ಭದ್ರಾವತಿಯ ಬೈಪಾಸ್ ರಸ್ತೆ ಪಕ್ಕದಲ್ಲಿ ನಡೆದಿತ್ತು ಒಂದು ಅಫಘಾತ.ಅಪಘಾತದಲ್ಲಿ ಪೊಲೀಸರಿಗೆ ಸಿಕ್ತು ಅನಾಥವಾಗಿ ಬಿದ್ದಿದ್ದ ಹೆಣ.ಅದು ಆಕ್ಸಿಡೆಂಟ್ ಎಂದು ಷರಾ ಬರೆಯಲು ಮುಂದಾಗಿದ್ರು,ಪೊಲೀಸ್ರು.ಇದು ಆಕ್ಸಿಡೆಂಟ್ ಅಲ್ಲ..,ಕೊಲೆ ಎಂದು ಆ ಕ್ಷಣದಲ್ಲಿ ಪೊಲೀಸರಿಗೆ ಬಂತೊಂದು ಕರೆ,ಇದು ಕೊಲೆನಾ ಎಂದು ಅನುಮಾನಿಸಿದ ಪೊಲೀಸರಿಗೆ ತನಿಖೆಗೆ ಪೂರಕವಾದ ಯಾವ ಎವಿಡೆನ್ಸುಗಳಾಗ್ಲಿ ಕ್ಲೂಗಳಾಗಲಿ ಸಿಗಲಿಲ್ಲ.ಆದ್ರೇ ಕೊಲೆಯಾದ ವ್ಯಕ್ತಿಯ ಮಹಜರ್ ನಡೆಸುತ್ತಿದ್ದ ಸ್ಥಳದಲ್ಲಿ ಪೊಲೀಸರಿಗೆ ಮರಿಚಿಕೆಯಾಗಿ ಕಂಡಿತ್ತು ಒಂದು ಕ್ಲೂ,ಆ ಸುಳಿವಿನ ಮಬ್ಬುಗತ್ತಲಲ್ಲಿ ಹೊರಟ ಪೊಲೀಸರಿಗೆ ಕೊನೆಗೆ ಕೊಲೆಗಾರ ಸಿಕ್ಕಿಬಿಟ್ಟ.,ಹಾಗಾದ್ರೆ ಪೊಲೀಸರಿಗೆ ಸಿಕ್ಕ ಆ ಸಣ್ಣ ಕ್ಲೂ ಯಾವುದು,ಆ ನಿಜವಾದ ಕೊಲೆಗಾರ ಯಾರು. ಅವನಿಗೂ ಕೊಲೆಯಾದವನಿಗೂ ಏನು ಸಂಬಂಧ .ಕೊಲೆ ನಡೆದು ಕೇವಲ 10 ಗಂಟೆಯಲ್ಲಿ ಭೇದಿಸಿದ ಆ ಪ್ರಕರಣ ನಿಜಕ್ಕೂ ವೆರಿ ಇಂಟರಿಸ್ಟಿಂಗ್ .
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿ ಭೀಕರ ಅಪಘಾತ! ಭದ್ರಾವತಿಯ ಯುವತಿ ಸಾವು
ಬೊಕ್ಕತಲೆ ಹೇಳಿದ ಸತ್ಯ.
ವೀಕ್ಷಕರೆ ಪ್ರತಿಯೊಂದು ಕೊಲೆಗೂ ಒಂದು ಕಾರಣ ಇದ್ದೇ ಇರುತ್ತೆ.ಹೇಗೆ ಕೊಲೆಗಾರನಿಗೆ ಸೇಡಿನ ಪ್ರತಿಕಾರ ತೀರಿಸಿಕೊಳ್ಳೋ ಉದ್ದೇಶ ಇರುತ್ತೋ..,ಅದೇ ರೀತಿ ಪ್ರಕರಣದಿಂದ ಹೇಗೆ ತಪ್ಪಿಸಿಕೊಳ್ಳಬೇಕೆನ್ನೋ ಜಾಣ್ಮೆ ಕೂಡ ಆತನಲ್ಲಿರುತ್ತೆ.ಹೀಗಾಗಿಯೇ ಅಪರಾಧ ಕೃತ್ಯ ಎಸಗಿರೋ ಸ್ಥಳದಲ್ಲಿ ಯಾವ ಸಾಕ್ಷ್ಯಗಳನ್ನು ಬಿಟ್ಟಿಲ್ಲ ಅನ್ನೋ ನಂಬಿಕೆ ಕ್ರಿಮಿನಲ್ ಗಳಿಗಿರುತ್ತೆ.ಆದರೆ ಕ್ರಿಮಿನಲ್ ಗಳು ಆತುರದ ಬುದ್ದಿಯಲ್ಲಿ ಎನನ್ನಾದ್ರೂ ಸಾಕ್ಷಿ ಬಿಟ್ಟಿರ್ತಾರೆ, ಅನ್ನೋ ಆತ್ಮವಿಶ್ವಾಸ ಪೊಲೀಸ್ರಿಗಿರುತ್ತೆ.
