50 ಪೊಲೀಸ್, 500 ಬೈಕ್​, 3 ಜಿಲ್ಲೆಗಳ ಸಿಸಿ ಟಿವಿ ತಲಾಶ್​! ಪ್ರತಿಮೆ ದ್ವಂಸ ಮಾಡಿದವರ ಉದ್ದೇಶವೇನಿತ್ತು ಗೊತ್ತಾ? ಅಪಾಯ ತಪ್ಪಿಸಿದ ಶಿವಮೊಗ್ಗ ಪೊಲೀಸ್? JP ಇನ್​ವೆಸ್ಟಿಗೇಷನ್​!

Malenadu Today

KARNATAKA NEWS/ ONLINE / Malenadu today/ Aug 24, 2023 SHIVAMOGGA NEWS

ಇವತ್ತಿಗೆ ಮೂರು ದಿನಗಳ ಹಿಂದೆ ಹೊಳೆಹೊನ್ನೂರು ಮಹಾತ್ಮ ಗಾಂಧೀಜಿ ಸರ್ಕಲ್​ನಲ್ಲಿದ್ದ ಗಾಂಧೀಜಿಯವರ ಪ್ರತಿಮೆಯನ್ನು ದುಷ್ಕರ್ಮಿಗಳು ಬೀಳಿಸಿ ಧ್ವಂಸಗೊಳಿಸಿದ್ದರು. 20 ನೇ ತಾರೀಖು ರಾತ್ರಿಯಾದ ಘಟನೆ 21 ರ ಬೆಳಗ್ಗೆ ಅಕ್ಷರಶಃ ಆತಂಕ ಮೂಡಿಸುವಂತೆ ಮಾಡಿತ್ತು. ಅದಕ್ಕೆ ಕಾರಣವೂ ಇತ್ತು. 

Malenadu Today

ಏನೋ ಮಾಡಲು ಹೋಗಿ?

ಸೂಕ್ಷ್ಮ ಪ್ರದೇಶವಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಯಾವ ವಿಚಾರ, ಯಾವುದಕ್ಕೆ ತಗ್ಲಾಕ್ಕೊಂಡು ಏನಾಗುತ್ತದೆ ಎಂಬುದು ಹೇಳೋದು ಕಷ್ಟ. ಹಬ್ಬಗಳ ಸಂದರ್ಭದಲ್ಲಿ ಈ ಕಾರಣಕ್ಕೇನೆ ಪೊಲೀಸ್​ ಇಲಾಖೆ ಹದ್ದಿನ ಕಣ್ಣಿಟ್ಟು ಕೆಲಸ ಮಾಡುತ್ತದೆ..ಹಬ್ಬಗಳ ಒಂದರೆಡು ತಿಂಗಳು ಶಿವಮೊಗ್ಗ ಪೊಲೀಸರಿಗೆ ಹಗಲು ರಾತ್ರಿಯ ವ್ಯತ್ಯಾಸಗಳು ಅಷ್ಟಕಷ್ಟೆ ಆಗಿರುತ್ತದೆ. ತಮ್ಮ ಕುಟುಂಬದ ಕಷ್ಟ ಸುಖ ಬಿಟ್ಟು ಶಿವಮೊಗ್ಗ ನಾಗರಿಕರ ಶಾಂತಿಗೆ ಭಂಗವಾಗದಂತೆ ಇಡೀ ಪೊಲೀಸ್ ಟೀಂ ಕೆಲಸ ಮಾಡುತ್ತದೆ. ಅಂತಹ ಶ್ರಮಕ್ಕೆ ಪೆಟ್ಟುಕೊಡಬಹುದಾದ ಘಟನೆ ಹೊಳೆಹೊನ್ನೂರಿನಲ್ಲಿ ನಡೆದಿತ್ತು. 

