ಶಿವಮೊಗ್ಗ: ರಾಜ್ಯ ಸರ್ಕಾರ ಇತ್ತೀಚಿನ ಅಧಿವೇಶನದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ತಂದಿರುವ ಮಸೂದೆಯನ್ನು ಇಡೀ ರಾಜ್ಯದ ಜನತೆ ಮೌನವಾಗಿ ಸ್ವಾಗತಿಸಿದ್ದಾರೆ. ಆದರೆ ಬಿಜೆಪಿ ನಾಯಕರು ಮಾತ್ರ ದ್ವೇಷ ಭಾಷಣ ಮಾಡುವುದು ನಮ್ಮ ಹಕ್ಕು ಎಂಬಂತೆ ವರ್ತಿಸುತ್ತಾ ಈ ಕಾಯ್ದೆಯನ್ನು ವಿರೋಧಿಸುತ್ತಿರುವುದು ಖಂಡನೀಯ, ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕಿಡಿಕಾರಿದರು.

ಸಿಹಿಸುದ್ದಿ: ಫೆಬ್ರವರಿ 20ರಿಂದ ಶಿಕಾರಿಪುರದಲ್ಲಿ ಬೃಹತ್ ಉದ್ಯೋಗ ಮೇಳ
ಶಿವಮೊಗ್ಗದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತನಾಡುವುದು ಹೇಗೆ ಮೂಲಭೂತ ಹಕ್ಕೋ, ಸಮಾಜಕ್ಕೆ ಹಾನಿಯಾಗದಂತೆ ಸುಮ್ಮನಿರುವುದು ಕೂಡ ಅಷ್ಟೇ ದೊಡ್ಡ ಹಕ್ಕು. ಭಾಷೆಯ ಬೌದ್ಧಿಕ ಬಡತನ ಇರುವವರಿಗೆ ಮಾತ್ರ ಈ ಕಾಯ್ದೆ ಕಷ್ಟವಾಗುತ್ತದೆ. ಹಿಂದೆ ನಾನು ಹರಕು ಬಾಯಿಗಳಿಗೆ ಹೊಲಿಗೆ ಬೀಳಬೇಕು ಎಂದು ಹೇಳಿದ್ದೆ, ಈಗ ಈ ಕಾನೂನು ಅಂತಹವರ ಬಾಯಿಗೆ ಬೀಗ ಹಾಕಿದಂತಾಗಿದೆ. ಈಶ್ವರಪ್ಪ, ಚೆನ್ನಬಸಪ್ಪ ಹಾಗೂ ಅರಗ ಜ್ಞಾನೇಂದ್ರ ಅಂತಹ ನಾಯಕರಿಗೆ ಈ ಕಾಯ್ದೆ ಬೇಕಾಗಿಲ್ಲ. ಈ ಹಿಂದೆ ಪೊಲೀಸರಿಗೆ ಅಪಮಾನ ಆಗುವ ರೀತಿ ಮಾತನಾಡಿದ್ದ ಅರಗ ಜ್ಞಾನೇಂದ್ರ ಅಂತಹವರ ಮಾತಿಗೆ ಕಡಿವಾಣ ಹಾಕಲು ಈ ಕಾಯ್ದೆ ಅಗತ್ಯವಿದೆ. ರಕ್ತದ ಅಭಿಷೇಕ ಮಾಡುತ್ತೇನೆ ಎನ್ನುವ ಶಾಸಕರಿಗೂ ಈ ಕಾನೂನಿನ ಮೂಲಕ ಶಿಕ್ಷೆಯಾಗಬೇಕು. ಬಿಜೆಪಿ ನಾಯಕರು ಮೊದಲು ಅಪಪ್ರಚಾರ ನಿಲ್ಲಿಸಿ ಈ ಉತ್ತಮ ಮಸೂದೆಯನ್ನು ಬೆಂಬಲಿಸಬೇಕು,” ಎಂದರು.
ಇದೇ ವೇಳೆ ಪೊಲೀಸ್ ಇಲಾಖೆಯ ಸುಧಾರಣೆಗಳ ಬಗ್ಗೆ ಮಾತನಾಡಿದ ಅವರು, ಪೊಲೀಸರಿಗೆ ವಾರ್ಷಿಕ 13 ತಿಂಗಳ ಸಂಬಳ ಘೋಷಿಸಿರುವ ಸರ್ಕಾರದ ಕ್ರಮ ಸ್ವಾಗತಾರ್ಹ. ನಾನು ಸದನದಲ್ಲಿ ಈ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದ್ದೆ, ಈಗ ಗೃಹ ಸಚಿವ ಪರಮೇಶ್ವರ್ ಅವರು ಅದನ್ನು ಜಾರಿಗೆ ತಂದಿದ್ದಾರೆ. ಆದರೆ ಗಲಭೆ ವೇಳೆ ನೀಡುವ ಭತ್ಯೆಯಲ್ಲಿ ತಾರತಮ್ಯ ಇರಬಾರದು, ಕಲ್ಲು ಯಾರಿಗೆ ಬೀಳುತ್ತದೆ ಎಂದು ಹೇಳಲಾಗದು. ಹಾಗೆಯೇ 10 ವರ್ಷ ಸೇವೆ ಸಲ್ಲಿಸಿದ ಪೊಲೀಸರಿಗೂ ಮತ್ತು ಹೊಸಬರಿಗೂ ಒಂದೇ ವೇತನ ನೀಡುವುದು ಸರಿಯಲ್ಲ, ಸೇವಾ ಹಿರಿತನದ ಆಧಾರದ ಮೇಲೆ ವೇತನ ಹೆಚ್ಚಾಗಬೇಕು. ನಮ್ಮ ರಾಜಕೀಯ ವ್ಯವಸ್ತೆಯಲ್ಲಿಯೇ ಒಮ್ಮೆ ಶಾಸಕನಾಗಿ ಆಯ್ಕೆಯಾಗಿ ಪುನಃ ಮತ್ತೊಮ್ಮೆ ಆಯ್ಕೆಯಾದ ಶಾಸಕರಿಗೆ ವೇತನ ಹೆಚ್ಚು ಮಾಡಲಾಗುತ್ತದೆ. ಅಂತೆಯೇ ಪೊಲೀಸರಿಗೂ ಸಹ ವೇತನ ಹೆಚ್ಚಾಗಬೇಕು ಹುತಾತ್ಮ ದಿನಾಚರಣೆಗೆ ನೀಡುವ 10 ಸಾವಿರ ರೂಪಾಯಿ ಯಾವುದಕ್ಕೂ ಸಾಲುವುದಿಲ್ಲ, ಅದನ್ನು ಹೆಚ್ಚಿಸಬೇಕು. ಸದನದಲ್ಲಿ ಪೊಲೀಸರ ಪರವಾಗಿ ಮಾತನಾಡಿದ ಏಕೈಕ ಶಾಸಕ ನಾನೊಬ್ಬನೇ, ಗೃಹ ಸಚಿವರು ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತಾರೆಂಬ ನಂಬಿಕೆ ನನಗಿದೆ, ಎಂದು ಅವರು ತಿಳಿಸಿದರು.