ಕಳ್ಳನಾಗ್ಲಿ ಕೊಲೆಗಾರನಾಗ್ಲಿ ಎಂತಹ ಅಪರಾಧ ಎಸಗಿದ್ರೂ,ಆತ ಆ ಸ್ಥಳದಲ್ಲಿ ಸಣ್ಣ ಕ್ಲೂ ಅನ್ನಾದ್ರೂ ಬಿಟ್ಟಿರ್ತಾನೆ ಅನ್ನೋದು ವಾಸ್ತವದ ಕಟುಸತ್ಯ..,ಇಂತಹ ಸಣ್ಣ ಎಳೆಗಳ ಮೂಲಕ ಪೊಲೀಸ್ರು ಅನೇಕ ಪ್ರಕರಣವನ್ನು ಭೇದಿಸಿದ್ದಾರೆ. ಆದ್ರೆ ಇನ್ನು ಕೆಲವು ಪ್ರಕರಣಗಳಲ್ಲಿ ಕೊಲೆಗೆ ಸಾಕ್ಷ್ಯ ಆಗಬಲ್ಲ ಕ್ಲೂಗಳು ಸಿಕ್ಕರೂ ಆರೋಪಿಗಳನ್ನ ಪತ್ತೆ ಮಾಡೋಕೆ ಸಾಧ್ಯನೇ ಆಗೋದಿಲ್ಲ. ಅಂತಹ ಕ್ಲಿಷ್ಟಕರ ಪ್ರಕರಣಗಳಲ್ಲಿ ವಿಮರ್ಷಕನಾಗಿ,ಸಂಶೋಧಕನಾಗಿ ,ಥೀಸಿಸ್ ಬರೆವ ರೀತಿಯಲ್ಲಿ ತನಿಖೆ ಮಾಡೋ ಪೊಲೀಸ್ರಿಗೆ ಕ್ರೈಂ ಸೀನ್ನ ಕ್ಲೈಮ್ಯಾಕ್ಸ್ ಸಿಕ್ಕಿಬಿಟ್ಟಿರುತ್ತದೆ. ಇಂತಹ ಸವಾಲಿನ ಅಪರೂಪದ ಪ್ರಕರಣವನ್ನು ನಮ್ಮ ಭದ್ರಾವತಿಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದ ತಿರುಮಲೇಶ್ ಭೇದಿಸಿದ್ರು. 2013 ರಲ್ಲಿಅವರಿಗೆ ಸಾವಾಲಾಗಿದ್ದ ಪ್ರಕರಣದಲ್ಲಿ ಆ ಸಣ್ಣ ಸುಳಿವು ಸಿಗದೆ ಹೋಗಿದ್ರೆ, ಪೊಲೀಸ್ರಿಗೆ ಆರೋಪಿ ಜೀವಮಾನಕ್ಕೂ ಸಿಕ್ತಿರಲಿಲ್ಲ. ಅದೊಂದು ಅಪಘಾತ ಎಂದು ಫೈಲ್ ಕ್ಲೋಸ್ ಆಗಿ ಹೋಗ್ತಿತ್ತು ಅಷ್ಟೆ. ಆದರೆ ಅಂದು ಹಾಗಾಗಲಿಲ್ಲ, ಬದಲಾಗಿ ಘಟನೆ ನಡೆದು ಕೇವಲ 10 ಗಂಟೆಯಲ್ಲಿ ಆರೋಪಿ ಅರೆಸ್ಟ್ ಆಗಿದ್ದ
ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಅನಾಥವಾಗಿ ಬಿದ್ದಿತ್ತು ಶವ
ಜನವರಿ 1 ರ ತಡರಾತ್ರಿ 3.30 2014 ನೇ ಇಸವಿ. ಭದ್ರಾವತಿ ನಗರದಲ್ಲಿ ಇನ್ನು ಹೊಸವರ್ಷದ ಸಂಭ್ರಮ ಮುಗಿದಿರಲಿಲ್ಲ. ಭದ್ರಾವತಿ ಬೈಪಾಸ್ ರಸ್ತೆಯ ಭದ್ರಾ ಸೇತುವೆಯ ಸನಿಹದಲ್ಲಿ 50 ವರ್ಷ ವಯೋಮಾನದ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗುತ್ತದೆ. ರಸ್ತೆ ಪಕ್ಕದಲ್ಲಿ ಹೀರೋಹೊಂಡಾ ಬೈಕ್ ಕೂಡ ಬಿದ್ದಿರುತ್ತೆ. ಮೇಲ್ನೋಟಕ್ಕೆ ಆಕ್ಸಿಡೆಂಟ್ ಅನ್ನೋದು ಸ್ಪಷ್ಟವಾಗಿತ್ತು. ದಾರಿಹೋಕರು ನೋಡಿ ಭದ್ರಾವತಿ ನಗರದ ಪೇಪರ್ ಟೌನ್ ಇನ್ಸ್ ಪೆಕ್ಟರ್ ತಿರುಮಲೇಶ್ ಗೆ ಮಾಹಿತಿ ಮುಟ್ಟಿಸ್ತಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಅಪಘಾತದಲ್ಲಿ ಸತ್ತ ವ್ಯಕ್ತಿಯನ್ನು ಐಡೆಂಟಿಫೈ ಮಾಡ್ತಾರೆ. ಆತ ಭದ್ರಾವತಿ ಎಂಪಿಎಂ ಫ್ಯಾಕ್ಟಿರಿ ಉದ್ಯೋಗಿ ಅನ್ನೋದು ಗೊತ್ತಾಗುತ್ತದೆ. ವಿಷಯ ಅವರ ಕುಟುಂಬಕ್ಕೆ ಮುಟ್ಟುತ್ತದೆ. ಸ್ಥಳಕ್ಕೆ ಎಲ್ಲರೂ ಬಂದು ಮಹಜರ್ ಕೂಡ ನಡೆಯುತ್ತೆ. ಕುಟುಂಬಸ್ಥರಿಗೂ ಘಟನೆ ಬಗ್ಗೆ ಅನುಮಾನ ಇರೋದಿಲ್ಲ, ಪೊಲೀಸರಿಗೂ ಅದು ಆಕ್ಸಿಡೆಂಟ್ ಅನಿಸಿರುತ್ತದೆ. ಅಲ್ಲಿಗೆ ಕೇಸ್ ಒಂದು ಹಂತದ ಕ್ಲೈ ಮ್ಯಾಕ್ಸ್ ಮುಟ್ಟಿರುತ್ತದೆ.
ಮನೆಯಲ್ಲಿ ಬದಲಾಯ್ತು ಸೀನ್.
ಈ ನಡುವೆ ಮೃತನ ಮನೆಯವರು, ಆತನ ಮನೆಗೆ ಬಂದಾಗ ಅಲ್ಲಿ ಬೇರೆಯದ್ದೆ ಸೀನ್ ಕಾಣುತ್ತೆ. ಭೀಗ ಹಾಕಿದ್ದ ಮನೆಯ ಬಾಗಿಲು ಮುರಿದು ಒಳಕ್ಕೆ ಹೋದ ಕುಟುಂಬಸ್ಥರಿಗೆ ಆಗಷ್ಟೆ ಯಾರೋ ಮನೆಯನ್ನ ಕ್ಲೀನ್ ಮಾಡಿದ ಗುರುತುಗಳು ಕಾಣಿಸುತ್ತವೆ. ಪೊರಕೆಯ ಕಡ್ಡಿಗಳು, ಅಲ್ಲಲ್ಲಿ ಇನ್ನೂ ಹಸಿಯಾಗಿ ಚೆಲ್ಲಿದ್ದ ನೀರು, ಒಂದು ರೀತಿಯ ಗೌಜು ವಾಸನೆ! ಇದೆಲ್ಲೆ ಕಂಡ ಕುಟುಂಬಸ್ಥರು ಪೊಲೀಸರಿಗೆ ಫೋನ್ ಮಾಡಿ ಮನೆಯ ಬಳಿ ಬರುವಂತೆ ಹೇಳುತ್ತಾರೆ. ಪೊಲೀಸರು ಸಹ ತಕ್ಷಣಕ್ಕೆ ಬರುತ್ತಾರೆ. ಅವರಿಗೆ ಅಲ್ಲಿ ರಕ್ತದ ಕಲೆಗಳು ಕಾಣುತ್ತವೆ. ಅಂತಿಮವಾಗಿ ತನಿಖಾಧಿಕಾರಿ ತಿರುಮಲೇಶ್ಗೆ ನಡೆದಿದ್ದು ಆಕ್ಸಿಡೆಂಟ್ ಅಲ್ಲಾ ಕೊಲೆ ಎಂಬುದು ಪಕ್ಕಾ ಆಗುತ್ತೆ. ಆದರೆ ಅದನ್ನ ತೋರಿಸಿಕೊಳ್ಳದ ಅವರು, ಪ್ರತಿಯೊಬ್ಬರನ್ನು ವಿಚಾರಣೆಯ ಆ್ಯಂಗಲ್ನಲ್ಲಿ ಪ್ರಶ್ನಿಸುತ್ತಾರೆ.
