ಪ್ರೀತ್ಸೋದು ತಪ್ಪಾ? ತಾಯಿಗೆ ಹೇಳಿದ್ದ ತಪ್ಪಾಯ್ತಾ? ಮಾರಿಕಾಂಬೆ ದರ್ಶನ ಪಡೆದು ಹೊರಟ ಗಾಡಿಕೊಪ್ಪ ಯುವಕನನ್ನ ಸುಟ್ಟುಹಾಕಿದ್ದೇಕೆ? ನಡೆದಿದ್ದೇನು?

How a resident of Gadikoppa in Shimoga died in Togarsi

ಪ್ರೀತ್ಸೋದು ತಪ್ಪಾ? ತಾಯಿಗೆ ಹೇಳಿದ್ದ ತಪ್ಪಾಯ್ತಾ? ಮಾರಿಕಾಂಬೆ ದರ್ಶನ ಪಡೆದು ಹೊರಟ ಗಾಡಿಕೊಪ್ಪ ಯುವಕನನ್ನ  ಸುಟ್ಟುಹಾಕಿದ್ದೇಕೆ? ನಡೆದಿದ್ದೇನು?
Gadikoppa , Togarsi

Shivamogga Mar 18, 2024  ಶಿವಮೊಗ್ಗ ಜಿಲ್ಲೆ ತೋಗರ್ಸಿಯಲ್ಲಿ ನಡೆದ ಕಾರಿನ ಸಮೇತ ಯುವಕನನ್ನು ಸುಟ್ಟ ಪ್ರಕರಣ ಸಂಬಂಧ ಶಿರಾಳಕೊಪ್ಪ ಪೊಲೀಸ್‌ ಸ್ಟೇಷನ್‌ನಲ್ಲಿ ಎಫ್‌ಐಆರ್‌ ದಾಖಲಾಗಿದೆ. ಒಟ್ಟು 12 ಮಂದಿ ವಿರುದ್ದ ಮೃತ ಯುವಕನ ತಾಯಿ ನೀಡಿದ ದೂರಿನನ್ವಯ: IPC 1860 (U/s-302,201,504,506,427,34) ಅಡಿಯಲ್ಲಿ  ಎಫ್‌ಐಆರ್‌ ದಾಖಲಾಗಿದೆ. 

ನಡೆದ ಘಟನೆ ಸಂಬಂಧ ಮಲೆನಾಡು ಟುಡೆ ಡಿಟಿಟಲ್‌ ನ್ಯೂಸ್‌ ಮೀಡಿಯಾ   ಲವ್ ಮ್ಯಾಟರ್​ಗೆ ಯುವಕನನ್ನ ಕೊಂದು ಕಾರಿನಲ್ಲಿಯೇ ಸುಟ್ಟು ಹಾಕಲಾಯ್ತಾ? ತೋಗರ್ಸಿಯಲ್ಲಿ ನಡೆದಿದ್ದೇನು? ಶೀರ್ಷಿಕೆಯಡಿಯಲ್ಲಿ ಸುದ್ದಿ ಮಾಡಿತ್ತು. ಈ ವರದಿ ಅಂದಿನ ವರದಿಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಗಳನ್ನು ನೀಡುತ್ತಿದೆ. 

ಹಾನಗಲ್‌ ತಾಲ್ಲೂಕು ನಾಗರ ಕ್ರಾಸ್‌

ದಿನಾಂ Mar 15, 2024 ರಂದು ತಡರಾತ್ರಿ 1 ಗಂಟೆಗೆ 10 ನಿಮಿಷ ಬಾಕಿಯಿತ್ತು. ಆ ಸಂದರ್ಭದಲ್ಲಿ ಗಾಡಿಕೊಪ್ಪದಲ್ಲಿರುವ ಮನೆಗೆ ವೀರೇಶ್‌ ಎಂಬಾತ ಕರೆ ಮಾಡಿ ಅಮ್ಮಾ ಹಾನಗಲ್‌ ತಾಲ್ಲೂಕು ನಾಗರ ಕ್ರಾಸ್‌ನಲ್ಲಿ ಬೂತಪ್ಪ ದೇವಸ್ಥಾನದ ಹತ್ತಿರ ನಿಂತಿದ್ದೇನೆ. ಪ್ರವೀಣನಿಗೆ ಕಾಯ್ತಿದ್ದೇನೆ ಎಂದು ಕರೆ ಮಾಡಿದ್ದ. ಆನಂತರ ನಡೆದಿದ್ದು ಮಾತ್ರ ದುರಂತ