Malenadu Today

ಥ್ಯಾಂಕ್ಸ್​ ಟು ಪೊಲೀಸ್ ಇಲಾಖೆ

ರಾಷ್ಟ್ರಪಿತನ ಪ್ರತಿಮೆಯೊಂದನ್ನ ಧ್ವಂಸ ಮಾಡುತ್ತಾರೆ ಅಂದರೆ, ಎಷ್ಟಿರರಬೇಕು ಅವ್ರಿಗೆ! ಹೀಗಂತಾನೇ ಸಿಟ್ಟಿಗೇಳುತ್ತಿದ್ದ ಜನರನ್ನು ಸಮಾಧಾನ ಪಡಿಸುವ ಗುರಿ ಪೊಲೀಸ್ ಇಲಾಖೆಯದ್ದಾಗಿತ್ತು. ಅಲ್ಲದೆ ಪ್ರಕರಣ ಬೇರೆ ಧಿಕ್ಕಿಗೆ ವಾಲದಂತೆ ನೋಡಿಕೊಳ್ಳಬೇಕಾದ ಅನಿವಾರ್ಯ ಜವಾಬ್ದಾರಿಯು ಇಲಾಖೆಯ ಮೇಲಿತ್ತು. ಈ ನಿಟ್ಟಿನಲ್ಲಿ ಎಸ್​ಪಿ ಮಿಥುನ್ ಕುಮಾರ್ ಮಾಡಿದ ಮೊದಲ ಕೆಲಸ , ತಕ್ಷಣವೇ ಘಟನೆ ನಡೆದ ಜಾಗಕ್ಕೆ ಹೋಗಿ ನಿಂತಿದ್ದು. 

Malenadu Today

ವಿಶ್ವಾಸ ನೀಡಿದ ಎಸ್​ಪಿ

ಯಾವಾಗ ಸ್ವತಃ ಎಸ್​ಪಿಯೊಬ್ಬರು ಘಟನಾ ಸ್ಥಳದಲ್ಲಿ ನಿಂತುಕೊಂಡರೋ, ಜನರಲ್ಲಿ ನಡೆದಿದ್ದಕ್ಕೆ ತಾರ್ಕಿಕ ಅಂತ್ಯ ಸಿಗುವ ಭರವಸೆ ಸಿಕ್ಕಿತ್ತು. ಸಾಲದಕ್ಕೆ ಘಟನೆಯನ್ನು ತಿರುಚುವ ಪ್ರಯತ್ನಕ್ಕೂ ಅವಕಾಶ ಸಿಗಲಿಲ್ಲ. ಮೇಲಾಗಿ ಮಿಥುನ್ ಕುಮಾರ್, ನೆರೆದ ಜನರನ್ನ ಸಮಾಧಾನ ಪಡಿಸಿ ಆರೋಪಿಗಳನ್ನು ತಕ್ಷಣವೇ ಹಿಡಿದು, ಶಿಕ್ಷೆ ಕೊಡಿಸುವ ವಿಶ್ವಾಸ ನೀಡಿದ್ರು. 

Malenadu Today

50 ಪೊಲೀಸರ ತಂಡ ನಿಯೋಜನೆ

ಕೇವಲ ಮಾತು ಕೊಟ್ಟು ಸುಮ್ಮನಾಗದ ಎಸ್​ಪಿ ಮಿಥುನ್ ಕುಮಾರ್, ತಕ್ಷಣವೇ ಡಿಪಾರ್ಟ್ಮೆಂಟ್​ ಅಧಿಕಾರಿಗಳ ಮೀಟಿಂಗ್ ತಗೊಂದು, ಸ್ಟ್ರಾಂಗ್ ಟೀಂ ರಚನೆಗೆ ಸೂಚಿಸಿದ್ರು. ಅದರಂತೆ, ರೆಡಿಯಾಯ್ತು ಬರೋಬ್ಬರಿ 50 ಪೊಲೀಸರ ತಂಡ. ಒಂದು ಕ್ರೈಂ ತನಿಖೆಗೆ ಇಷ್ಟೊಂದು ಸಿಬ್ಬಂದಿಯ ತಂಡ ರಚನೆ ಇತ್ತೀಚಿನ ಪ್ರಕರಣಗಳಲ್ಲಿ ಇದೇ ಮೊದಲಿರಬೇಕು. 

Malenadu Today

ಕ್ರೈಂ ಎಕ್ಸ್​ಫರ್ಟ್​!

