ಶಿವಮೊಗ್ಗ : ಜಿಲ್ಲೆಯಲ್ಲಿ ಇತ್ತೀಚೆಗೆಷ್ಟೆ ಜಾವಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಕ್ರಮವಾಗಿರುವ ಬಗ್ಗೆ ಸುದ್ದಿಯಾಗಿತ್ತು.ಇದರ ಬೆನ್ನಲ್ಲೆ ಶಿವಮೊಗ್ಗ ತಾಲ್ಲೂಕಿನಲ್ಲಿ ಇನ್ನೊಂದು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಕ್ರಮವೆಸಗಿರುವುದು ಜಗತ್ ಜಾಹಿರ್ ಆಗಿದೆ. ಬಿ.ಬೀರನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಹಿವಾಟಿನಲ್ಲಿ ₹30 ಲಕ್ಷಕ್ಕೂ ಅಧಿಕ ಮೊತ್ತದ ಅವ್ಯವಹಾರ ನಡೆದಿರುವ ದೂರುಗಳು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಕ್ಷೇತ್ರಾಧಿಕಾರಿ ಮಂಜುನಾಥ್ ಎಂಬವರನ್ನು ತನಿಖಾಧಿಕಾರಿಯಾಗಿ ನೇಮಿಸಿ, ಅಕ್ರಮದ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು.
BREAKING NEWS : ಶಿವಮೊಗ್ಗ KSRTC ಬಸ್ಸ್ಟಾಂಡ್ ಪಕ್ಕದಲ್ಲಿಯೇ ಪತ್ತೆಯಾಯ್ತು ಮೃತದೇಹ
ಆದರೆ, ಇದುವರೆಗು ತನಿಖಾಧಿಕಾರಿಯು ಪ್ರಕರಣ ಸಂಬಂಧ ಯಾವುದೇ ವರದಿ ನೀಡಿಲ್ಲ ಎನ್ನಲಾಗಿದೆ. ಈ ತನಿಖಾಧಿಕಾರಿಯು ಬಿ.ಬೀರನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಒತ್ತಡ/ ಆಮೀಷಕ್ಕೆ ಒಳಗಾಗಿದ್ದಾರೆ ಎಂಬ ಆರೋಪಗಳು ಸ್ಥಳೀಯವಾಗಿ ಕೇಳಿಬಂದಿದೆ.
ಬಂಗಾರ ಅಡಮಾನದ ಸಾಲದಲ್ಲಿ ಗೋಲ್ಮಾಲ್?
ಮೂಲಗಳ ಪ್ರಕಾರ, ಈ ಸಂಘದಲ್ಲಿ ನೀಡಲಾದ ಬಂಗಾರ ಅಡಮಾನ ಸಾಲದಲ್ಲಿ ನಾನಾ ರೀತಿಯ ಅಕ್ರಮಗಳು ಜರುಗಿದ್ದವು. ಬಂಗಾರದ ಅಸಲಿ ಮೌಲ್ಯಕ್ಕೆ ಪ್ರತಿಯಾಗಿ ಶೇಕಡಾ ಆರವತ್ತರಷ್ಟು ಸಾಲ ನೀಡಬಹುದಾಗಿದೆ. ಆದರೆ ಈ ಸಂಘದಲ್ಲಿ ಶೇಕಡಾ 90 ರಷ್ಟು ಸಾಲವನ್ನು ನೀಡಿರುವ ಉದಾಹರಣೆಗಳಿವೆ ಎನ್ನಲಾಗುತ್ತಿದೆ. ಅಲ್ಲದೆ ಕೆಲವು ಪ್ರಕರಣಗಳಲ್ಲಿ ಅಸಲು, ಬಡ್ಡಿ ಸೇರಿಸಿದರೆ ಶೇಕಡಾ ನೂರಕ್ಕಿಂತಲೂ ಹೆಚ್ಚಿನ ಮೊತ್ತದ ಸಾಲ ಬಾಕಿಯಿರುತ್ತದೆ. ಅಲ್ಲದೆ ನೂರಕ್ಕೂ ಅಧಿಕ ಸಾಲಗಾರರಿಂದ 30 ಲಕ್ಷಕ್ಕೂ ಅಧಿಕ ಮೊತ್ತವು ಸುಸ್ತಿಯಾಗಿಯೇ ಉಳಿದುಕೊಂಡಿದೆ.