ಈ ಮಧ್ಯೆ ಮೃತನ ಮೊದಲ ಮಗ ಅನುಮಾನ ಪಟ್ಟ ಹಾಗೆ, ಮೃತನ ಮನೆಯನ್ನು ಲೀಸ್ಗೆ ಪಡೆದವರನ್ನ ಕರೆಸಿ ವಿಚಾರಿಸ್ತಾರೆ. ಆದರೆ, ಆತನಿಂದ ಕೃತ್ಯವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹೀಗೆ ವಿಚಾರಣೆ ಸಾಗುತ್ತಿರುವಾಗ, ತಿರುಮಲೇಶ್ಗೆ ಕಾಣಿಸಿದ್ದು ಒಂದು ಕ್ಲೀನ್ ಶೇವ್ ಆಗಿದ್ದ ತಲೆ. ವಿಚಾರಣೆ ವೇಳೆ ಕಾಣ ಸಿಕ್ಕ ತಲೆ ಬೋಳಿಸಿಕೊಂಡಿದ್ದ ವ್ಯಕ್ತಿಯನ್ನ ಕುತೂಹಲದಿಂದ ನೋಡುವ ತಿರುಮಲೇಶ್, ಯಾರು ನೀನು ಎನ್ನುತ್ತಾರೆ. ಆತ ನಾನು ಮೃತರ ಎರಡನೇ ಮಗ ಎನ್ನುತ್ತಾರೆ. ಇಷ್ಟೊತ್ತಿನ ತನಕ ವಿಚಾರಣೆ ನಡೆಸುವಾಗ ಕಾಣಿಸಿದವನು ಈಗೆಲ್ಲಿಂದ ಬಂದೆ ಎನ್ನುತ್ತಾರೆ ತನಿಖಾಧಿಕಾರಿ.
ಆಗ ಮೃತನ ಎರಡನೇ ಮಗ ಆಡಿದ ಮಾತು ಪೊಲೀಸರಿಗೆ ಅನುಮಾನ ಮೂಡಿಸುತ್ತೆ.ಏಕೆಂದರೆ ಪೊಲೀಸರ ಎದುರು ಆತ ಧರ್ಮಸ್ಥಳಕ್ಕೆ ಹೋಗಿ ವಾಪಸ್ಸು ಬೆಂಗಳೂರಿಗೆ ಹೋಗ್ತಾ ಇದ್ದೆ, ಇಲ್ಲಾ ಸಾರ್ ಅಪ್ಪ ಕೊಲೆಯಾದ ವಿಚಾರ ಗೊತ್ತಾಯ್ತು , ವಾಪಸ್ ಬಂದೆ ಎನ್ನುತ್ತಾನೆ. ಕುತೂಹಲದಲ್ಲಿ ತಿರುಮಲೇಶ್ ಯಾವಾಗ ಬೆಂಗಳೂರಿನಿಂದ ಹೊರಟೆ, ಧರ್ಮಸ್ಥಳಕ್ಕೆ ಎಷ್ಟೊತ್ತಿಗೆ ಹೋದೆ, ಎಷ್ಟೊತ್ತು ಇದ್ದೆ, ಅಲ್ಲಿಂದ ಎಷ್ಟೊತ್ತಿಗೆ ಹೊರಟೆ, ಎಷ್ಟೊತ್ತಿಗೆ ವಿಷಯ ಗೊತ್ತಾಯ್ತು! ಎಷ್ಟೊತ್ತಿಗೆ ಇಲ್ಲಿಗೆ ಬಂದೆ ಎಂದೆಲ್ಲಾ ಟೈಮಿಂಗ್ಸ್ ವೈಸ್ ಕೇಳುತ್ತಾ ಹೋಗುತ್ತಾರೆ. ಇದಕ್ಕೆ ಮೃತನ ಎರಡನೇ ಮಗ ನೀಡಿದ ಉತ್ತರ ತಾಳೆಯೇ ಆಗುತ್ತಿರಲಿಲ್ಲ.