ಗಾಡಿಕೊಪ್ಪ ನಿವಾಸಿ 

ಗಾಡಿಕೊಪ್ಪದ ನಿವಾಸಿ ವೀರೇಶ್‌ ತಂದೆ ಸಾವನ್ನಪ್ಪಿ ಬಹಳ ವರ್ಷಗಳೇ ಕಳೆದಿದೆ. ಇದ್ದ ಒಬ್ಬ ಸಹೋದರಿಯು ಸಾವನ್ನಪ್ಪಿದ್ದಾಳೆ.ತಾಯಿಗೆ ಆಧಾರವಾಗಿ ನಿಂತಿದ್ದ ವೀರೇಶ್‌ ಇಬ್ಬರು ಬದುಕಿನ ಸವಾಲುಗಳನ್ನ ಎದುರಿಸುತ್ತಾ ಬದುಕುತ್ತಿದ್ದರು. ತೋಟದಲ್ಲಿ ಕೆಲಸ ಮಾಡಿಕೊಂಡು, ಡ್ರೈವಿಂಗ್‌ ಮಾಡುತ್ತಿದ್ದ ವೀರೇಶ್‌ ತನ್ನದೇ ಸಂಬಂಧಿಕರ ಮಗಳನ್ನ ಪ್ರೀತಿಸ್ತಿದ್ದ. 

ತಾಯಿಗೆ ಹೇಳಿದ್ದೆ ತಪ್ಪಾಯ್ತಾ?

ಈ ವಿಷಯವನ್ನು ಆತ ತನ್ನ ತಾಯಿಗೆ ತಿಳಿಸದೇ ಹೋಗಿದ್ದರೇ ಆತ ಬದುಕಿ ಉಳಿಯುತ್ತಿದ್ದನೋ ಏನೋ? ಆದರೆ ವೀರೇಶ್‌ ತನ್ನ ತಾಯಿಗೆ ಸಂಬಂಧಿಕರ ಮಗಳನ್ನ ಪ್ರೀತಿಸುವ ವಿಚಾರವನ್ನು  ಆತ ಸಾಯುವುದಕ್ಕೂ ಎಂಟು ದಿನಗಳ ಮುಂಚೆ ಹೇಳಿದ್ದ. ಇದಾದ ಬೆನ್ನಲ್ಲೆ ಆತನ ಸಾವು ಆತನನ್ನ ಅರಸಿಕೊಂಡು ಬಂದಿದೆ. 

ಹಾನಗಲ್‌ನ ಆ ಒಂದು ಊರು

ಇಷ್ಟಕ್ಕೂ ನಡೆದಿದ್ದು ಏನು ಎಂಬುದನ್ನ ನೋಡುವುದಾದರೆ, ಹಾನಗಲ್‌ ಒಂದು ಊರು, ಆ ಊರಿನ ನಿವಾಸಿ ಯುವತಿ ಶಿವಮೊಗ್ಗದ ಪಿಜಿಯೊಂದರಲ್ಲಿ ಉಳಿದುಕೊಂಡು ಓದುತ್ತಿದ್ದಾಳೆ. 2 ವರ್ಷದಿಂದ ಈಕೆಯನ್ನ ವೀರೇಶ್‌ ಪ್ರೀತಿಸ್ತಿದ್ದ. ಆದರೆ

ವೀರೇಶ್‌ ತಮ್ಮ ತಾಯಿಯ ಬಳಿ ತನ್ನ ಪ್ರೇಮದ ವಿವರ ನೀಡುತ್ತಲೇ ಆತನ ತಾಯಿ ವಿರೋಧಿಸಿದ್ದಾರೆ. ದೊಡ್ಡವರ ಸಹವಾಸ ಬೇಡ ಎನ್ನುವುದಕ್ಕೋ? ಸಂಬಂಧಿಕರ ನೆಂಟಸ್ತನ ಸರಿಯಲ್ಲ ಎನ್ನುವುದಕ್ಕೋ ಬೇಡ ಮಗನೇ ಇದೆಲ್ಲಾ, ಬೇರೆ ಕಡೆಯಲ್ಲಿ ಹೆಣ್ಣು ನೋಡುತ್ತೇನೆ ಎಂದಿದ್ದಾರೆ. ಅದೇ ರೀತಿಯಲ್ಲಿ ಒಂದೆರಡು ಕಡೆ ಹೆಣ್ಣು ನೋಡಲು ವಿಚಾರಣೆ ಆರಂಭಿಸಿದ್ದಾರೆ. 