ಎಸ್​ಪಿ ಸೂಚನೆಯ ಮೇರೆಗೆ ಶಿವಮೊಗ್ಗದ ದಿ ಬೆಸ್ಟ್​ ಆಫಿಸರ್​ಗಳು ಹಾಗೂ ದಿ ಬೆಸ್ಟ್​ ಕ್ರೈಂ ಸಿಬ್ಬಂದಿಗಳು ಅಖಾಡಕ್ಕೆ ಇಳಿದು, ಗಾಂಧೀಜಿಯವರ ಪ್ರತಿಮೆಯನ್ನ ಧ್ವಂಸ ಮಾಡಿದವರಿಗಾಗಿ ಹುಡುಕಾಡಲು ಆರಂಭಿಸಿದ್ರು. ನಿಮಗೆ ಗೊತ್ತಿರಲಿ, ಸಾರ್ವಜನಿಕವಾಗಿ ಕಾಣುವ ಸಮವಸ್ತ್ರದಾರಿ ಫೋಲಿಸರಷ್ಟೆ ಅಲ್ಲದೆ, ಡಿಪಾರ್ಟ್​ಮೆಂಟ್​ನಲ್ಲಿ ಇನ್ನೂ ಹಲವು ಸಿಬ್ಬಂದಿಗಳಿದ್ದಾರೆ.  ಶಿವಮೊಗ್ಗದಲ್ಲಿ ಹಲವು ಪೊಲೀಸ್ ಸಿಬ್ಬಂದಿ  ಯಾವುದೇ ಹೆಸರು, ಪರಿಚಯ, ಗೌರವ ಬಯಸದೇ ಕ್ರೈಂ ಸೀನ್​ಗಳ ಹಿಂದೆ ಬಿದ್ದು ಓಡಾಡುತ್ತಿರುತ್ತಾರೆ. ಅಂತಹವರ ಸಾಹಸದಿಂದಲೇ ಇಂತಹ ಕ್ರೈಂಗಳು ಕೆಲವೇ ಗಂಟೆಗಳಲ್ಲಿ, ದಿನಗಳಲ್ಲಿ ಬಯಲಾಗುತ್ತಿರುತ್ತದೆ. 

Malenadu Today

ಹುಡುಕು ಹುಡುಕು ಹುಡುಕು

ಕೇಸ್ ವಿಚಾರಕ್ಕೆ ಬರೋದಾದ್ರೆ, ಇನ್​ವೆಸ್ಟಿಗೇಷನ್​ ತಂಡಕ್ಕೆ ಸಿಕ್ಕಿದ್ದು ಸಿಸಿಟಿವಿ ಪೂಟೇಜ್​ ಸುಳಿವು ಮಾತ್ರ. ತೀರಾ ಬ್ಲರ್ ಆಗಿ ಕಾಣುತ್ತಿದ್ದ ಸಿಸಿ ಟಿವಿ ಪೂಟೇಜ್​ನ್ನ ಅನಾಲಿಸಿಸಸ್ ಮಾಡಿದ ಟೀಂ, ಅಲ್ಲಿದ್ದ ಬೈಕ್​ನ್ನ ಹೀರೋ ಎಕ್ಸ್​ ಎಂದು ಗುರುತಿಸಿದೆ. ಗಾಡಿಯ ನಂಬರ್ ಕಾಣಿಸ್ತಿರಲಿಲ್ಲ. ಹಾಗಾಗಿ ಆ ಕಂಪನಿಯ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಮಾರಾಟವಾದ ಆ ಮಾಡಲ್​ ಗಾಡಿಗಳ ಮಾಹಿತಿ ತೆಗೆಯಲು ಮುಂದಾದರು. ಸುಮಾರು  500 ಕ್ಕೂ ಹೆಚ್ಚು ಬೈಕ್​ಗಳ ದಾಖಲೆ ಪರಿಶೀಲನೆಗೆ ಮುಂದಾದರು. 