ಏಕೆಂದರೆ ಆತ ಹೇಳಿದ್ದ ಹಾಗೆ, ಹಾಸನ ತಲುಪಿದ್ದಾಗ ಆತನಿಗೆ ವಿಷಯ ಗೊತ್ತಾಗಿ, ಭದ್ರಾವತಿ ಬಂದಿದ್ದನಂತೆ. ಆದರೆ ಅರ್ಧಗಂಟೆಯ ಅಂತರದಲ್ಲಿ 130 ಕಿಲೋಮೀಟರ್ ದೂರದ ಪ್ರಯಾಣ ಕಷ್ಟಸಾಧ್ಯ. ಇನ್ನೂ ಒಂದು ದಿನ ಹಿಂದೆಯೇ ಧರ್ಮಸ್ಥಳದಲ್ಲಿ ತಲೆಬೋಳಿಸಿಕೊಂಡಿದ್ದರು, ಭದ್ರಾವತಿಗೆ ವಾಪಸ್ ಬರುವಷ್ಟರಲ್ಲಿ ಚೂರಾದರು ಕೂದಲು ಬಂದಿರುತ್ತೆ. ಆದರೆ ಆತನ ತಲೆ ಕ್ಲೀನ್ ಶೇವ್ ಆಗಿತ್ತು! ಈ ಡೌಟ್ ಮೇಲೆ ತಿರುಮಲೇಶ್ ಆತನನ್ನು ಸ್ಟೇಷನ್ಗೆ ಕರೆದುಕೊಂಡು ಹೋಗುತ್ತಾರೆ. ಅಷ್ಟರಲ್ಲಿ ಆತನ ಕಾಲ್ಲಿಸ್ಟ್ ತೆಗೆಸ್ತಾರೆ. ಕಥೆ ಕ್ಲೈಮ್ಯಾಕ್ಸ್ಗೆ ಬಂದಿರುತ್ತೆ.
ನಡೆದಿದ್ದು ಏನು?
ಎಂಪಿಎಂ ಉದ್ಯೋಗಿ ಆಗಿದ್ದ ಮೃತನು, ನಿತ್ಯ ಕುಡುಕನಾಗಿದ್ದ, ಅಲ್ಲದೆ ಕುಡಿದ ನಶೆಯಲ್ಲಿ ಮಡದಿ ಮಕ್ಕಳಿಗೆ ಹಿಂಸೆ ಕೊಡುತ್ತಿದ್ದನಂತೆ. ಮೊದಲನೇ ಮಗ ಬೆಂಗಳೂರಿನಲ್ಲಿ ನೌಕರಿ ಹಿಡಿದು ಅಲ್ಲಿಯೇ ಇರುತ್ತಾನೆ. ಎರಡನೇ ಮಗನು ಹಾಗೆ ಮಾಡಿದ್ದ, ತಾಯಿಯನ್ನು ಸಹ ಬೆಂಗಳೂರಿಗೆ ಕರೆಸಿಕೊಂಡಿದ್ದರು ಮಕ್ಕಳು, ಈ ಮಧ್ಯೆ ಮೃತನು ಇನ್ನೊಬ್ಬಳ ಸಹವಾಸ ಮಾಡಿಕೊಂಡು ಭದ್ರಾವತಿಯಲ್ಲಿಯೇ ಇದ್ದ, ಆಗಾಗ ಪತ್ನಿ ಮಕ್ಕಳು ಬಂದರು ಅವರನ್ನ ಮತ್ತು ನೋಯಿಸುತ್ತಿದ್ದನಂತೆ. ಈ ಕಾರಣಕ್ಕೆ ಎರಡನೇ ಮಗ ಅಪ್ಪನ ಬದುಕಿಗೆ ಕೊನೆ ಮುಹೂರ್ತ ಫಿಕ್ಸ್ ಮಾಡಿದ್ದ,
ಯಾವಾಗ ಪೊಲೀಸರು ಧರ್ಮಸ್ಥಳದ ಲೊಕೆಶನ್ ಆಗಲಿ, ಹಾಸನ ಲೊಕೆಶನ್ ಆಗಲಿ, ಎರಡನೇ ಮಗನ ಕಾಲ್ಲಿಸ್ಟ್ನಲ್ಲಿ ತೋರಿಸುವುದಿಲ್ಲವೋ ಆಗಲೇ ಆತನನ್ನ ಪೊಲೀಸ್ ಭಾಷೆಯಲ್ಲಿ ವಿಚಾರಿಸ್ತಾರೆ. ಆಗ ಅಸಲಿ ಸತ್ಯ ಬಿಚ್ಚಿಟ್ಟ ಎರಡನೇ ಸುಪುತ್ರ, ಡಿಸೆಂಬರ್ 31 ರಂದು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗೋದಾಗಿ ಮನೆಯಲ್ಲಿ ಸುಳ್ಳುಹೇಳಿ ಹೊರಟಿದ್ದೆ. ಆದರೆ ಅಲ್ಲಿಗೆ ಹೋಗಲಿಲ್ಲ. ಭದ್ರಾವತಿಯ ಹಳೆ ಸ್ನೇಹಿತರೊಂದಿಗೆ ನ್ಯೂ ಇಯರ್ ಪಾರ್ಟಿ ಮಾಡಿದೆ. ಪಾರ್ಟಿ ಮುಗಿಸಿ ಅಪ್ಪನ ಮನೆಗೆ ಹೋದೆ. ಆದರೆ ಅಲ್ಲಿ ಅಪ್ಪ ಬೇರೆಯಾರೋ ಹೆಂಗಸಿನೊಂದಿಗೆ ಮಲಗಿದ್ದ, ಇದನ್ನ ನೋಡಲಾಗದೇ ಜಗಳ ಮಾಡಿದೆ, ಅಪ್ಪನೂ ಕುಡಿದಿದ್ದ, ಆತನು ಕಿರಿಕ್ ಮಾಡಿದ. ಈ ವೇಳೆ ಮಾತು ಬೆಳೆದು ಅಪ್ಪ ಕುಡುಗೋಲು ಎತ್ತಿ ಹೊಡೆಯಲು ಬಂದ, ಆಗ ಹಾರೆಗೋಲಿನಿಂದ ಆತನಿಗೆ ಹೊಡೆದೆ, ಆತ ಅಲ್ಲಿಯೇ ಸತ್ತ ಎಂದು ನಡೆದಿದ್ದನ್ನ ಪೊಲೀಸರ ಮುಂದೆ ವಿವರಿಸಿದ್ದ.
