ಅಡಕೆ ಎಂಥ ಕಥೆ! ಮಲ್ನಾಡ್​ ಅಡಿಕೆಯ ಬಗ್ಗೆ ಚರ್ಚೆ…ಶುರು! ಭರತ್​ರ ವರದಿ

Malenadu Today

Shivamogga Feb 21, 2024  ಅಡಿಕೆ, ಅಡಿಕೆ, ಅಡಿಕೆ, ಮಧ್ಯ ಕರ್ನಾಟಕದ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ,ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಭಾಗದ ಜನರ ಬದುಕು ಅಡಿಕೆ ಬೆಳೆಯ ಮೇಲೆ ನಿಂತಿದೆ.. ಹಲವು ವರ್ಷಗಳಿಂದ ಈ ಭಾಗಗಳ ರೈತರು ಸಾಂಪ್ರದಾಯಿಕ ಮಾಡಿಕೊಂಡು ಬರುತ್ತಿದ್ದ  ಕೃಷಿ ಬೆಳೆಗಳನ್ನು ಬಿಟ್ಟು ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆಯ ಬೆನ್ನು ಹತ್ತಿದ್ದಾರೆ, ಅಡಿಕೆ ಬೆಳೆ ಎಷ್ಟರ ಮಟ್ಟಿಗೆ ಅವರಿಸಿಕೊಂಡಿದೆ ಎಂದರೆ ಮಲೆನಾಡಿನ ರೈತರು ಭತ್ತ ಬೆಳೆಯುತ್ತಿದ್ದ ಜಾಗಗಳಲ್ಲಿ ಅಡಿಕೆ ಗಿಡ ನೆಟ್ಟು ಊಟಕ್ಕೆ ಅಕ್ಕಿಯನ್ನು ಖರೀದಿ ಮಾಡುವಂತಾಗಿದೆ.. 

ಅಡಿಕೆಯೇ ಏಕೆ?

ಸಾಮಾನ್ಯವಾಗಿ ಒಂದು ಎಕರೆ  ಭತ್ತ ಬೆಳೆಯಲು 23 ರಿಂದ 25 ಸಾವಿರ ಖರ್ಚು ಬರುತ್ತೆ, ಹಲವು ಬಾರಿ ಭತ್ತ ಕಟಾವು ಮಾಡುವ ಸಂದರ್ಭದಲ್ಲಿ ಮಳೆ ಬಂದು ರೈತನನ್ನು ಸಾಲದ ಸುಳಿಗೆ ಸಿಲುಕುವಂತೆ ಮಾಡುತ್ತೆ, ಅದಲ್ಲದೆ ಕಟಾವು ಮಾಡುವ ವೇಳೆಯಲ್ಲಿ ಸರಿಯಾದ ಬೆಲೆ ಕೂಡ ರೈತನಿಗೆ ಸಿಗುವುದಿಲ್ಲ, ಇದರ ಜೊತೆಗೆ ಕೂಲಿಗೆ ಜನರ ಕೊರತೆ ಎದುರಾಗುವುದರಿಂದ  ರೈತರು ಅಡಿಕೆ ಬೆಳೆಯತ್ತ ವಾಲುತ್ತಿದ್ದಾರೆ..

ಒಂದು ಎಕೆರೆಯಲ್ಲಿ ಎಷ್ಟು ಅಡಿಕೆ ಗಿಡ ನೆಡಬಹುದು

ಕೆಲ ವರ್ಷಗಳಿಂದ ದಾಖಲೆ ಪ್ರಮಾಣದಲ್ಲಿನ ರೈತರು ಅಡಿಕೆ ಬೆಳೆಯಲು ಮುಂದಾಗಿದ್ದಾರೆ. ಒಂದು ಎಕರೆ ಪ್ರದೇಶದಲ್ಲಿ ಸರಿ ಸುಮಾರು 550 ರಿಂದ 600 ರಷ್ಟು ಅಡಿಕೆ ಗಿಡಗಳನ್ನು ನೆಡಬಹುದು, ಸರಿಯಾಗಿ ಗಿಡಗಳನ್ನು ರೈತರು ಆರೈಕೆ ಮಾಡಿದ್ದೆ ಆದಲ್ಲಿ  ಗಿಡ ನೆಟ್ಟು 5 ರಿಂದ 6 ವರ್ಷಕ್ಕೆ ಫಸಲು ಪಡೆಯಬಹುದು, ಬಳಿಕ ವರ್ಷದಿಂದ ವರ್ಷಕ್ಕೆ ಅಡಿಕೆ ಇಳುವರಿ ಪ್ರಮಾಣ ಏರುತ್ತಾ ಹೋಗುತ್ತದೆ, ಅಡಿಕೆ ಗಿಡಗಳನ್ನು ನೆಟ್ಟು 13 ನೇ ವರ್ಷಕ್ಕೆ ಸರಾಸರಿ 70 ರಿಂದ 80 ರಿಂದ ಕ್ವಿಟಾಂಲ್ ನಷ್ಟು ಫಸಲು ತಗೆಯಬಹುದು.. 