ಇದನ್ನು ಸಹ ಓದಿ: ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್
ಇದಕ್ಕಿಂತ ಹೆಚ್ಚಾಗಿ ಸಂಘದ ಬೈಲಾ ಪ್ರಕಾರ ಐದು ಲಕ್ಷ ರೂಪಾಯಿವರೆಗಷ್ಟೆ ಬಂಗಾರ ಅಡಮಾನ ಸಾಲ ನೀಡಬಹುದಾಗಿದೆ. ಆದರೆ ಪತ್ತಿನ ಸಹಕಾರ ಸಂಘದಲ್ಲಿ ಐದು ಲಕ್ಷಕ್ಕಿಂತಲೂ ಹೆಚ್ಚಿನ ಮೊತ್ತದ ಸಾಲ ನೀಡಲಾಗಿದೆ. ಮತ್ತು ದಾಖಲೆ ಪತ್ರಗಳನ್ನು ನಿಯಮಾನುಸಾರ ಸಮರ್ಪಕವಾಗಿ ನಿರ್ವಹಿಸದೇ ಇರುವುದು ಕಂಡುಬಂದಿದೆ. ಒಟ್ಟಾರೆ, ಬಂಗಾರ ಅಡಮಾನ ಸಾಲದಲ್ಲಿ ಸುಮಾರು 3,50,000 ರೂಪಾಯಿಗೂ ಅಧಿಕ ವ್ಯತ್ಯಾಸ ಇದೆ ಎನ್ನಲಾಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
ಉಳಿತಾಯ ಠೇವಣಿಯಲ್ಲಿ ವ್ಯತ್ಯಾಸ
ಇದಲ್ಲದೆ ಉಳಿತಾಯ ಠೇವಣಿ, ಷೇರು ಖಾತೆ, ಫಿಕ್ಸೆಡ್ ಡಿಪಾಸಿಟ್ ಗಳ ಬ್ಯಾಲೆನ್ಸ್ ಶೀಟ್ ನಲ್ಲಿ ಏಳು ಲಕ್ಷಕ್ಕೂ ಅಧಿಕ ಮೌಲ್ಯದ ಹಣದ ವ್ಯತ್ಯಾಸವಾಗಿದೆ ಎಂದು ಆರೋಪಿಸಲಾಗುತ್ತಿದೆ. ಡಿಸಿಸಿ ಬ್ಯಾಂಕ್ನ, ಕೆಸಿಸಿ ಸಾಲದ ಮೊತ್ತದಲ್ಲಿಯೇ ಸುಮಾರು 16 ಲಕ್ಷ ರೂಪಾಯಿಗೂ ಮೀರಿದ ವ್ಯತ್ಯಾಸವಿದೆ ಎನ್ನಲಾಗುತ್ತಿದೆ. ಸಂಘದ ಅಧ್ಯಕ್ಷರು ಉಪಾಧ್ಯಕ್ಷರ ಚುನಾವಣೆ ಆರವತ್ತು ಸಾವಿರ ರೂಪಾಯಿಗು ಅಧಿಕ ಹಣ ವೆಚ್ಚ ಮಾಡಲಾಗಿದ್ದು, ಇದಕ್ಕೆ ಪೂರಕ ದಾಖಲಾತಿಗಳನ್ನು ನೀಡಲಾಗಿಲ್ಲ ಎಂದು ಆರೋಪಿಸಲಾಗುತ್ತಿದೆ.