ಕಾಡಿತ್ತು ಸಣ್ಣ ಅನುಮಾನ

ಇನ್ನೊಂದೆಡೆ , ಸಿಸಿ ಟಿವಿ ಪೂಟೇಜ್​ನಲ್ಲಿ ಆರೋಪಿಗಳ ವರ್ತನೆಯನ್ನು ಸ್ಟಡಿ ಮಾಡಿದ ಪೊಲೀಸರಿಗೆ ಸಣ್ಣದೊಂದು ಅನುಮಾನ ಕಾಡಿತ್ತು. ಆದರೆ, ಆರೋಪಿಗಳ ಪತ್ತೆಯಾದ ಬಳಿಕವಷ್ಟೆ ಆ ಅನುಮಾನಕ್ಕೆ ಉತ್ತರ ಸಿಗುವಂತಿತ್ತು. ಹೊಳೆಹೊನ್ನೂರು ಮಾರ್ಗಕ್ಕೆ ತಲುಪುವ ದಾರಿಯುದ್ದಕ್ಕೂ ಸಿಸಿ ಕ್ಯಾಮರಗಳನ್ನು ಗೆಸ್ಸಿಂಗ್ ಟೈಂನ ಆಧಾರದ ಮೇಲೆ ಪರಿಶೀಲನೆ ನಡೆಸಿದ ಪೊಲೀಸ್ ಟೀಂ ಶಿವಮೊಗ್ಗ-ಚಿತ್ರದುರ್ಗ ಜಿಲ್ಲೆಯನ್ನು ಸುತ್ತಿಕೊಂಡು ಬಂದಿದೆ. 

Malenadu Today

ಬೈಕ್​ನ ಮೇಲೆ ಶಂಕೆ

ಈ ವೇಳೆ ಪೊಲೀಸರಿಗೆ ಒಂದು ಬೈಕ್​ನ ಮೇಲೆ ಅನುಮಾನ ಮೂಡಿತ್ತು. ತಕ್ಷಣವೇ, ಇನ್ನೊಂದು ಟೀಂ ಆ ಬೈಕ್​ನಲ್ಲಿದ್ದವರ ವಿವರಗಳನ್ನ ಕಲೆಹಾಕಿ, ಅವರ ಮೊಬೈಲ್​ ಲೊಕೇಷನ್​ ಘಟನೆ ನಡೆದ ಸಂದರ್ಭದಲ್ಲಿ ಎಲ್ಲಿತ್ತು ಎಂದು ಪರಿಶೀಲಿಸಿದ್ದಾರೆ. ಸೀನ್​ ಕಟ್ ಮಾಡಿದ್ರೆ, ಬೈಕ್​ನಲ್ಲಿದ್ದವರು ಶಿವಮೊಗ್ಗ ಪೊಲೀಸ್ ಇಲಾಖೆಯ ಸುಪರ್ಧಿಯಲ್ಲಿ ಅಂದರ್ ಆಗಿದ್ರು. 

Malenadu Today

ಮೂರು ದಿನಗಳಲ್ಲಿ ಆರೋಪಿಗಳು ಅಂದರ್

ಆರೋಪಿಗಳನ್ನ ಕೇವಲ ಮೂರು ದಿನದಲ್ಲಿ ಅಂದರ್ ಮಾಡಿದ ಶಿವಮೊಗ್ಗ ಪೊಲೀಸರ ಬಗ್ಗೆ ಹೆಮ್ಮೆಯ ಮಾತುಗಳನ್ನ ಆಡುತ್ತಾ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಘಟನೆ ನಡೆದ ಸ್ಥೇಷನ್​ ವ್ಯಾಪ್ತಿಯಲ್ಲಿಯೇ ಪ್ರೆಸ್​ ಮೀಟ್ ಮಾಡಿ ವಿವರ ಕೊಟ್ಟಿದ್ದಾರೆ. ಈ ಮೂಲಕ ಮಾತು ಉಳಿಸಿಕೊಂಡ ಸಂದೇಶವನ್ನು ಜನರಿಗೂ, ತಪ್ಪು ಮಾಡಿದ್ರೆ ಯಾರನ್ನು ಬಿಡೋದಿಲ್ಲ ಎಂಬ ಮೆಸೇಜ್​ನ್ನ ಅಪರಾಧ ಲೋಕಕ್ಕೂ ನೀಡಿದ್ಧಾರೆ. 