ಮಗನ ಇಚ್ಚೆಗೆ ಶರಣಾದ ತಾಯಿ

ಆದರೆ ವೀರೇಶ್‌ ಅಮ್ಮನ ಬಳಿ ತುಸು ಹಠ ಮಾಡಿದ್ದಾನೆ. ಹಾಗಾಗಿ ಮನಸೋತ ತಾಯಿ ಮಗನ ಇಚ್ಚೆಯನ್ನ ತಮ್ಮ ಮೈದುನನ ಬಳಿ ಹೀಗೀಗೆ ಎಂದು ಹಂಚಿಕೊಂಡಿದ್ದಾರೆ. ಅವರು ಸಹ ಇದೇ ವಿಚಾರವಾಗಿ ಕುಟುಂಬಸ್ಥರ ಹಿರಿಯರ ಬಳಿ ಮಾತನಾಡುವ ಸಲುವಾಗಿ ಬಸವಣ್ಣಪ್ಪ ಎಂಬವರಿಗೆ ಕರೆ ಮಾಡಿದ್ದಾರೆ. ಆದರೆ ಅತ್ತ ಕುಟುಂಬದ ಹಿರಿಯ ವಿಚಾರ ಕೇಳುತ್ತಲೇ ಅರುಚಾಡಿ, ಕಿರುಚಾಡಿ ಬೈದಿದ್ದಾರೆ. ಅಲ್ಲದೆ ವೀರೇಶ್‌ಗೂ ಕರೆ ಮಾಡಿ ಅತ್ತ ಕಡೆಯ ಸಂಬಂಧಿಕರು ನಿಂದಿಸಿದ್ದಾರೆ. ಇಷ್ಟೆಲ್ಲಾ ಬೈಸಿಕೊಂಡ ಬಳಿಕ ವೀರೇಶ್‌ ಅಮ್ಮನ ಬಳಿ ವಿಷಯ ಹೇಳಿ ಸುಮ್ಮನಾಗಿದ್ದ. ಆ ತಾಯಿಯು ಸಹ ಇಷ್ಟಕ್ಕೆ ಎಲ್ಲವನ್ನು ಬಿಟ್ಟು ಬಿಡೋಣ ಎಂದು ತಮ್ಮ ಮಗನನ್ನ ಸುಮ್ಮನಾಗಿಸಿದ್ದಾರೆ. 

ಇವರು ಸುಮ್ಮನಿದ್ದರೂ!

ಆದರೆ ಇವರು ಸುಮ್ಮನಾದರೂ ಕೂಡ, ಅತ್ತ ಯುವತಿಯ ಕಡೆಯವರು ಸುಮ್ಮನಾಗಿರಲಿಲ್ಲ. ದಿನಾಂಕ 15 ರಂದು ಯುವತಿಯ ಕಡೆಯವರು ಸೀದಾ ಗಾಡಿಕೊಪ್ಪದಲ್ಲಿರುವ ವೀರೇಶ್‌ನ ಮನೆಗೆ ಬಂದಿದ್ದಾರೆ. ಕಾರಿನಲ್ಲಿ ಬಂದಿದ್ದ ಯುವಕರು ವೀರೇಶ್‌ನಿಗೆ ಇನ್ನಾರು ತಿಂಗಳು ಸುಮ್ಮನಿರು, ಆಕೆಗೆ ಪದೇಪದೇ ಫೋನ್‌ ಮಾಡಬೇಡ ಎಂದಿದ್ದಾರೆ. ಆಕೆಯ ಫೋಟೋಗೀಟೋ ಎಲ್ಲಿಯು ಬಿಡಬೇಡಪ್ಪ, ಸುಮ್ಮನಿರು ಆರು ತಿಂಗಳ ನಂತರ ಮದುವೆ ಮಾತನಾಡೋಣ ಎಂದು ಆತನ ಬಳಿಯಿದ್ದ ಫೋಟೋಗಳನ್ನ ಡಿಲೀಟ್‌ ಮಾಡಿಸಿ ಅಲ್ಲಿಂದ ತೆರಳಿದ್ದರು. 