ಒಂದೇ ಕುಟುಂಬದವರ ಉದ್ಯೋಗ
ಆಪತ್ ಧನ ನಿದಿಯಲ್ಲಿ ಸುಮಾರು ₹ 8 ಲಕ್ಷ ರೂಪಾಯಿಗೂ ಅಧಿಕ ವ್ಯತ್ಯಾಸವಾಗಿದ್ದು ಎನ್ನಲಾಗಿದೆ, ಗೊಬ್ಬರ ಕಂಪನಿಗೆ ಸಂದಾಯ ಮಾಡಿದ ಹಣದಲ್ಲಿಯು ದೋಖಾ ಆಗಿದೆ ಎನ್ನಲಾಗುತ್ತಿದೆ. ಇನ್ನೂ ಸಹಕಾರಿ ಸಂಘಗಳ ನಿಯಮಾವಳಿಯ ಪ್ರಕಾರ, ಪತ್ತಿನ ಸಂಘದ ಸಿಬ್ಬಂದಿಗಳಾಗಿ, ಒಂದೇ ಕುಟುಂಬದವರು ನೇಮಕವಾಗುವಂತಿಲ್ಲ. ಆದರೆ ಇಲ್ಲಿ ಪತಿ ಪತ್ನಿ ಹಾಗೂ ಸಹೋದರನ ನೇಮಕಾತಿ ಆಗಿರುವುದು ಕಂಡುಬಂದಿದೆ.
ಈ ಮೊದಲು ಬಸವರಾಜ್ ಎಂಬವರು ಸಿಇಒ ಆಗಿದ್ದು ಅವರು ತಮ್ಮ ಮೊದಲ ಪತ್ನಿಯನ್ನು ನೌಕರಿಗೆ ಸೇರಿಸಿಕೊಂಡಿದ್ದರು , ಅವರ ಮೊದಲ ಪತ್ನಿಯ ಮರಣಾನಂತರನ ತಮ್ಮ ಸಹೋದರ ಪರಮೇಶ್ ರನ್ನ ಸಿಬ್ಬಂದಿಯಾಗಿ ನೇಮಿಸಿಕೊಂಡಿದ್ದರು, ಪ್ರಸ್ತುತ ಬಸವರಾಜ್ ನಿವೃತ್ತರಾಗಿದ್ದು, ಅವರ ಸ್ಥಾನಕ್ಕೆ ಪರಮೇಶ್ ನೇಮಕಗೊಂಡಿದ್ಧಾರೆ. ನಿವೃತ್ತರಾದ ಬಸವರಾಜ್ ರನ್ನು ನಿಯಮಬಾಹಿರವಾಗಿ ಸಂಘದ ಆಂತರಿಕ ಲೆಕ್ಕ ಪರಿಶೋಧಕರನ್ನಾಗಿ ನೇಮಿಸಿಕೊಂಡು ವೇತನ ನೀಡಲಾಗುತ್ತಿದೆ.
ಇನ್ನು ವರದಿ ನೀಡದ ತನಿಖಾಧಿಕಾರಿ
ಇಷ್ಟೆಲ್ಲಾ ಅಕ್ರಮಗಳ ಆರೋಪಗಳು ಬಹಿರಂಗವಾಗಿಯೇ ಕೇಳಿಬರುತ್ತಿದ್ದು, ಈ ಸಂಬಂಧ ತನಿಖೆಗೆ ನೇಮಕಗೊಂಡಿದ್ದ ಕ್ಷೇತ್ರಾಧಿಕಾರಿಯು ಇನ್ನೂ ಸಹ ಸಹಕಾರ ಸಂಘಗಳ ಉಪ ನಿಬಂಧಕರಿಗೆ ತನಿಖಾ ವರದಿಯನ್ನು ಸಲ್ಲಿಸಿಲ್ಲ. ತನಿಖಾ ವರದಿ ನೀಡದಂತೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆಯೇ? ಅಥವಾ ಪ್ರಭಾವಿಗಳ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆಯೇ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸ್ಪಷ್ಟನೆಗಾಗಿ ತನಿಖಾಧಿಕಾರಿ ಮಂಜುನಾಥ್ರನ್ನು ಸಂಪರ್ಕಿಸಿದಾಗ ಅವರ ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