Malenadu Today

ಏನಿತ್ತು ಉದ್ದೇಶ

ಇಷ್ಟಕ್ಕೂ ಆರೋಪಿಗಳಿಗೆ ಗಾಂಧೀಜಿಯವರ ಪ್ರತಿಮೆಯನ್ನು ಧ್ವಂಸ ಮಾಡುವಂತಹ ಉದ್ಧೇಶವೇಕಿತ್ತು. ಯಾವ ದುರುದ್ದೇಶಕ್ಕೆ ಹೀಗೆ ಮಾಡಿರಬಹುದು. ಈ ಕುತೂಹಲಕ್ಕೂ ಪ್ರಾಥಮಿಕ ಉತ್ತರ ಸಿಕ್ಕಿದೆ. ಅಸಲಿಗೆ ಸಿಕ್ಕಿಬಿದ್ದಿರುವ ಆರೋಪಿಗಳಿಬ್ಬರ ಕೃತ್ಯದ ಹಿಂದೆ ಅಂತಹ ದುರುದ್ದೇಶವಿರಲಿಲ್ಲ ಎಂಬ ವಿಚಾರ ಮೊದಲ ಹಂತದ ತನಿಖೆಯಲ್ಲಿ ಹೊರಬಿದ್ದಿದೆ. 

Malenadu Today

ನಶೆಯಲ್ಲಿ

ಮಹಾತ್ಮಾ ಗಾಂಧೀಜಿಯವರು ಮದ್ಯಪಾನವನ್ನು ವಿರೋಧಿಸಿದವರು. ಆದರೆ, ಈ ಇಬ್ಬರು ಆರೋಪಿಗಳು ಮದ್ಯದ ನಶೆಯಲ್ಲಿ ಗಾಂಧೀಜಿಯ ಪ್ರತಿಮೆಯನ್ನು ಬೀಳಿಸಿದ್ದಾರೆ. ಜೋಗಕ್ಕೆ ಹೋಗುವು ಸಲುವಾಗಿ ಚಿತ್ರದುರ್ಗದಿಂದ ಬಂದ ಆರೋಪಿಗಳು ದಾರಿಯುದ್ದಕ್ಕೂ ಸಿಕ್ಕ ಸಿಕ್ಕಲ್ಲಿ ಎಣ್ಣೆ ಏರಿಸಿಕೊಂಡು ಬೈಕ್ ಡ್ರೈವ್ ಮಾಡಿಕೊಂಡು ಬಂದಿದ್ದಾರೆ. ಹೀಗೆ ಬರುವಾಗಲೇ ಮಿತಿಮೀರಿದ ಎಣ್ಣೆಯ ನಶೆಯಲ್ಲಿ ಚಿತ್ ಆಗಿದ್ದಾರೆ. ಆ ನಶೆಯಲ್ಲಿಯೇ ಗಾಂಧಿ ಸರ್ಕಲ್​ನಲ್ಲಿದ್ದ ರಾಷ್ಟ್ರಪಿತನ ಪ್ರತಿಮೆಯನ್ನು ನೋಡಿ ಬೈಕ್ ನಿಲ್ಲಿಸಿದ್ದಾರೆ. ಇಬ್ಬರಲ್ಲೊಬ್ಬ ಪ್ರತಿಮೆ ಬಳಿ ಹೋಗಿ ಏನೋ ಮಾತನಾಡಿದ್ಧಾನೆ. ಸಿಸಿಟಿವಿ ಪೂಟೇಜ್ ನೋಡಿ ಪೊಲೀಸರಿಗೆ ಬಂದ ಅನುಮಾನ ಇದೇ ಆಗಿತ್ತು. ಆರೋಪಿ ಗಾಂಧಿ ಪ್ರತಿಮೆ ಎದುರು ನಿಂತು ಮಾತನಾಡ್ತಾ ಪ್ರತಿಮೆಯನ್ನ ಬೀಳಿಸಿದ್ದಾನೆ. ಆನಂತರ ಅಲ್ಲಿಂದ ಶಿವಮೊಗ್ಗದ ಕಡೆಗೆ ಹೊರಟಿದ್ದರು. 

