ಮೂಡಿಗೆರೆಯಲ್ಲಿ ಸಿಕ್ಕ ಕಾಡಾನೆಯನ್ನು ಕೇವಲ ಎರಡು ತಿಂಗಳಲ್ಲಿ ಪಳಗಿಸಿ ತರಬೇತಿ ನೀಡಿ ದಾಖಲೆ ಬರೆದ ಸಕ್ರೆಬೈಲು ಮಾವುತರು! JP EXCLUSIVE

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಸೆರೆಹಿಡಿದ ಕಾಡಾನೆ ಈಗ ಬಿಡಾರದ ಸಾಕಾನೆಯಾಗಿ ಪರಿವರ್ತನೆಯಾಗಿದೆ. ಅಂದು ರೈತರ ಹೊಲಗದ್ದೆಗಳಿಗೆ ಘೀಳಿಟ್ಟು ಬೆಳೆಹಾನಿ ಮಾಡಿದ ಆನೆ, ಇಂದು ಶಾಂತವಾಗಿ ಬಿಡಾರದಲ್ಲಿದೆ. ಸಾಮಾನ್ಯವಾಗಿ ಕಾಡಾನೆಗಳನ್ನು ಸೆರೆಹಿಡಿದು ಕ್ರಾಲ್ ನಲ್ಲಿ ಹಾಕಿದಾಗ ಅದನ್ನು ಪಳಗಿಸುವುದು ಅಷ್ಟು ಸುಲಭದ ಮಾತಲ್ಲ, ಆನೆಗಳ ವೈಲ್ಡ್ ಕ್ಯಾರೆಕ್ಟರ್ ಅನ್ನು ಶಾಂತತೆಗೆ ತರಬೇಕಾದ್ರೆ, ನುರಿತ ಮಾವುತ ಕಾವಾಡಿಗಳ ಪಾರಂಪಾರಿಕ ಕಲೆ ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಹೌದು ಒಂದೊಂದು ಆನೆಗಳ ಸ್ವಭಾವವು ಮನುಷ್ಯರಂತೆ ಭಿನ್ನವಾಗಿರುತ್ತದೆ. ಹೀಗಾಗಿ ಸೆರೆಹಿಡಿದ ಆನೆಗೆ ಖೆಡ್ಡಾ ದಲ್ಲಿ ಪಳಗಿಸಬೇಕಾದ್ರೆ. ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ. ಒಂದು ನಾಯಿ ಮನುಷ್ಯರ ಮಾತು ಕೇಳಬೇಕಾದರೆ ಕನಿಷ್ಠ ನಾಲ್ಕು ತಿಂಗಳ ತರಬೇತಿಯಾದ್ರೂ ನೀಡಬೇಕಾಗುತ್ತದೆ. ಅಂತದ್ರಲ್ಲಿ ಸಕ್ರೆಬೈಲು ಮಾವುತರು ಮೂಡಿಗೆರೆಯಲ್ಲಿ ಸೆರೆ ಹಿಡಿದ ಆನೆಯನ್ನು ಕೇವಲ ಎರಡು ತಿಂಗಳಲ್ಲಿ ಪಳಗಿಸಿ ಹೊಸ ದಾಖಲೆ ಬರೆದಿದ್ದಾರೆ. 

Malenadu Today

ಹೇಗೆ ಸಾಧ್ಯ

ಕಾಡಾನೆಗಳನ್ನು ಸೆರೆಹಿಡಿದಾಗ ಅದನ್ನು ಕ್ರಾಲ್ ನಲ್ಲಿ ಪಳಗಿಸುವ ಸಂದರ್ಭದಲ್ಲಿ ಅದನ್ನು ದಿನದ 24 ಗಂಟೆ ನೋಡಿಕೊಳ್ಳಲು ಕಾವಾಡಿ ಮತ್ತು ಮಾವುತ ನೇಮಕವಾಗುತ್ತಾನೆ. ಕಾಡಾನೆಗೆ ತರಬೇತಿ ನೀಡಲು ಹಗಲು ರಾತ್ರಿ ಶ್ರಮವಹಿಸುತ್ತಾರೆ. ಅವುಗಳ ಎದುರು ಹಗಲು ರಾತ್ರಿ ಮಾವುತ ಮತ್ತು ಕಾವಾಡಿ ಇದ್ದು ಆರೈಕೆ ಮಾಡಬೇಕಾಗಿದೆ. ಸದಾ ಎದುರಿನಲ್ಲಿರುವ ವ್ಯಕ್ತಿ ನೀಡುವ ಆಹಾರ. ಅವನು ಮಾಡುವ ಆದೇಶಗಳನ್ನು ಕ್ರಮೇಣ ಕಲಿಯುವ ಕಾಡಾನೆ…ನಂತರದ ದಿನಗಳಲ್ಲಿ ಹೊಂದಾಣಿಕೆ ಸ್ವಭಾವವನ್ನು ರೂಢಿಸಿಕೊಳ್ಳುತ್ತದೆ. ಉರ್ದು ಮತ್ತು ಬಾಂಗ್ಲಾ ಭಾಷೆ ಮಿಶ್ರಿತ ಪದಗಳೇ ಆನೆಗಳ ಆದೇಶ ಪಾಲನೆಗೆ ಹೇಳಿಕೊಡಲಾಗುತ್ತದೆ. ಜನಪದ ಹಾಡಿನ ಮೂಲಕವೂ ಆನೆಯ ಪ್ರೀತಿ ಗಳಿಸುವಲ್ಲಿ ಮಾವುತರು ಪ್ರಮುಖ ಪಾತ್ರ ವಹಿಸುತ್ತಾರೆ. ಯಾವಾಗ ಆನೆ ಖೆಡ್ಡಾದಲ್ಲಿದ್ದುಕೊಂಡೇ ಮಾವುತನ ಆದೇಶ ಪಾಲನೆ ಮಾಡುತ್ತದೋ..ನಂತರ ಅದನ್ನು ಖೆಡ್ಡಾದಿಂದ ಹೊರ ತೆಗೆಯಲಾಗುತ್ತದೆ.ಈ ಕ್ಷಣ ಮಾವುತರಿಗೆ ಸಂತೋಷದ ಕ್ಷಣವಾಗಿರುತ್ತದೆ. ಬಹಳ ಎಚ್ಚರಿಕೆಯಿಂದ ಆನೆಯನ್ನು ಹೊರತಂದು ಕಟ್ಟುತ್ತಾರೆ. ಆಗ ಅದು ಬಿಡಾರದ ಅಧಿಕೃತ ಸಾಕಾನೆಯಾಗುತ್ತದೆ.

Leave a Comment