ಖಜಾನೆ ಖಾಲಿ ಆಗಿರುವುದರಿಂದಲೇ ವಿಬಿ ರಾಮ್ ಜೀ ಯೋಜನೆಗೆ ಕಾಂಗ್ರೆಸ್ ವಿರೋಧ: ಶಾಸಕ ಚನ್ನಬಸಪ್ಪ ವಾಗ್ದಾಳಿ

ಶಿವಮೊಗ್ಗ : ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವುದರಿಂದ 60:40 ಅನುಪಾತದ ಕೇಂದ್ರದ ಹೊಸ ‘ವಿಬಿ ರಾಮ್ ಜೀ’ ಯೋಜನೆಯನ್ನು  ಅನುಷ್ಠಾನಗೊಳಿಸಲು ಸಾಧ್ಯವಾಗದೆ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಶಾಸಕ ಎಸ್​ ಎನ್​ ಚನ್ನಬಸಪ್ಪ ಆರೋಪಿಸಿದರು.

Channabasappa Slams Congress Over VB Ram Ji Scheme
Channabasappa Slams Congress Over VB Ram Ji Scheme

ಶಿವಮೊಗ್ಗ ಸಿಮ್ಸ್ ಹಾಸ್ಟೆಲ್‌ನಲ್ಲಿ ರೇಡಿಯಾಲಜಿ ವಿಭಾಗದ ಪಿಜಿ ವೈದ್ಯ ಆತ್ಮಹತ್ಯೆ

ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಿಕಸಿತ ಭಾರತದ ಗುರಿಯೊಂದಿಗೆ ಹಳ್ಳಿಗಳ ಯುವಸಮೂಹಕ್ಕೆ ಉದ್ಯೋಗ ನೀಡುವ ಬೃಹತ್ ಸಂಕಲ್ಪವನ್ನು ಕೇಂದ್ರ ಹೊಂದಿದೆ. ಹಳೆಯ ನರೇಗಾ ಯೋಜನೆಯಲ್ಲಿನ ಲೋಪಗಳನ್ನು ಸರಿಪಡಿಸಿ, ಹೊಸ ಸ್ಪರ್ಶ ನೀಡಿ ಗ್ರಾಮೀಣ ಭಾಗದ ಜನರನ್ನು ಬಡತನದಿಂದ ಮುಕ್ತಗೊಳಿಸಲು ಈ ಸುಧಾರಿತ ಯೋಜನೆಯನ್ನು ತರಲಾಗಿದೆ ಎಂದು ವಿವರಿಸಿದರು. 

ಈ ಹಿಂದೆ ಯುಪಿಎ ಅವಧಿಯಲ್ಲಿ ಪಿ. ಚಿದಂಬರಂ ಅವರೇ ಇಂತಹ ಯೋಜನೆಯ ಬಗ್ಗೆ ಮಾತನಾಡಿದ್ದರು. ಅಂದು ಮೌನವಾಗಿದ್ದ ಕಾಂಗ್ರೆಸ್ ಇಂದು ವಿರೋಧಿಸುತ್ತಿರುವುದು ಹಾಸ್ಯಾಸ್ಪದ. ವಾಸ್ತವದಲ್ಲಿ ಈ ಯೋಜನೆಯ 60:40 ಅನುಪಾತದ ಅನುದಾನ ಭರಿಸಲು ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲದ ಕಾರಣ ಕಾಂಗ್ರೆಸ್ ಸರ್ಕಾರ ಕುಂಟು ನೆಪಗಳನ್ನು ಹೇಳುತ್ತಿದೆ. ಈ ಯೋಜನೆಯು ಕೇವಲ ದೈಹಿಕ ಶ್ರಮಕ್ಕೆ ಮಾತ್ರ ಸೀಮಿತವಾಗದೆ, ಕೌಶಲ್ಯ ವೃದ್ಧಿ ಮತ್ತು 15 ದಿನಗಳೊಳಗೆ ನೇರ ನಗದು ವರ್ಗಾವಣೆಯಂತಹ ಪಾರದರ್ಶಕ ವ್ಯವಸ್ಥೆಯನ್ನು ಒಳಗೊಂಡಿದೆ ಎಂದು ಚನ್ನಬಸಪ್ಪ ತಿಳಿಸಿದರು. 

2047ರ ವೇಳೆಗೆ ಭಾರತದ ಹಳ್ಳಿಗಳನ್ನು ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಯೋಜನೆಗೆ ‘ರಾಮ’ನ ಹೆಸರಿಟ್ಟ ತಕ್ಷಣ ಕಾಂಗ್ರೆಸ್ ನಾಯಕರು ಉರಿದೆದ್ದಿದ್ದಾರೆ. ಮಹಾತ್ಮ ಗಾಂಧೀಜಿಯವರೇ ರಾಮರಾಜ್ಯದ ಕನಸು ಕಂಡಿದ್ದರು. ಕಾಂಗ್ರೆಸ್ಸಿಗರು ಸದಾ ಭಯೋತ್ಪಾದನೆಯನ್ನು ಪೋಷಿಸುವ ಮನಸ್ಥಿತಿ ಹೊಂದಿದ್ದು, ವಿದೇಶಗಳಲ್ಲಿ ಹೋಗಿ ಭಾರತದ ಘನತೆಗೆ ಧಕ್ಕೆ ತರುತ್ತಿದ್ದಾರೆ. ದೇಶಪ್ರೇಮಿಗಳನ್ನು ಟೀಕಿಸುವ ಕಾಂಗ್ರೆಸ್ಸಿಗರು ಭಯೋತ್ಪಾದಕರ ಆರಾಧನೆಯಲ್ಲಿ ತೊಡಗಿದ್ದಾರೆ ಎಂದು ಅವರು ಕಿಡಿಕಾರಿದರು.

ಬಿಜೆಪಿ ಗೋಡ್ಸೆಯನ್ನು ಪೂಜಿಸುವುದಿಲ್ಲ, ಆದರೆ ದೇಶದ ಅಖಂಡತೆಯನ್ನು ಕಾಪಾಡಲು ಬದ್ಧವಾಗಿದೆ. ಕೇವಲ ವಿರೋಧಕ್ಕಾಗಿ ವಿರೋಧ ಮಾಡುವ ಪ್ರವೃತ್ತಿಯನ್ನು ಕೈಬಿಟ್ಟು ರಾಜ್ಯದ ಪ್ರಗತಿಗೆ ಕಾಂಗ್ರೆಸ್ ಸಹಕರಿಸಲಿ. ಅಸ್ತಿತ್ವ ಕಳೆದುಕೊಳ್ಳುತ್ತಿರುವ ಪಕ್ಷದಿಂದ ಬಿಜೆಪಿ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಶಾಸಕರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

Channabasappa Slams Congress Over VB Ram Ji Scheme

Channabasappa Slams Congress Over VB Ram Ji Scheme
Channabasappa Slams Congress Over VB Ram Ji Scheme