ಮಾರಿಕಾಂಬೆಯ ಕೊನೆಯ ದರ್ಶನ

ಇಷ್ಟಕ್ಕೆ ಎಲ್ಲವೂ ಮುಗೀತು ಅಂದುಕೊಂಡಿದ್ದೇ ತಪ್ಪಾಗಿದೆ. ಅದೇ ದಿನ ಸಂಜೆ 5.30 ಕ್ಕೆ ಮತ್ತೆ ಕರೆ ಮಾಡಿದ ಯುವತಿ ಕಡೆಯ ಯುವಕನೊಬ್ಬ ರಾತ್ರಿ ಹತ್ತುವರೆ ಹೊತ್ತಿಗೆ ಯುವತಿಯನ್ನ ನಾನು ಕರೆದುಕೊಂಡು ಬರುತ್ತೇನೆ. ಹಾನಗಲ್‌ನ ನಾಗರ ಕ್ರಾಸ್‌ಗೆ ಬಾ ಎಂದಿದ್ದಾರೆ. ಅಷ್ಟೊತ್ತಿಗೆ ಮಾರಿಜಾತ್ರೆಗೆ ಹೋಗಿದ್ದ ವೀರೇಶ್‌ ಮಾರಮ್ಮ ದರ್ಶನ ಪಡೆದು ಬರುತ್ತೇನೆ ಎಂದಿದ್ಧಾನೆ. ಹೇಳಿದ ಹಾಗೆ ಮಾರಮ್ಮನ ದರ್ಶನ ಪಡೆದು ಮನೆಗೆ ಬಂದ ವೀರೇಶ್‌ ಅಮ್ಮನಿಗೆ ವಿಷಯ ತಿಳಿಸಿದ್ದಾನೆ. ಅಮ್ಮ ಬೇಡ ಕಣೋ ರಾತ್ರಿಯಾಗಿದೆ ಎಂದಿದ್ದಾರೆ. ಆತನೂ ತುಸು ಯೋಚಿಸಿದ್ದಾನೆ. ಆದರೆ ಅತ್ತ ಕಡೆಯಿಂದ ಮತ್ತೆ ಮತ್ತೆ ಫೋನ್‌ ಮಾಡಿದ ಯುವಕ ವೀರೇಶ್‌ನ ತಾಯಿಗೂ ಕನ್ವೆನ್ಸ್‌ ಮಾಡಿದ್ದಾನೆ. ತಾಯಿ ತನ್ನ ಮಗನನ್ನ ನಿನ್ನ ಮೇಲೆ ವಿಶ್ವಾಸವಿಟ್ಟು ಕಳುಹಿಸಿಕೊಡುತ್ತಿದ್ದೇನೆ. ಜಾಗ್ರತೆ ಕಣಪ್ಪ ಎಂದಿದ್ದಾರೆ. ಆದರೆ ಹೀಗೆ ಅಮ್ಮನಿಗೆ ಹೇಳಿ ಎರಡು ಲಕ್ಷ ರೂಪಾಯಿ ದುಡ್ಡು ಇಸ್ಕೊಂಡು, ಸ್ನೇಹಿತರೊಬ್ಬರ ಇನ್ನೋವಾ ಕಾರು ತೆಗೆದುಕೊಂಡು ಹೋಗಿದ್ದ ವೀರೇಶ್‌ ತಡರಾತ್ರಿ 12.50 ಕ್ಕೆ ಅಮ್ಮನಿಗೆ ಕರೆ ಮಾಡಿ ಹಾನಗಲ್ನ ನಾಗರ ಕ್ರಾಸ್‌ನಲ್ಲಿದ್ದೇನೆ ಕರೆಮಾಡಿದ ವ್ಯಕ್ತಿಗೆ ಕಾಯುತ್ತಿರುವುದಾಗಿ ಹೇಳಿದ್ದ. ಅಷ್ಟೆ.. 

