SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 29, 2024 | ಶಿವಮೊಗ್ಗದಲ್ಲಿ ಕಳೆದೊಂದು ವಾರದಿಂದ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ಶಿವಮೊಗ್ಗ ಸಿಟಿಗೆ ಹತ್ತಿರ ಇರುವ ಪುರದಾಳು ಗ್ರಾಮದ ಸುತ್ತಮುತ್ತ ಕಾಡಾನೆಗಳು ಪ್ರತಿದಿನ ತೋಟಗಳಿಗೆ ಲಗ್ಗೆ ಇಡುತ್ತಿದ್ದು ಅಡಿಕೆ, ಬಾಳೆ, ಜೋಳ, ಕಬ್ಬನ್ನ ಹಾಳು ಮಾಡುತ್ತಿದೆ. ನಿನ್ನೆಯು ಸಹ ಇಲ್ಲಿನ ಶಿವಮೊಗ್ಗ-ಶೆಟ್ಟಿಹಳ್ಳಿಗೆ ಹೋಗುವ ರಸ್ತೆಯಲ್ಲಿ ಸಿಗುವ ಬೇಳೂರು ಗ್ರಾಮದ ರಸ್ತೆ ಪಕ್ಕದಲ್ಲಿರುವ ತೋಟಗಳಿಗೆ ನುಗ್ಗಿರುವ ಕಾಡಾನೆಗಳ ಹಿಂಡು, ಗ್ರಾಮದ ನಾಗರಾಜ್ ಹಾಗೂ ಕನ್ನಪ್ಪ ಎಂಬವರಿಗೆ ಸೇರಿದ ಫಸಲು ನಾಶ ಮಾಡಿವೆ.
ಮೂರು ಕಾಡಾನೆಗಳಿದ್ದು ಅವುಗಳು ರಾತ್ರಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಕಾಡಾನೆಗಳು ಬೆಳೆಗಳನ್ನ ಅರ್ಧ ತುಳಿದು ಬೀಳಿಸಿ ಹಾಳು ಮಾಡಿದರೆ, ಇನ್ನರ್ಧ ತಿಂದು ಹಾಳು ಮಾಡುತ್ತವೆ. ಇದರಿಂದಾಗಿ ಈ ಭಾಗದ ಬೆಳೆಗಾರರಿಗೆ ಬಹಳ ನುಕ್ಸಾನ್ ಆಗಿದ್ದು, ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಕಾಡಾನೆ ಹಾವಳಿಯಿಂದ ರಕ್ಷಣೆ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.
ನಾಲ್ಕು ದಿನಗಳ ಹಿಂದು ಪುರದಾಳ್ನಲ್ಲಿಯೇ ಕಾಡಾನೆಗಳ ಹಾವಳಿಯಿಂದ ಬೆಳೆ ಹಾನಿ ಸಂಭವಿಸಿತ್ತು. ಇದೀಗ ಬೇಳೂರುನಲ್ಲಿ ಅದೇ ಘಟನೆ ಮರುಕಳಿಸಿದೆ. ಈ ಭಾಗದಲ್ಲಿನ ರೈತರೊಬ್ಬರು ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಕಾಡಾನೆಗಳ ಹಾವಳಿ ಕಂಡಪಟ್ಟೆ ಹೆಚ್ಚಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಇದೇ ರೀತಿಯ ಹಾನಿಯಾತ್ತಿದೆ ಎಂದಿದ್ದಾರೆ.
20 ಕ್ಕೂ ಹೆಚ್ಚು ಆನೆಗಳ ಹಾವಳಿ
ಈ ಭಾಗದಲ್ಲಿ ಸುಮಾರು 20 ಕ್ಕೂ ಹೆಚ್ಚು ಆನೆಗಳಿದ್ದು, ಕಳೆದ ಎಂಟು ಹತ್ತು ದಿವಸಗಳಿಂದ ಕಾಡಾನೆ ಹಾವಳಿ ವಿಪರೀತವಾಗಿದೆ. ಮಲೆಶಂಕರ, ಪುರದಾಳು, ಮಂಜರಿಕೊಪ್ಪ, ಸಿರಿಗೆರೆ ಭಾಗದಲ್ಲಿ ಕಾಡಾನೆಗಳು ದಾಳಿ ನಡೆಸ್ತಿವೆ. ಈ ಹಿಂದೆ ಹನುಮಂತಪ್ಪ ಎಂಬವರನ್ನ ಕಾಡಾನೆ ಹೊಡೆದು ಸಾಯಿಸಿದೆ. ಬಸವಾಪುರದಲ್ಲಿ ರೈತರೊಬ್ಬರ ಸಾವಾಗಿದೆ. ಅಡಿಕೆ ಬಾಳೆ ತೆಂಗು, ಕಬ್ಬು, ಜೊಳದ ಫಸಲನ್ನ ಕಾಡಾನೆಗಳು ನಾಶ ಮಾಡುತ್ತಿವೆ. ಸಂಜೆ ಆರುಗಂಟೆಯಾಗುವಷ್ಟರಲ್ಲಿ ಮನೆ ಸೇರಿಕೊಳ್ಳಬೇಕು, ಆನಂತರ ಕಾಡಾನೆಗಳ ದಾಳಿಗೆ ತುತ್ತಾಗುವ ಅಪಾಯ ಇದೆ ಎಂದು ಸದ್ಯ ಈ ಭಾಗದ ಜನರು ಎದುರಿಸುತ್ತಿರುವ ಸನ್ನಿವೇಶವನ್ನ ವಿವರಿಸಿದ್ದಾರೆ.