ಅಡಕೆ ಬೆಳೆಯಲ್ಲಿ ಉಪಕೃಷಿ ಮಾಡಿದ್ರೆ ಅದು ಕೂಡ ರೈತನ ಕೈ ಹಿಡಿಯಲಿದೆ..ಇನ್ನು ರೈತರ ಸ್ವತಃ ಅಡಿಕೆ ಕಟಾವು ಮಾಡಿ ಸಂಸ್ಕರಣೆ ಮಾಡಿದ್ರೆ ಚೇಣಿ ಕೊಡುವುದಕ್ಕಿಂತ ಹೆಚ್ಚು ಲಾಭಗಳಿಸಬಹುದು.ಇತ್ತಿಚೀನ ದಿನಗಳಲ್ಲಿ ಅಡಕೆ ತೊಟಕ್ಕೆ ಬೇಡಿಕೆ ಹೆಚ್ಚಿರುವುದರಿಂದ ಡಾಕ್ಟರ್, ಇಂಜಿನಿಯರ್, ಬ್ಯುಸಿನೆಸ್ ಮಾಡುವವರು ಅಡಿಕೆ ತೋಟವನ್ನು ಖರೀದಿಸಿ ಛೇಣಿ ಕೊಡುತ್ತಿದ್ದಾರೆ..

ಚೇಣಿ ಕೊಡುವುದು ಒಳ್ಳೆಯದೇ?

ಅಡಿಕೆ ಬೆಳೆಯುವ ರೈತರಿಗೋಸ್ಕರ ಅಡಿಕೆ ಸಂಸ್ಕರಣೆಯಲ್ಲಿ ಹಲವು ಆವಿಷ್ಕಾರ ಗಳನ್ನು ಮಾಡಲಾಗುತ್ತಿದೆ, ಹಲವು ವರ್ಷಗಳ ಹಿಂದೆ ಮಹಿಳೆಯರಿಂದ ಅಡಿಕೆ ಸುಲಿಸಲಾಗುತ್ತಿತ್ತು. ಆದ್ರೆ ಬದಲಾದ ತಂತ್ರಜ್ಞಾನ ಹೊಸ ಹೊಸ ಅವಿಷ್ಕಾರಗಳನ್ನ ರೈತರಿಗೋಸ್ಕರ ಮಾಡಿರುವುದರಿಂದ ಅಡಿಕೆ ಸುಲಿಯುವ ಯಂತ್ರದಿಂದ ಅಡಿಕೆನ್ನು ಸಿಪ್ಪೆಯಿಂದ ಬೇರ್ಪಡಿಸಲಾಗುತ್ತಿದೆ..8 ಚೈನ್ ಅಡಿಕೆ ಮಿಷನ್ ನಲ್ಲಿ ಗಂಟೆಗೆ 10 ಕ್ವಿ. ನಷ್ಟು ಅಡಿಕೆ ಸುಲಿಯಲಾಗುತ್ತಿದೆ.. 

ಕೂಲಿಗಾರರ ಸಮಸ್ಯೆಯಿಂದಾಗಿ ಮಲೆನಾಡಿನ ಬಹುತೇಕ  ರೈತರು ಅಡಿಕೆ ಸಂಸ್ಕರಣೆ ಮಾಡದೆ, ತೋಟದ ಫಸಲನ್ನು  ಚೇಣಿ ಮಾಡುವವರಿಗೆ ನೀಡಿ ಹಣವನ್ನು ಪಡೆಯುತ್ತಾರೆ.. ಇನ್ನು ದಾವಣಗೆರೆ ಭಾಗದ ರೈತರು ಮಾತ್ರ ವಿಭಿನ್ನ ತಮ್ಮ ತೋಟದ ಅಡಿಕೆಯನ್ನು ಕಟಾವು ಮಾಡಿ ಹಸಿ ಅಡಿಕೆ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ..ಹೀಗೆ ಅಡಕೆ ಕೃಷಿಯಲ್ಲಿ ಹಲವು ವಿಚಾರಗಳಿವೆ ಅವುಗಳನ್ನ ಒಂದೊಂದಾಗಿ ಹೇಳುತ್ತಾ ಹೋಗುತ್ತೇವೆ.. ಮಲೆನಾಡಿನ ನುರಿತ ಅಡಕೆ ತಜ್ಞರು ಬರೆಯುತ್ತಾರೆ ಮಲೆನಾಡು ಟುಡೆಯಲ್ಲಿ, ಈ ಅಂಕಣದಲ್ಲಿ… 

ಓದುಗರೆ, ಇದಕ್ಕೆ ನಿಮ್ಮ ಅಭಿಪ್ರಾಯವನ್ನು ಸಹ ಬರೆಯಬಹುದು, ಅಡಕೆ ಬಗೆಗಿನ ವಿವರವನ್ನು ಕಾಮೆಂಟ್ಸ್​ಗಳಲ್ಲಿ ಬರೆಯಿರಿ,, ಅಥವಾ ಅಡಕೆಯ ಬಗೆಗಿನ ನಿಮ್ಮ ವಿಶೇಷ ಜ್ಞಾನವನ್ನು  malenadutoday@gmail.com  ಗೆ ಕಳಿಸಿ ಉಪಯುಕ್ತವಾದುದನ್ನು ಖಂಡಿತ ಓದುಗರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ.. 

Share This Article