ಫೋನ್‌ ನಾಟ್‌ ರೀಚಬಲ್‌

ಆನಂತರ ಯುವಕನ ಫೋನ್‌ ನಾಟ್‌ ರೀಚಬಲ್‌ ಆಗಿದೆ. ಗಾಬರಿಯಾದ ತಾಯಿ ಕರೆ ಮಾಡಿದ್ದ ಯುವಕನಿಗೆ ಫೋನ್‌ ಮಾಡಿದ್ದಾರೆ. ಆದರೆ ಆತ ವೀರೇಶ್‌ ಬಂದಿಲ್ಲ. ಯುವತಿಯನ್ನ ವಾಪಸ್‌ ಕರೆದೊಯ್ಯುತ್ತಿದ್ದೇನೆ ಎಂದಿದ್ದಾನೆ. ಗಾಬರಿಗೊಂಡ ತಾಯಿ ಬೆಳಗ್ಗೆ ಎದ್ದವಳೇ ತುಂಗಾನಗರ ಪೊಲೀಸ್‌ ಸ್ಟೇಷನ್‌ಗೆ ಹೋಗಿ ಕಣ್ಣೀರಿಟ್ಟಿದ್ದಾಳೆ. ತಕ್ಷಣ ಆಕ್ಟೀವ್‌ ಆದ ಪೊಲೀಸರು ಶಿರಾಳಕೊಪ್ಪ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ಗೆ ಕರೆ ಮಾಡಿ ನಡೆದಿದ್ದನ್ನ ವಿವರಿಸಿದ್ದಾರೆ. ಅಷ್ಟೊತ್ತಿಗೆ ತೋಗರ್ಸಿ ಬಳಿ ಅನುಮಾನಸ್ಪದ ಶವ ಸಿಕ್ಕಿರುವ ಬಗ್ಗೆ ಸ್ಟೇಷನ್‌ಗೆ ವಿಷಯ ಬಂದಿತ್ತು. ಅದನ್ನ ತುಂಗಾನಗರ ಪೊಲೀಸರಿಗೆ ತಿಳಿಸಿದ್ದಾರೆ. ಇತ್ತ ಎದೆ ಗಟ್ಟಿ ಮಾಡಿಕೊಂಡು ತಾಯಿ ಅಲ್ಲಿಗೆ ತೆರಳಿದ್ದಾರೆ. ಸುಟ್ಟು ಹೋದ ಶವದಲ್ಲಿದ್ದ ಉಂಗುರ ಕಂಡು ಇದು ತನ್ನ ಮಗನದ್ದೆ ಎಂದು ಕಣ್ಣೀರಿಟ್ಟಿದ್ದಾಳೆ. ಕಾರಿನ ಮಾಲೀಕರು ತಮ್ಮದೇ ಕಾರು ಎಂದು ಗುರುತು ಹಿಡಿದಿದ್ದಾರೆ. 

ಶಿರಾಳಕೊಪ್ಪ ಪೊಲೀಸ್‌ ಸ್ಟೇಷನ್‌

ಇಷ್ಟೆಲ್ಲಾ ಡಿಟೇಲ್ಸ್‌ ಸಿಕ್ಕ ಬಳಿಕ ಶಿರಾಳಕೊಪ್ಪ ಪೊಲೀಸರು ವೀರೇಶ್‌ನ ತಾಯಿಯು ನೀಡಿದ ದೂರನ್ನ ಕಾನೂನಿನ ಅಡಿಯಲ್ಲಿ ಯಾವುದೇ ಲೋಪಕ್ಕೂ ಲವಶೇಷ ಅವಕಾಶ ನೀಡದೇ ಡೀಟೇಲ್ಸ್‌ ಆಗಿ ಕಂಪ್ಲೆಂಟ್‌ ತೆಗೆದುಕೊಂಡಿದ್ದಾರೆ. ಅದರಂತೆಯೇ ನಾಲ್ಕು ಪುಟಗಳ ಎಫ್‌ಐಆರ್‌ ಸಹ ದಾಖಲಾಗಿದೆ. 12 ಆರೋಪಿಗಳ ವಿರುದ್ಧ ಕೇಸ್‌ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ.