ಶಿವಮೊಗ್ಗ: ಬೆಂಗಳೂರಿನ ಕೋಗಿಲು ಗ್ರಾಮದ ಸಮುದಾಯಕ್ಕೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಹಕ್ಕು ಪತ್ರ ನೀಡಲು ಮುಂದಾಗಿರುವುದನ್ನು ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಖಂಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮವಾಗಿ ನೆಲೆಸಿದವರಿಗೆ ನೀಡುತ್ತಿರುವ ಆದ್ಯತೆಯನ್ನು ದಶಕಗಳಿಂದ ಹೋರಾಡುತ್ತಿರುವ ಶರಾವತಿ ಸಂತ್ರಸ್ತರಿಗೆ ನೀಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೋಗಿಲು ಗ್ರಾಮದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್‌ಗಳನ್ನು ತೆರವುಗೊಳಿಸಿದಾಗ ಕೇರಳ ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಬಂದ ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಅಲ್ಲಿ ನೆಲೆಸಿರುವವರು ಯಾರು, ಎಲ್ಲಿಂದ ಬಂದವರು ಎಂಬ ದಾಖಲೆಗಳಿಲ್ಲದಿದ್ದರೂ ಅವರಿಗೆ ಪಡಿತರ ಚೀಟಿ ಹಾಗೂ ಫ್ಲಾಟ್‌ಗಳನ್ನು ನೀಡಲು ಸರ್ಕಾರ ಗಡಿಬಿಡಿ ಮಾಡುತ್ತಿದೆ. ಜಮ್ಮು-ಕಾಶ್ಮೀರ, ಆಂಧ್ರ ಹಾಗೂ ಕೇರಳದ ನಿವಾಸಿಗಳು ಅಲ್ಲಿ ಬಂದು ನೆಲೆಸಿದ್ದು, ಅವರನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಕೆಲವು ಸಚಿವರು ಇವರಿಂದ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ ಎಂದು ಅವರು ದೂರಿದರು.
ರಾಜ್ಯಕ್ಕೆ ವಿದ್ಯುತ್ ನೀಡಲು ತಮ್ಮ ಭೂಮಿ ತ್ಯಾಗ ಮಾಡಿದ ಶರಾವತಿ ಮುಳುಗಡೆ ಸಂತ್ರಸ್ತರು ಕಳೆದ 60 ವರ್ಷಗಳಿಂದ ಹಕ್ಕು ಪತ್ರಕ್ಕಾಗಿ ಪರದಾಡುತ್ತಿದ್ದಾರೆ. ಕಾಡಿನ ಮಧ್ಯೆ ಬದುಕು ಕಟ್ಟಿಕೊಂಡಿರುವ ಈ ರೈತರಿಗೆ ಮಂಜೂರಾತಿ ನೀಡದ ಸರ್ಕಾರ, ಎಲ್ಲಿಂದಲೋ ಬಂದವರಿಗೆ ಮಣೆ ಹಾಕುತ್ತಿರುವುದು ವಿಪರ್ಯಾಸ. ನಮ್ಮ ಸರ್ಕಾರ ಬಂದರೆ ಹಕ್ಕು ಪತ್ರ ನೀಡುತ್ತೇವೆ ಎಂದು ಪಾದಯಾತ್ರೆ ಮಾಡಿದ್ದ ಡಿ.ಕೆ. ಶಿವಕುಮಾರ್ ಅವರು ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಭರವಸೆ ಈಡೇರಿಸಿಲ್ಲ ಎಂದು ಟೀಕಿಸಿದರು.
ಶರಾವತಿ ಸಂತ್ರಸ್ತರ ಬಗ್ಗೆ ಮಾಹಿತಿ ಇದ್ದ ಜಿಲ್ಲಾಧಿಕಾರಿಗಳನ್ನು ಹಠಾತ್ ವರ್ಗಾವಣೆ ಮಾಡಿರುವುದು ರೈತರ ಸಮಸ್ಯೆಯನ್ನು ಮತ್ತಷ್ಟು ವಿಳಂಬ ಮಾಡುವ ತಂತ್ರವಾಗಿದೆ. ಹೊಸ ಜಿಲ್ಲಾಧಿಕಾರಿಗಳು ವಿಷಯವನ್ನು ಅಭ್ಯಾಸ ಮಾಡುವಷ್ಟರಲ್ಲಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ ಸರ್ಕಾರ ಮೊದಲು ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು, ಇಲ್ಲದಿದ್ದರೆ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
Araga Jnanendra ಭರತ್ ರೆಡ್ಡಿ ಬಂಧನಕ್ಕೆ ಆಗ್ರಹ
ಇದೇ ಸಂದರ್ಭದಲ್ಲಿ ಬಳ್ಳಾರಿ ಘಟನೆ ಬಗ್ಗೆ ಮಾತನಾಡಿದ ಅವರು, ಅಲ್ಲಿನ ಪರಿಸ್ಥಿತಿ ಶೋಚನೀಯವಾಗಿದ್ದು ಅನವಶ್ಯಕವಾಗಿ ಒಬ್ಬ ವ್ಯಕ್ತಿಯ ಜೀವ ಹೋಗಿದೆ. “ಐದು ನಿಮಿಷ ಸಾಕು ಮನೆ ಸುತ್ತು ಹಾಕುತ್ತೇನೆ” ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿರುವ ಶಾಸಕ ಭರತ್ ರೆಡ್ಡಿಯನ್ನು ಕೂಡಲೇ ಬಂಧಿಸಬೇಕು. ಒಬ್ಬ ಶಾಸಕರಾಗಿ ಈ ರೀತಿ ಜನರನ್ನು ಪ್ರಚೋದಿಸುವುದು ತಪ್ಪು, ಅವರನ್ನು ದ್ವೇಷ ಭಾಷಣ ವಿರೋಧಿ ಕಾಯ್ದೆಯಡಿ ಬಂಧಿಸಬೇಕು ಎಂದು ಆರಗ ಜ್ಞಾನೇಂದ್ರ ಒತ್ತಾಯಿಸಿದರು.
Araga Jnanendra Slams State Government Over Sharavathi Project
