್ಟಡದ ನಡುವಿನ ಜಾಗದಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ಕಟ್ಟಡವನ್ನು ನಿರ್ಮಿಸಲಾಗುವುದು. ಇದರ ಶಂಕುಸ್ಥಾಪನೆ ಶೀಘ್ರದಲ್ಲೇ ನಡೆಯಲಿದೆ. ಅಲ್ಲದೆ, ಬ್ಯಾಂಕಿನ ಶಾಖೆಗಳ ಸಂಖ್ಯೆಯನ್ನು 50ಕ್ಕೆ ಏರಿಸುವ ಉದ್ದೇಶವಿದ್ದು, ಈಗಾಗಲೇ ತ್ಯಾಗರ್ತಿ, ಚಿಕ್ಕಪೇಟೆ, ಗಾಜನೂರು, ತೀರ್ಥಹಳ್ಳಿ ಎಪಿಎಂಸಿ ಮತ್ತು ಬಾರಂದೂರಿನಲ್ಲಿ ಐದು ಹೊಸ ಶಾಖೆಗಳನ್ನು ಆರಂಭಿಸಲಾಗಿದೆ. ಇನ್ನೂ 14 ಶಾಖೆಗಳು ತೆರೆದರೆ ಗುರಿ ತಲುಪಿದಂತಾಗುತ್ತದೆ ಎಂದರು
Dcc bank ರೈತರಿಗೆ ನೆರವಾಗಲು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಅದರ ಅಡಿಯಲ್ಲಿ ಕೃಷಿ ಸಾಲದ ಮೇಲೆ ವಿಮೆ ಮಾಡಿಸಲಾಗುತ್ತಿದೆ. ಒಂದು ಲಕ್ಷ ರೂ. ಸಾಲ ತೆಗೆದುಕೊಂಡ ರೈತರು 720 ರೂ. ವಿಮೆ ಪಾವತಿಸಿದರೆ, ಅಕಾಲಿಕ ಮರಣ ಸಂಭವಿಸಿದಾಗ ವಿಮಾ ಕಂಪನಿಯೇ ಸಂಪೂರ್ಣ ಸಾಲವನ್ನು ಮರುಪಾವತಿ ಮಾಡುತ್ತದೆ. ಇದರ ಜೊತೆಗೆ, ಹೈಬ್ರಿಡ್ ತಳಿಗಳಾದ ಎಮ್ಮೆ ಮತ್ತು ಜರ್ಸಿ ಹಸುಗಳನ್ನು ಖರೀದಿಸಲು ಪ್ರತಿ ಯೂನಿಟ್‌ಗೆ 80,000 ರೂ.ಗಳವರೆಗೆ ಕೇವಲ 3% ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದೆ. ಮೇವು ಖರೀದಿಗೆ ಕೂಡಾ ಹಣ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಬ್ಯಾಂಕ್ ಯಾವುದೇ ಸರ್ಕಾರದ ಪಾಲು ಬಂಡವಾಳವಿಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ವರ್ಷ ಸರ್ಕಾರದ ಪಾಲು ಬಂಡವಾಳವನ್ನು ಹಿಂತಿರುಗಿಸಲಾಗಿದೆ. ಪ್ರಸ್ತುತ ಬ್ಯಾಂಕ್ 1,700 ಕೋಟಿ ರೂ.ಗಳ ಠೇವಣಿ ಮತ್ತು 2,600 ಕೋಟಿ ರೂ.ಗಳ ದುಡಿಯುವ ಬಂಡವಾಳ ಹೊಂದಿದೆ. ಕಳೆದ ವರ್ಷ ಬ್ಯಾಂಕಿನ ಒಟ್ಟು ವಹಿವಾಟು 3,600 ಕೋಟಿ ರೂ. ಆಗಿತ್ತು. ನೌಕರರಿಗೆ ಸರ್ಕಾರದ ಏಳನೇ ವೇತನ ಆಯೋಗದ (7th Pay Commission) ಶಿಫಾರಸುಗಳಂತೆ ವೇತನ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
Dcc bank