ಈ ಮಧ್ಯೆ ಮೃತನ ಎರಡನೇ ಪುತ್ರ ಇನ್ನೊಂದು ಕೆಲಸ ಮಾಡಿದ್ದ, ಮನೆಯಲ್ಲಿ ಚೆಲ್ಲಿದ್ದ ಕಲೆಯನ್ನ ನೀರಿನಿಂದ ತೊಳೆದು, ಬಟ್ಟೆಯಿಂದ ಒರೆಸಿ ನೆಲವನ್ನ ಕ್ಲೀನ್ ಮಾಡಿದ್ದ ಆತ ಕೊಲೆಗೆ ಬಳಸಿದ ಹಾರೆಕೋಲನ್ನು ಸಹ ನೀರಿನಲ್ಲಿ ತೊಳೆದಿಟ್ಟಿದ್ದ. ಘಟನೆಗೂ ಮೊದಲು ನ್ಯೂ ಇಯರ್ ಪಾರ್ಟಿ ಮಾಡಿದ್ದ ತನ್ನ ಇಬ್ಬರು ಗೆಳೆಯರನ್ನ ಬಸ್ಸ್ಟ್ಯಾಂಡಿಗೆ ಡ್ರಾಪ್ ಮಾಡಿ ಎಂದು ಕರೆಸಿಕೊಂಡ, ನಂತರ ಅವರಿಗೆ ನಡೆದ ಘಟನೆಯನ್ನ ವಿವರಿಸಿ, ಬಾಡಿ ಸಾಗಿಸಲು ಸಹಾಯ ಕೇಳಿದ್ದಾನೆ. ಅದಕ್ಕೆ ಸ್ನೇಹಿತರು ಒಪ್ಪದಿದ್ದಾಗ, ನೋಡ್ರೋ..,ನೀವು ಹಾಗೆ ವಾಪಸ್ಸು ಹೋದ್ರೆ.., ನೀವು ಕೂಡ ಕೊಲೆಯಲ್ಲಿ ಭಾಗಿಯಾಗಿದ್ರಿ ಅಂತಾ ಪೊಲೀಸರಿಗೆ ಹೇಳ್ತಿನಿ ಎಂದು ಹೆದರಿಸಿದ್ದ. ಆಗ ವಿಧಿಯಿಲ್ಲದೇ ಸ್ನೇಹಿತರು, ಆತನಿಗೆ ಸಹಾಯ ಮಾಡಿದ್ದರು. ನಂತರ ಮೂವರು ಬೆಡ್ ಶೀಟ್ ನಲ್ಲಿ ಶವ ಸುತ್ತಿ ಮಧ್ಯದಲ್ಲಿ ಇಟ್ಟುಕೊಂಡು ಭದ್ರಾವತಿ ಬೈಪಾಸ್ ರಸ್ತೆಗೆ ಹೋಗುತ್ತಾರೆ.
ಅಲ್ಲಿ ಮೃತನನ್ನು ರೋಡಲ್ಲಿ ಮಲಗಿಸಿ, ಬೈಕ್ನ್ನ ಸಹ ಅಲ್ಲಿಯೆ ಮಲಗಿಸ್ತಾರೆ, ಯಾರೆ ನೋಡಿದ್ರು ಇದು ಆಕ್ಸಿಡೆಂಟ್ ಎನ್ನುವಂತೆ ಚಿತ್ರಣ ನಿರ್ಮಿಸುತ್ತಾರೆ. ಬೆಡ್ಶೀಟ್ನ್ನ ಹೊಳೆಗೆ ಎಸೆದು ಸ್ನೇಹಿತರಿಗೊಂದು ಬಾಯ್ ಹೇಳಿ, ಧರ್ಮಸ್ಥಳಕ್ಕೆ ಹೋಗುತ್ತೇನೆ ಎಂದು ಬೈಪಾಸ್ ರಸ್ತೆಯಲ್ಲಿಯೇ ಬಸ್ ಹತ್ತುತ್ತಾನೆ. ಆದರೆ ಆತ ಧರ್ಮಸ್ಥಳಕ್ಕೆ ಹೋಗಿರುವುದಿಲ್ಲ, ಘಟನೆ ವಿಷಯ ತನ್ನ ಕಿವಿಗೆ ಪುನಃ ಬೀಳುತ್ತಲೇ ಆತ ತರಿಕೆರೆಯ ಸಲೂನ್ ಶಾಪ್ವೊಂದರಲ್ಲಿ ಫುಲ್ ಹೆಡ್ ಶೇವ್ ಮಾಡಿಕೊಂಡು, ಮತ್ತದೇ ಭದ್ರಾವತಿ ಬೈಪಾಸ್ ರಸ್ತೆಗೆ ಬಂದು ಇಳಿಯುತ್ತಾನೆ. ಅಲ್ಲಿಯೆ ನಡೆಯುತ್ತಿದ್ದ ವಿಚಾರಣೆಯಲ್ಲಿ ಸೈಲೆಂಟ್ ಆಗಿದ್ದು, ತಾನೆ ಪೊಲೀಸರಿಗೆ ಕ್ಲ್ಯೂ ಕೊಟ್ಟು ಸಿಕ್ಕಿಬೀಳುತ್ತಾನೆ. ಈತನಿಗೆ ಸಹಾಯ ಮಾಡಿದ ತಪ್ಪಿಗೆ ಇಬ್ಬರು ಸ್ನೇಹಿತರು ಸಹ ಶಿಕ್ಷೆಗೆ ಗುರಿಯಾಗುತ್ತಾರೆ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
