SHIVAMOGGA | Jan 16, 2024 | ಶಿವಮೊಗ್ಗ ವಿಮಾನ ನಿಲ್ದಾಣ ಕ್ಕೆ ಹೋಗುತ್ತಿದ್ದ ಟ್ಯಾಕ್ಸಿ ಚಾಲಕನನ್ನ ಎನ್.ಟಿ ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ಮಾಡಿದ ಆರೋಪ ಸಂಬಂಧ ವಿಡಿಯೋವೊಂದು ವೈರಲ್ ಆಗಿದೆ. ಅಲ್ಲದೆ ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೆಂಟ್ ಸಹ ದಾಖಲಾಗಿದೆ. ಪೂರಕವಾಗಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿವಕುಮಾರ್ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ. ಇವರು ಏರ್ಪೋರ್ಟ್ಗೆ ಟ್ಯಾಕ್ಸಿ ಓಡಿಸುತ್ತಾರೆ. ಕಳೆದ ಶನಿವಾರ ಸಹ ವಿಮಾನ ನಿಲ್ದಾಣದಿಂದ ಶಿವಮೊಗ್ಗ ಸಿಟಿಗೆ ಪ್ರಯಾಣಿಕರೊಬ್ಬರನ್ನು ಡ್ರಾಪ್ ಮಾಡಿ ಮತ್ತೆ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು.
ಈ ವೇಳೆ ಇವರನ್ನ ಬೈಕ್ನಲ್ಲಿ ಬಂದ ಇಬ್ಬರು ಅಡ್ಡಗಟ್ಟಿದ್ದಾರೆ. ಅಲ್ಲದೆ ಮತ್ತೊಂದು ಬೈಕ್ನಲ್ಲಿ ಬಂದ ಇಬ್ಬರು ಶಿವಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ದೃಶ್ಯ ಅಲ್ಲಿಯೇ ಇದ್ದವರ ಮೊಬೈಲ್ಗಳಲ್ಲಿ ಸೆರೆಯಾಗಿದೆ. ಪ್ರಕರಣದಲ್ಲಿ ಹಲ್ಲೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಸ್ಥಳೀಯರು ಜಗಳ ಬಿಡಿಸಿ ಅಲ್ಲಿದ್ದವರನ್ನ ಕಳುಹಿಸಿದ್ದಾರೆ.
ಇನ್ನೂ ಹಲ್ಲೆಗೊಳಗಾದ ಶಿವಕುಮಾರ್ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.