Malenadu Today

ಹೋಗಿ ಬಂದು ಅದೇ ದಾರಿಯಲ್ಲಿ ಸಾಗಿದ್ರು

ಆದರೆ ನಶೆಯಲ್ಲಿ ದಾರಿ ತಪ್ಪಿ ಊರೆಲ್ಲಾ ಸುತ್ತಿಕೊಂಡು ಮತ್ತದೆ ದಾರಿಯಲ್ಲಿ ಚಿತ್ರದುರ್ಗಕ್ಕೆ ಹೊರಟಿದ್ದರು. ಈ ವೇಳೆಗಾಗಲೇ ಪ್ರತಿಮೆ ಧ್ವಂಸವಾಗಿರುವ ವಿಚಾರ ಗೊತ್ತಾಗಿ ಪೊಲೀಸರು ಹೈಅಲರ್ಟ್  ನಲ್ಲಿದ್ದರು. ಅದೇ ಮಾರ್ಗದಲ್ಲಿ ಪಾಸಾದ ಆರೋಪಿಗಳು ಏನೂ ಆಗಿಲ್ಲವೆಂಬತಿದ್ದರು.  ಪೊಲೀಸರು ಬೆನ್ನಿಂದೇನೆ ಬಂದು, ಕಾಲರ್​ಗೆ ಕೈಹಾಕಿದಾಗಲೇ ತಗ್ಲಾಕ್ಕೊಂಡಿರುವುದು ಆರೋಪಿಗಳಿಗೆ ಗೊತ್ತಾಗಿದ್ದು. 

ಗಣೇಶನ ಹಬ್ಬಕ್ಕೆ ಡಿಜೆ ಬುಕ್ ಮಾಡಿದ್ರು

ವಿನಯ್ ಮತ್ತು ಗಣೇಶ್ ಕಳೆದ  ಭಾನುವಾರ ಸ್ನೇಹಿತರ ಜೊತೆಗೆ ಚಿತ್ರದುರ್ಗಕ್ಕೆ ಹೋಗಿ ಗಣಪತಿ ಹಬ್ಬದ ಮೆರವಣಿಗೆಗೆ ಡಿಜೆ ಬುಕ್ ಮಾಡಿದ್ದರು. ಅಲ್ಲಿಂದ ಊರಿಗೆ ವಾಪಸ್ ಆಗಬೇಕಾದವರು, 3 ಸಾವಿರ ರೂಪಾಯಿ ಹಿಡಿದುಕೊಂಡು  ಶಿವಮೊಗ್ಗದ ಕಡೆಗೆ ಬೈಕ್​ ತಿರುಗಿಸಿದ್ದಾರೆ.  ಗಣೇಶನ ಹೀರೋ ಎಕ್ಸ್‌ಪ್ಲಸ್ ಬೈಕ್‌ಗೆ ಪೆಟ್ರೋಲ್ ಹಾಕಿಸಿಕೊಂಡು ಹೊರಟ ಇಬ್ಬರು ಶಿವಮೊಗ್ಗ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ರಸ್ತೆಯುದ್ದಕ್ಕೂ ಅಲ್ಲಲ್ಲಿ ಎಣ್ಣೆ ಹಾಕಿದ್ದಾರೆ.  ಹೊಳೆಹೊನ್ನೂರು ಪ್ರವೇಶಿಸುತ್ತಿದಂತೆ ಮತ್ತೊಮ್ಮೆ ಮದ್ಯ ಸೇವಿಸಿದ್ದಾರೆ. ಬಳಿಕ ಪ್ರತಿಮೆ ಬಳಿ ಹೋಗಿದ್ಧಾರೆ. ಅಲ್ಲಿ ಸ್ವಾತಂತ್ರ್ಯೋತ್ಸವದ ಲೈಟ್ ಹಾಕಿದ್ದು ಅವರ ನಿಗಾ ಸೆಳೆದಿದಿದೆ. ಗಾಡಿಯಿಂದ ಇಳಿದು ಬೈಕನ್​ಲ್ಲಿದ್ದವರು ಗಾಂಧಿ ಪ್ರತಿಮೆ ಬಳಿ ಹೋಗಿದ್ದಾರೆ.  ಗಾಂಧಿ ಪ್ರತಿಮೆ ಬಳಿ ಹೋದ ವಿನಯ್ ಗಾಂಧಿ ಪ್ರತಿಮೆ ಕೈಯಲ್ಲಿದ ಪುಸ್ತಕ ಮತ್ತು ಕೋಲು ಕಿತ್ತುಕೊಳ್ಳಲು ಟ್ರೈ ಮಾಡಿದ್ದಾನೆ.  ಜೋರಾಗಿ ಹಿಡಿದು ಎಳೆದಾಡಿದಾಗ ಪ್ರತಿಮೆ ಬಿದ್ದಿದೆ.  ನಂತರ ದಾರಿ ತಪ್ಪಿ ಶಿವಮೊಗ್ಗಕ್ಕೆ ಹೋಗುವವರು ಹೊನ್ನಾಳಿಗೆ ಹೋಗಿದ್ದಾರೆ. ಅಲ್ಲಿಂದ ವಾಪಸ್ ಬಂದು ಶಿವಮೊಗ್ಗಕ್ಕೆ ಹೋಗಿ  ಸ್ನೇಹಿತರ ಮನೆಯಲ್ಲಿ ಮಲಗಿದ್ದ ಆರೋಪಿಗಳು, ಮರುದಿನ  ಹೊಳೆಹೊನ್ನೂರು ಮಾರ್ಗವಾಗಿಯೇ ಚಿತ್ರದುರ್ಗಕ್ಕೆ ತಲುಪಿದ್ದರು. ಈ ವೇಳೆ ಹೊಳೆಹೊನ್ನೂರು ಸರ್ಕಲ್​ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಸಹ ನೋಡಿ ಏನೋ ಆಗಿರಬೇಕು ಅಂತಾ ಮಾತನಾಡಿಕೊಂಡು ಹೋಗಿದ್ಧಾರೆ. 

