Arecanut price : ಜನವರಿ ಫೆಬ್ರವರಿ ತಿಂಗಳಲ್ಲಿ ಆಮೆ ಗತಿಯಲ್ಲಿ ಸಾಗುತ್ತಿದ್ದ ಅಡಿಕೆ ರೇಟ್ ಇದೀಗ ಕುದುರೆ ವೇಗವನ್ನ ಪಡೆದುಕೊಳ್ಳುತ್ತಿದೆ. ಬೆಲೆ ಇಷ್ಟೊಂದು ಏರಿಕೆಯಾಗುವುದಿಲ್ಲ ಎಂದು ಅಂದುಕೊಂಡು, ಮೊದಲೇ ಮಂಡಿ ಮಾಲೀಕರು ಕೇಳಿದ ಬೆಲೆಗೆ ತಮ್ಮ ಅಡಿಕೆಯನ್ನು ಮಾರಿದ ರೈತರು ಈಗ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಏಕೆಂದರೆ, ಇದೀಗ ಅಡಿಕೆ ಬೆಲೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಹಾಗಾದರೆ, ಈ ಸಂದರ್ಭದಲ್ಲಿ ಅಡಿಕೆ ಬೆಲೆ ಹೆಚ್ಚಾಗಲು ಕಾರಣಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕೆಲವು ಅಡಿಕೆ ಮಂಡಿಗಳ ವ್ಯವಸ್ಥಾಪಕರ ಪ್ರಕಾರ, ಕಳೆದ ಬಾರಿ ಮಲೆನಾಡು ಸೇರಿದಂತೆ ಹಲವು ಭಾಗಗಳಲ್ಲಿ ಅಡಿಕೆ ಫಸಲು ಬಹಳ ಕಡಿಮೆಯಾಗಿದೆ. ಉದಾಹರಣೆಗೆ, ಪ್ರತಿ ವರ್ಷ 20 ಕ್ವಿಂಟಾಲ್ ಅಡಿಕೆ ತೆಗೆಯುತ್ತಿದ್ದ ರೈತರು, ಈ ಬಾರಿ ಕೊಳೆ ರೋಗ ಮತ್ತು ಎಲೆಚುಕ್ಕೆ ರೋಗದಂತಹ ಸಮಸ್ಯೆಗಳಿಂದ ಕೇವಲ 10 ಕ್ವಿಂಟಾಲ್ ತೆಗೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿಂದೆ 20 ಸಾವಿರ ಕ್ವಿಂಟಾಲ್‌ಗಳಷ್ಟು ಅಡಿಕೆ ದಾಸ್ತಾನು ಪಡೆಯುತ್ತಿದ್ದ ಮಂಡಿಗಳು, ಈ ವರ್ಷ ಕೇವಲ 3 ಸಾವಿರ ಕ್ವಿಂಟಾಲ್‌ಗಳಷ್ಟು ಮಾತ್ರ ಸ್ವೀಕರಿಸುತ್ತಿವೆ. ಫಸಲು ಕಡಿಮೆಯಾಗಿದ್ದರಿಂದ ಬೆಲೆ ಇನ್ನಷ್ಟು ಕುಸಿಯಬಹುದು ಎಂದು ಭಯಗೊಂಡ ರೈತರು, ತಮ್ಮ ಸಾಲ ಮತ್ತು ಇತರ ಆರ್ಥಿಕ ಅಗತ್ಯಗಳಿಗಾಗಿ ಹಳೆಯ ಅಡಿಕೆ ದಾಸ್ತಾನುಗಳನ್ನೂ ಸೇರಿಸಿ ಮಾರಲು ಪ್ರಾರಂಭಿಸಿದರು.
ಮೊದಲಿಗೆ, ಮಂಡಿಗಳಲ್ಲಿ ಅಡಿಕೆ ಬೆಲೆ ಕಡಿಮೆಯಿತ್ತು. ಆದರೆ, ಅಡಿಕೆ ಫಸಲು ಕಡಿಮೆಯಾಗಿ ಮಂಡಿಗಳಿಗೆ ಪೂರೈಕೆ ಕಡಿಮೆಯಾದಾಗ, ಮಂಡಿ ಮಾಲೀಕರು ಬೆಲೆಯನ್ನು ಹೆಚ್ಚಿಸಲು ಶುರು ಮಾಡಿದರು. ಈ ವರ್ಷ ಇಳುವರಿ ಕಡಿಮೆ ಇದ್ದ ಕಾರಣ, ಪ್ರತಿ ವರ್ಷ ದಾಸ್ತಾನು ಇಡುತ್ತಿದ್ದ ರೈತರೂ ಸಹ ತಮ್ಮಲ್ಲಿರುವ ಎಲ್ಲಾ ಅಡಿಕೆಯನ್ನು ಮಾರಲು ನಿರ್ಧರಿಸಿದರು. ಇದೆಲ್ಲದರ ಪರಿಣಾಮವಾಗಿ, ಅರ್ಥಶಾಸ್ತ್ರದ ನಿಯಮದಂತೆ ಪೂರೈಕೆ ಕಡಿಮೆ ಆದಾಗ ಬೇಡಿಕೆ ಹೆಚ್ಚಾಗುತ್ತದೆ ಎಂಬುದು ಇಲ್ಲಿ ಸತ್ಯವಾಯಿತು.
Arecanut price : ಚೇಣಿ ಹಿಡಿಯುವವರಿಗೆ ತಲೆನೋವು
ಸಾಮಾನ್ಯವಾಗಿ ಅಡಿಕೆ ಬೆಲೆಯ ಬದಲಾವಣೆಗಳು ಚೇಣಿ ಹಿಡಿಯುವವರಿಗೆ ದೊಡ್ಡ ಸಮಸ್ಯೆಯನ್ನುಂಟುಮಾಡುತ್ತವೆ. ಮಲೆನಾಡು ಭಾಗದಲ್ಲಿ ಅಡಿಕೆ ತೋಟಗಳನ್ನು ಗುತ್ತಿಗೆ (ಚೇಣಿ) ಹಿಡಿಯುವ ಸಮಯ ಇದಾಗಿದೆ. ಈಗ ಬೆಲೆ ಹೆಚ್ಚಿರುವುದರಿಂದ ತೋಟದ ಮಾಲೀಕರು ಗುತ್ತಿಗೆ ನೀಡಲು ಮುಂದಾಗುತ್ತಾರೆ. ಉದಾಹರಣೆಗೆ, ಈಗ ಒಣ ಅಡಿಕೆ ಕ್ವಿಂಟಾಲ್‌ಗೆ 60 ಸಾವಿರ ಇದ್ದರೆ, ಕೆಲವೆಡೆ ಹಸಿ ಅಡಿಕೆ ಚೇಣಿ ಹಿಡಿಯುವವರು ಕ್ವಿಂಟಾಲ್‌ಗೆ 6 ಸಾವಿರ ಕೊಡಬೇಕಾಗುತ್ತದೆ. ಇದು ಈಗಿನ ಮಾರುಕಟ್ಟೆ ಬೆಲೆಗೆ ಸರಿಯಾಗಿರುತ್ತದೆ. ಆದರೆ, ಚೇಣಿದಾರ ಅದನ್ನು ಸಂಸ್ಕರಿಸಿ ಮಂಡಿಗೆ ಬಿಡುವಾಗ ಒಣ ಅಡಿಕೆ ಬೆಲೆ ಕ್ವಿಂಟಾಲ್‌ಗೆ 45 ಸಾವಿರಕ್ಕೆ ಇಳಿಯುವ ಸಾಧ್ಯತೆ ಇರುತ್ತದೆ. ಅದೇ ರೀತಿ, ಹಸಿ ಅಡಿಕೆ ಬೆಲೆ ಕ್ವಿಂಟಾಲ್‌ಗೆ 4,500 ಆಗಿರಬಹುದು. ಅದರಲ್ಲೂ ಗೊರಬಲು ಅಡಿಕೆ ಬಂದರೆ ನಷ್ಟ ಮತ್ತಷ್ಟು ಹೆಚ್ಚಾಗುತ್ತದೆ. ಹೀಗಾಗಿ, ಇದು ಚೇಣಿದಾರರಿಗೆ ನಷ್ಟಕ್ಕೆ ಕಾರಣವಾಗುತ್ತದೆ.
ಒಟ್ಟಾರೆಯಾಗಿ, ಈ ವರ್ಷ ಅಡಿಕೆ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣಗಳೆಂದರೆ ಫಸಲು ಇಳಿಕೆ, ಮಂಡಿಗಳಲ್ಲಿ ಅಡಿಕೆ ಪೂರೈಕೆ ಕುಸಿತ, ಮತ್ತು ವಿದೇಶಗಳಿಂದ ಅಡಿಕೆ ಆಮದು ಕಡಿಮೆಯಾಗಿರುವುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವರದಿ : ಪ್ರತಾಪ್ ತೀರ್ಥಹಳ್ಳಿ
karnataka shimoga arecanut price today arecanut price arecanut price hike