ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 25 2025 : ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಜಾತಿಗಣತಿಯಲ್ಲಿ ಪಾಲ್ಗೊಂಡಿರುವ ಶಿಕ್ಷಕರಿಗೆ ನಾನಾ ಸಮಸ್ಯೆಗಳು ಎದುರಾಗುತ್ತಿದೆ. ಮೇಲಾಗಿ ಟೆಕ್ನಿಕಲ್ ಎರರ್ನಿಂದ ಶಿಕ್ಷಕರು ಸರ್ವೆಗೆ ಹೋಗಲಾಗುತ್ತಿಲ್ಲ. ಈ ಬಗ್ಗೆ ಮಲೆನಾಡುಟುಡೆಗೆ ಹಲವು ಶಿಕ್ಷಕರು ಕರೆ ಮಾಡಿದ್ದು ತಮಗಾಗುತ್ತಿರುವ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಗೌಪ್ಯವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಶಿಕ್ಷಕರು ನೀಡಿರುವ ಮಾಹಿತಿ ಪ್ರಕಾರ, ಗಣತಿಗೆ ಸಂಬಂಧಿಸಿದ ಕಿಟ್ ಸಹ ಎಲ್ಲರಿಗೂ ಪೂರೈಕೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಜಾತಿಗಣತಿಗೆ ಕೊನೆಗಳಿಗೆಯಲ್ಲಿ ಹೈಸ್ಕೂಲ್ ಶಿಕ್ಷಕರಿಗೆ ಕರೆ ಮಾಡಿದ್ದ ಅಧಿಕಾರಿಗಳು, ಮರುದಿನ ತರಬೇತಿಗೆ ಬರುವಂತೆ ಸೂಚಿಸಿತ್ತು. ಮರುದಿನ ತರಬೇತಿಯ ವೇಳೆ ಹಲವರಿಗೆ ಕಿಟ್ ಸಿಕ್ಕಿಲ್ಲ ಎಂಬ ಆರೋಪ ಶಿಕ್ಷಕರದ್ದಾಗಿದೆ. ದೃಢೀಕರಣದ ಪೇಪರ್ ನೀಡಿ ಅದನ್ನೆ ಜೆರಾಕ್ಸ್ ಮಾಡಿಕೊಳ್ಳಿ ಎಂದು ಸೂಚಿಸಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.
ಇದೊಂದು ಕಡೆಯಾದರೆ, ಜಾತಿಗಣತಿಗೆ ಸಂಬಂಧಿಸಿದ ಆಪ್ ಕೈಕೊಡುತ್ತಿದ್ದು, ಅದರಿಂದಾಗಿಯೇ ಜಾತಿಗಣತಿಯನ್ನು ಸೂಕ್ತವಾಗಿ ನಡೆಸಲು ಆಗುತ್ತಿಲ್ಲ ಎಂದು ಗಣತಿಯಲ್ಲಿ ಪಾಲ್ಗೊಂಡವರು ಆರೋಪಿಸಿದ್ದಾರೆ. ಐಫೋನ್ ಗಳಿಗೆ ಆಪ್ ಡೌನ್ಲೌಡ್ ಆಗುತ್ತಿಲ್ಲ. ಈ ಬಗ್ಗೆ ಕೇಳಿದರೆ ಬೇರೆ ಮೊಬೈಲ್ ಬಳಸಿ ಎನ್ನುತ್ತಿದ್ದಾರೆ. ಇದು ಸಹ ಗಣತಿಯಲ್ಲಿ ಪಾಲ್ಗೊಂಡವರಿಗೆ ಗೊಂದಲ ಮೂಡಿಸುತ್ತಿದೆ. ಇನ್ನೂ ಆಪ್ ಡೌನ್ಲೋಡ್ ಆದ ಆಂಡ್ರಾಯಿಡ್ ಮೊಬೈಲ್ಗಳಲ್ಲಿ ಆಪ್ ಎರರ್ ತೋರಿಸುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಇವೆಲ್ಲದರ ನಡುವೆ ಆಪ್ ಡೌನ್ಲೋಡ್ ಆಗದೆ, ಡೌನ್ಲೋಡ್ ಆದರೂ ಎರರ್ ಎಂದು ಬರುತ್ತಿರುವ ಮೆಸೇಜ್ಗಳಿಂದಾಗಿ ಗಣತಿದಾರರು ಯಾವ ಏರಿಯಾಕ್ಕೆ ಸರ್ವೆಗೆ ಹೋಗಬೇಕು ಎಂದು ಗೊತ್ತಾಗದೇ ಮನೆಯಲ್ಲಿಯೇ ಉಳಿಯುತ್ತಿದ್ದಾರೆ. ಆಪ್ನಲ್ಲಿ ತೋರುವ ಪ್ರದೇಶದಲ್ಲಿಯೇ ಗಣತಿದಾರರು ಸಮೀಕ್ಷೆಗೆ ಹೋಗಬೇಕು. ಟೆಕ್ನಿಕಲ್ ಸಮಸ್ಯೆಯಿಂದಾಗಿ ನಾವು ಹೋಗಲಾಗುತ್ತಿಲ್ಲ ಎಂಬುದು ಗಣತಿಗೆ ತೆರಳಲು ಸಿದ್ಧವಾಗಿರುವ ಶಿಕ್ಷಕರ ಅಭಿಪ್ರಾಯವಾಗಿದೆ
ಇನ್ನೂ ಪ್ರತಿ 15 ಶಿಕ್ಷಕರಿಗೆ ಒಬ್ಬ ಸೂಪರ್ವೈಸರ್ ನೇಮಕವಾಗಬಹುದು. ಸದ್ಯ ಆ ಕೆಲಸ ಇನ್ನೂ ಆಗಿಲ್ಲ ಎನ್ನುವುದು ಗಣತಿದಾರರ ಆಕ್ಷೇಪವಾಗಿದೆ. ಸರ್ವೆಗೆ ಹೋಗಿ ಎನ್ನುತ್ತಾರೆ. ಆದರೆ ಸರ್ವೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ಯಾರನ್ನು ಸಂಪರ್ಕಿಸಬೇಕು. ಯಾರ ಸಲಹೆಯನ್ನು ಪಡೆಯಬೇಕು ಎಂಬಿತ್ಯಾದಿ ವಿವರಗಳು ಲಭ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ.
ಈ ಎಲ್ಲಾ ಸಮಸ್ಯೆಗಳ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನ ಪಲನೀಡಲಿಲ್ಲ. ಒಟ್ಟಾರೆ ಜಾತಿಗಣತಿಯ ವಿಚಾರದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತಿದ್ದು, ಆದಷ್ಟು ಬೇಗ ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಸಮಸ್ಯೆಗಳನ್ನು ಸರಿಪಡಿಸಬೇಕಿದೆ.
Caste Census in Shivamogga Faces Technical Glitches,