ಕುಡಿದ ನಶೆಯಲ್ಲಿ ಗಾಂಧೀಜಿಯವರನ್ನ ಮಾತನಾಡಿಸುತ್ತಾ ಅವರ  ಕೋಲು , ಪುಸ್ತಕ  ಕಿತ್ತುಕೊಳ್ಳುವ ಪ್ರಯತ್ನದಲ್ಲಿ ಪ್ರತಿಮೆಯನ್ನು ಬೀಳಿಸಿದ್ದ ಆರೋಪಿಗಳಿಗೆ ನಶೆ ಇಳಿದ ಮೇಲೂ ತಾವು ಮಾಡಿದ್ದೇನು ಎಂಬುದು ಗೊತ್ತಾಗಿರಲಿಲ್ಲ. ಆದರೆ ಊರಿಗೆ ವಾಪಸ್ ಆದ ಮೇಲೆ ಸಿಸಿ ಟಿವಿ ಪೂಟೇಜ್​ನ್ನ ನೋಡಿದ ಮೇಲೆ ಇದು ತಮ್ಮದೇ ಕೃತ್ಯವೆಂಬುದು ಅರಿವಿಗೆ ಬಂದಿದೆ.  ಅಷ್ಟರಲ್ಲಿ ಪೊಲೀಸರು, . ಪಂಡರಹಳ್ಳಿಯಲ್ಲಿ ವಿನಯ್‌ನನ್ನು ವಶಕ್ಕೆ ಪಡೆದಿದ್ದಾರೆ. ಆತನ ಮೂಲಕ ಸೊಂಡೆಕೊಳದಲ್ಲಿ ಗೃಹಪ್ರವೇಶ ಕಾರ್ಯಕ್ರಮದಲ್ಲಿದ್ದ ಗಣೇಶನನ್ನ ವಶಕ್ಕೆ ಪಡೆದಿದ್ಧಾರೆ. 

Malenadu Today

ಮುಂದಿದೆ ಇನ್ನೂ ತನಿಖೆ

ಸದ್ಯ ಪ್ರಾಥಮಿಕ ಹಂತದಲ್ಲಿ ಆರೋಪಿಗಳ ಕಥೆ  ಕೇಳಿ ಪೊಲೀಸರು ಆರೋಪಿಗಳ ಕೃತ್ಯದ ಹಿಂದೆ ದುರುದ್ದೇಶವಿಲ್ಲದೆ ಇರಬಹುದು ಎಂಬುದನ್ನು ಕಂಡುಕೊಂಡಿದ್ಧಾರೆ. ಆದಾಗ್ಯ ಪ್ರಕರಣವನ್ನು ಇನ್ನಷ್ಟು ಆಳವಾಗಿ ತನಿಖೆಗೆ ನಿರ್ಧರಿಸಿರುವ ಪೊಲೀಸರು. ವಿಚಾರದ ಬೆನ್ನು ಬಿದ್ದಿದ್ಧಾರೆ. ಮುಂದಿನ ತನಿಖೆಯಲ್ಲಿ ಇನ್ನಷ್ಟು ಸತ್ಯಗಳು ಹೊರಬಂದರೂ ಬರಬಹುದು

ಇನ್ನಷ್ಟು ಸುದ್ದಿಗಳು

 


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

 

Share This Article