SHIVAMOGGA| MALENADUTODAY NEWS | ಮಲೆನಾಡು ಟುಡೆ Apr 4, 2025
ನಲವತ್ತಾದರೂ ಮದುವೆಯಾಗಿಲ್ಲ ಎನ್ನುವ ಕಾಲದಲ್ಲಿ ನಮ್ ಜಿಲ್ಲೆಯಲ್ಲೊಂದು 100 ವರ್ಷದ ಅಜ್ಜ ಅಜ್ಜಿಯ ಮದುವೆ ನಡೆದಿದೆ. ಅದು ಸಹ ಎರಡನೇ ಸಲ. ಇಂತಹದ್ದೊಂದು ವಿಶೇಷತೆಯ ವಿವಾಹದ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದ ಬಾಗಿಲು ಪ್ರವೇಶಿಸಿ ಒಳಮನೆಯಲ್ಲಿ ವೈರಲ್ ಆಗುತ್ತಿದೆ.
ಊರು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು, ಕೆಂಚಿಗೊಂಡನಕಪ್ಪ. ಊರಿನ ಹಿರಿಯ ಎನಿಸಿಕೊಂಡವರು 108 ವರ್ಷದ ಪೈಲ್ವಾನ್ ಕರಿಯಪ್ಪ. ತುಂಬು ಬದುಕನ್ನ ಕಂಡ ಕರಿಯಪ್ಪ ಇವತ್ತಿಗೂ ಕಟ್‌ಮಸ್ತಾಗಿದ್ದಾರೆ. ಇವರಿಗೆ ನಿನ್ನೆ ದಿನ 98 ವರ್ಷದ ಪತ್ನಿ ಗೋಪಮ್ಮರನ್ನ ಕೊಟ್ಟು ಎರಡನೇ ಸಲ ಮದುವೆ ಮಾಡಿಸಲಾಯ್ತು. ಇದನ್ನ ನೋಡೋದಕ್ಕೆ ಕಳ್ಳುಬಳ್ಳಿ ಸಂಬಂಧಿಕರಿಂದ ಹಿಡಿದು ಇಡೀ ಊರು ನೆರೆದುಬಂದಿತ್ತು.
ಪೈಲ್ವಾನ್ ಕರಿಯಪ್ಪರ ಮದುವೆಯಲ್ಲಿ ವಿಶೇಷ ಅನ್ನಿಸಿದ್ದು ಇಬ್ಬರ ವಯಸ್ಸು ಹಾಗೂ ನಡೆಸಿದ ಒಲವೇ ಜೀವನ ಸಾಕ್ಷಾತ್ಕಾರದಂತಹ ಸಾಂಸಾರಿಕ ಜೀವನ. ನಿಜ, ಕರಿಯಪ್ಪ ಹಾಗೂ ಗೋಪಮ್ಮ ಮದುವೆಯಾಗಿ 60 ವರ್ಷ ಜೀವನ ನಡೆಸಿದ್ದಾರೆ. ಮದುವೆಯಾಗಿ ತಿಂಗಳಿಲ್ಲ, ಫ್ಯಾಮಿಲಿ ಕೋರ್ಟ್‌ಲ್ಲಿ ಡಿವೋರ್ಸ್‌ಗೆ ಅರ್ಜಿ ಹಾಕಿದರಲ್ಲ ಎನ್ನುವಂತವರು ಕರಿಯಪ್ಪ ಗೋಪಮ್ಮನ ಕೆಮೆಸ್ಟ್ರಿ ಕಲಿವ ಅಗತ್ಯವಿದೆ.
ಮನೆ ಮಡದಿಯ ಜೊತೆ 60 ವರ್ಷ ಗಟ್ಟಿ ಜೀವನ ನಡೆಸಿದ ಕರಿಯಪ್ಪರ ಬದುಕಿನಲ್ಲಿ ಸಂಕಟ ಸಾಕಷ್ಟು ಸಲ ಬಂದು ಹೋಗಿದೆ. ಆದರೆ ನಗುವಿನ ಕೊರತೆ ಉಂಟಾಗಿಲ್ಲ. ಅದೇ ರೀತಿ ಗೋಪಮ್ಮ, ಕರಿಯಪ್ಪನ ವಂಶವೃಕ್ಷ ಬೆಳಸುವುದರಲ್ಲಿ ದಣಿವಾಗಿದ್ದಾಳೆ, ಆದರೆ ಸೋಲು ಎಂದಿಗೂ ಕಂಡಿಲ್ಲ. ಇಬ್ಬರ ಸುದೀರ್ಘ ವೈವಾಹಿಕ ಬದುಕಿಗೆ ಆರವತ್ತು ತುಂಬಿದ ಹಿನ್ನೆಲೆಯಲ್ಲಿ ಮನೆಯವರೆಲ್ಲಾ ಸೇರಿಕೊಂಡು ಸೃಷ್ಟಿ ಪೂರ್ತಿ ನಡೆಸಲು ತೀರ್ಮಾನಿಸಿದ್ದರು.
ಅಜ್ಜ ಆಲದ ಮರ, ಅಜ್ಜಿ ಮಾವಿನ ಮರ ಹಕ್ಕಿಪಿಕ್ಕಿಗಳು ನಾವೆಲ್ಲಾ ಎನ್ನುತ್ತಾ ಗಿರಿಮೊಮ್ಮಕಳಾದಿಯಾಗಿ ಬಂದುಗಳೆಲ್ಲಾ ಬಂದು ಕರಿಯಪ್ಪರ ಎರಡನೇ ಸಲದ ಮದುವೆಗೆ ಮುಯ್ಯಿಟ್ಟು ಆಶೀರ್ವಾದವನ್ನು ಪಡೆದಿದ್ದಾರೆ. ದೊಡ್ಡ ಕುಟುಂಬದ ಈ ಸಂತಸವನ್ನು ನೋಡೋಕೆ ಊರು ಕೇರಿ ಸಹ ಅಲ್ಲಿ ನೆರೆದು ಖುಷಿಪಟ್ಟಿದೆ.